ಬೆಂಗಳೂರು :ರಾಜ್ಯದಲ್ಲಿ ಕೊರೊನಾ ಸೋಂಕು ತೀವ್ರ ಇಳಿಕೆಯಾಗಿದೆ. ಕಳೆದ ಹಲವು ದಿನಗಳಿಂದ ಇದರ ಪ್ರಮಾಣ ಶೇ.1ರೊಳಗೆ ಇದೆ. ಸಾಮಾನ್ಯ ಅಂತಾರಾಷ್ಟ್ರೀಯ ಪ್ರಯಾಣಿಕರ ಓಡಾಟ ಹೆಚ್ಚಾಗಿದ್ದರೂ ಸೋಂಕಿತರ ಸಂಖ್ಯೆ ನಿಯಂತ್ರಣದಲ್ಲಿದೆ.
ಇಂದು ವಿಮಾನ ನಿಲ್ದಾಣದಲ್ಲಿ ಸುಮಾರು 10,828 ಪ್ರಯಾಣಿಕರು ಆಗಮಿಸಿ ಕೊರೊನಾ ತಪಾಸಣೆಗೆ ಒಳಪಟ್ಟಿದ್ದಾರೆ. ಯುಕೆಯಿಂದ 1290 ಪ್ರಯಾಣಿಕರು ಆಗಮಿಸಿದ್ದಾರೆ. ರೂಪಾಂತರಿ ಸೋಂಕು ಈ ಪ್ರಯಾಣಿಕರಿಂದ ಹರಡುವ ಸಾಧ್ಯತೆ ಹೆಚ್ಚಿರುತ್ತೆ. ಆದರೆ, ರಾಜ್ಯದಲ್ಲಿ ಪಾಸಿಟಿವ್ ದರ ಹಾಗೂ ಸಾವಿನ ಪ್ರಮಾಣ ಒಂದೇ ಹಂತದಲ್ಲಿದೆ.
ರಾಜ್ಯದಲ್ಲಿಂದು 1,03,121 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 378 ಮಂದಿಗೆ ವೈರಸ್ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 29,85,227 ಏರಿಕೆ ಆಗಿದೆ. ಇತ್ತ 465 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 29,38,312 ಗುಣಮುಖರಾಗಿದ್ದಾರೆ. 11 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 37,995ಕ್ಕೆ ಏರಿಕೆ ಆಗಿದೆ.
5 ಜಿಲ್ಲೆಗಳಲ್ಲಷ್ಟೇ ಸೋಂಕಿತರು ಮೃತರಾಗಿದ್ದಾರೆ. ಉಳಿದಂತೆ ಎಲ್ಲ ಜಿಲ್ಲೆಯಲ್ಲೂ ಶೂನ್ಯ ದಾಖಲಾಗಿದೆ. ಸದ್ಯ ಪ್ರಕರಣಗಳು ಇಳಿಕೆಯಾಗುತ್ತಿವೆ. ಸಕ್ರಿಯರಾಗಿರುವ 8891 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತರ ಪ್ರಮಾಣ ಶೇ.0.36% ರಷ್ಟಿದ್ದರೆ, ಸಾವಿನ ಪ್ರಮಾಣ 2.91%ರಷ್ಟಿದೆ.