ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ತಡೆಗಟ್ಟಲು ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಸರ್ಕಾರ ಅದೇಶ ಹೊರಡಿಸಿತ್ತು. ಆದ್ರೆ ವ್ಯಾಕ್ಸಿನ್‌ಗಾಗಿ ಮೊದಲ ದಿನದಿಂದಲೂ ರಾಜಧಾನಿಯಲ್ಲಿ ಎಲ್ಲೆಡೆ ಹಾಹಾಕಾರ ಶುರುವಾಗಿದೆ. ಲಸಿಕೆ ಬಂದು ತಿಂಗಳುಗಳೇ ಕಳೆದರೂ ಎಲ್ಲರಿಗೂ ವ್ಯಾಕ್ಸಿನ್ ಸಿಗುತ್ತಿಲ್ಲ.
ಕೆಸಿ ಜನರಲ್ ಆಸ್ಪತ್ರೆಯಲ್ಲಿ ವ್ಯಾಕ್ಸಿನ್ ಕೇಂದ್ರ ಆರಂಭವಾದಾಗಿನಿಂದ, ಗಲಾಟೆಗಳು ನಡೆಯುತ್ತಲೇ ಇವೆ. ಇದೀಗ ಸರ್ಕಾರ 18 ವರ್ಷ ಮೇಲ್ಪಟ್ಟವರೂ ಕೂಡ ಲಸಿಕೆ ಪಡೆಯಬಹುದು ಎಂಬ ಆದೇಶ ಹೊರಡಿಸಿದ ನಂತರ ವ್ಯಾಕ್ಸಿನ್‌ಗಾಗಿ ಹಾಹಾಕಾರ ಮತ್ತಷ್ಟು ಹೆಚ್ಚಾಗಿದೆ.
ಲಸಿಕಾ ಕೇಂದ್ರಗಳ ಎದುರು ಸಾರ್ವಜನಿಕರು ಲಸಿಕೆ ಸಿಗದೇ ಗಲಾಟೆ ಮಾಡುತ್ತಿದ್ದಾರೆ. ಈ ಸಂಜೀವಿನಿಗಾಗಿ ಗಂಟೆಗಟ್ಟಲೇ ಕ್ಯೂ ನಲ್ಲಿ ನಿಂತರೂ ಸಹ ಲಸಿಕಾ ಕೇಂದ್ರಗಳ ಎದುರು ಔಟ್ ಆಫ್ ಸ್ಟಾಕ್ ಎಂಬ ಬೋರ್ಡ್ ಮಾತ್ರ ಕಾಣುತ್ತದೆ. ಕ್ಯೂ ನಿಂತ ಜನ ಈ ಬೋರ್ಡ್ ನೋಡಿ ಕಂಗಾಲಾಗುತ್ತಿದ್ದಾರೆ. ಬೆಳಗ್ಗೆ 5-6 ಗಂಟೆಯಿಂದಲೇ ಕ್ಯೂ ನಲ್ಲಿ ಜನ ನಿಲ್ಲುತ್ತಾರೆ. ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆ ಸ್ಟಾಕ್ ಇಲ್ಲ ಅಂತ ಸಿಬ್ಬಂದಿ ಬೋರ್ಡ್ ಹಾಕುತ್ತಿದ್ದಾರೆ. ಹೀಗಾಗಿ ಆಕ್ರೋಶಗೊಂಡ ಸಾರ್ವಜನಿಕರು ಆಸ್ಪತ್ರೆಯ ಸಿಬ್ಬಂದಿ ಜೊತೆ ವಾಗ್ವಾದಕ್ಕಿಳಿದಿದ್ದಾರೆ.