ಬೆಂಗಳೂರು :ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗ್ತಿದೆ. ಇದರ ಜೊತೆಗೆ ಉದ್ಯಾನ ನಗರಿ ಬೆಂಗಳೂರು ಹೆಚ್ಚು ಆತಂಕ ಮೂಡಿಸುತ್ತಿದೆ. ಯಾಕೆಂದ್ರೆ, ಬೆಂಗಳೂರಿನಲ್ಲಿ ಕೊರೊನಾ ವೈರಸ್ ಹೆಚ್ಚಿನ ಜನರನ್ನು ಬಲಿ ಪಡೆದುಕೊಳ್ಳುತ್ತಿದೆ. ಇತರೆ ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾದರೂ ಸಾವಿನ ಸಂಖ್ಯೆ ಕಡಿಮೆ. ಆದರೆ, ಬೆಂಗಳೂರಿನಲ್ಲಿ 5 ರಿಂದ 10 ಪಾಸಿಟಿವ್ ಕೇಸ್ ಪತ್ತೆಯಾಗುತ್ತಿದ್ರೂ ಕೊರೊನಾಗೆ ಬಲಿಯಾಗುವವರ ಸಂಖ್ಯೆ ಏರುತ್ತಿದೆ.
ದಿನೇದಿನೆ ಬೆಂಗಳೂರಿಗೆ ಕೊರೊನಾ ಕಾಟ ಜಾಸ್ತಿಯಾಗ್ತಿದೆ. ಕಳೆದ ಐದು ದಿನಗಳಲ್ಲಿ ಬೆಂಗಳೂರಿನ ಚಿತ್ರಣ ಬದಲಾಗಿದೆ. ಡೇಂಜರ್ ಝೋನ್ ಕಡೆ ಸಿಲಿಕಾನ್ ಸಿಟಿ ಹೋಗುತ್ತಿದೆಯಾ ಎಂಬ ಆತಂಕ ಹೆಚ್ಚಾಗ್ತಿದೆ. ಪಾಸಿಟಿವ್ ಕೇಸ್ಗಳು ಹೆಚ್ಚಾಗಿ, ಸ್ಥಳೀಯವಾಗಿ ಸೋಂಕು ಹರಡುವ ಸಂಖ್ಯೆ ಹೆಚ್ಚಾಗಿದ್ದು ಅಲ್ಲದೇ ಕೊರೊನಾ ಸಾವಿನ ಮುನ್ಸೂಚನೆ ನೀಡಿದೆ. ಗಲ್ಲಿ ಗಲ್ಲಿಗಳಲ್ಲಿ ಕೊರೊನಾ ಹರಡುತ್ತಿದ್ದು, ಕಂಟೇನ್ಮೆಂಟ್ ಝೋನ್ಗಳು ಹೆಚ್ಚಾಗಿವೆ. ಕಳೆದ 5 ದಿನಗಳಲ್ಲಿ ಬೆಂಗಳೂರಿನಲ್ಲಿ 155 ಕೇಸ್ ಪತ್ತೆಯಾಗಿವೆ ಹಾಗೂ 18 ಸಾವು ಸಂಭವಿಸಿವೆ. 52 ಹೊಸ ಕಂಟೇನ್ಮೆಂಟ್ ಝೋನ್ಗಳು ಸೃಷ್ಟಿಯಾಗಿವೆ.
ಬೆಂಗಳೂರು ನಗರದ ಒಂದರಲ್ಲೇ ಕಳೆದ ಐದು ದಿನಗಳಲ್ಲಿ 18 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ.
- ಜೂನ್ 9 ರಂದು 1 ಸಾವು
- ಜೂನ್ 10 ರಂದು 2 ಸಾವು
- ಜೂನ್ 11 ರಂದು 2 ಸಾವು
- ಜೂನ್ 12 ರಂದು 6 ಸಾವು
- ಜೂನ್ 13 ರಂದು 7 ಸಾವು