ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಏರಿಕೆ ಆಗುತ್ತಲಿದ್ದು, ಸಾಂಸ್ಥಿಕರ ಕ್ವಾರಂಟೈನ್ನಲ್ಲಿ ಸದ್ಯ 1.9 ಲಕ್ಷ ಜನರು ಮತ್ತು 10 ಸಾವಿರ ಜನ ಹೋಮ್ ಕ್ವಾರಂಟೈನ್ನಲ್ಲಿದ್ದಾರೆ.
ರಾಜ್ಯದಲ್ಲಿ ಹೊರರಾಜ್ಯ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರಿಂದ ಕೊರೊನಾ ಸೋಂಕಿತರ ಪ್ರಮಾಣ ಏರಿಕೆ ಆಗುತ್ತಿದೆ. ಇಂದು ಹೊಸದಾಗಿ ಪತ್ತೆಯಾಗಿರುವ 101 ಪ್ರಕರಣಗಳಲ್ಲಿ 85 ಮಂದಿ ಹೊರ ರಾಜ್ಯ ಹಾಗೂ ಹೊರ ದೇಶಗಳಿಂದ ಬಂದವರೇ ಆಗಿದ್ದು, ಸೋಂಕಿತರ ಸಂಖ್ಯೆ ಒಟ್ಟು 2, 283ಕ್ಕೆ ಏರಿಕೆಯಾಗಿದೆ.
ಲಾಕ್‌ಡೌನ್ ಸಡಿಲಿಕೆಯ ಬಳಿಕ ಪತ್ತೆಯಾಗುತ್ತಿರುವ ಸೋಂಕಿತರಲ್ಲಿ ಶೇ 80ರಷ್ಟು ಜನ ಹೊರ ಪ್ರದೇಶಗಳಿಂದ ಬರುತ್ತಿರುವವರು ಹೆಚ್ಚು. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಿರುವುದರಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಪೂರ್ಣ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಕೋವಿಡ್-19 ಸೋಂಕಿತರಿಗಾಗಿ ರಾಜ್ಯಾದ್ಯಂತ 28,689 ಬೆಡ್‌ಗಳನ್ನು ಸಿದ್ಧಗೊಳಿಸಲಾಗಿದೆ. ಈಗಾಗಲೇ ರಾಜ್ಯದಲ್ಲಿ 2,28,914 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಅವರಲ್ಲಿ 2,283 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಸೋಂಕಿನ ಪ್ರಮಾಣ ಕೇವಲ ಶೇ 1ರಷ್ಟು ಕಂಡು ಬಂದಿರುವುದು ನಿಟ್ಟುಸಿರು ಬಿಡುವಂತಾಗಿದೆ.