ಬೆಂಗಳೂರು:ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಕಡಿಮೆ ಆಗುತ್ತಿದೆ. ಇನ್ನೇನು ಲಾಕ್‍ಡೌನ್ ಮೇ 3ಕ್ಕೆ ಅಂತ್ಯಗೊಳ್ಳಬಹುದು, ನಿತ್ಯದಂತೆ ಬದುಕಬಹುದು ಎಂದುಕೊಳ್ಳುವವರಿಗೆ ದಿನಕ್ಕೊಂದು ಆತಂಕ ಎದುರಾಗುತ್ತಲೇ ಇದೆ.
ಈಗಾಗಲೇ ನಗರದ ಕೆಲವೆಡೆ ಸಲೂನ್ಗಳು ಅನಧಿಕೃತವಾಗಿ ತೆರೆದಿದೆ. ಎಲ್ಲವನ್ನೂ ತೆರೆಯಲು ಅಧಿಕೃತ ಆದೇಶ ಹೊರಡಿಸಬೇಕೆಂಬ ಒತ್ತಡವೂ ಹೆಚ್ಚಾಗುತ್ತಿದೆ. ಪ್ರತಿಯೊಬ್ಬರ ತಲೆಯೂ ದಿನದಿಂದ ದಿನಕ್ಕೆ ಭಾರವಾಗುತ್ತಾ ಸಾಗಿದ್ದು, ಸಲೂನ್ ತೆರೆದರೆ ಸಾಕಪ್ಪ ಅನ್ನುವ ಸ್ಥಿತಿಯಲ್ಲಿ ಹಲವರಿದ್ದಾರೆ. ಆದರೆ, ದಿನಕ್ಕೊಂದು ಸುದ್ದಿ ಜನರನ್ನು ಆತಂಕಕ್ಕೆ ಈಡು ಮಾಡುತ್ತಿದೆ. ಕರೋನಾ ಭೀತಿಯಿಂದ ಇರುವ, ಬರುವ ಕೆಲಸ ಬಿಟ್ಟು ಮನೆಯಲ್ಲೇ ಕುಳಿತವರಿಗೆ ಇದೀಗ ಕೂದಲು ಕತ್ತರಿಸಿಕೊಳ್ಳಲು ತೆರಳೋಣ ಎಂದರೆ ಅದಕ್ಕೂ ಆತಂಕ ಎದುರಾಗಿದೆ. ಕಾರಣ ಪಕ್ಕದ ತಮಿಳುನಾಡಿನಲ್ಲಿ ಹೇರ್ ಕಟಿಂಗ್ ಸಲೂನ್ ಮಾಲೀಕನಿಗೇ ಕೊರೊನಾ ವಕ್ಕರಿಸಿದೆ.
ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶದಲ್ಲಿ ಸಲೂನ್‍ಗೆ ತೆರಳಿದ್ದವರಿಗೆ, ಕೂದಲು ಕತ್ತರಿಸುವ ವೃತ್ತಿ ನಡೆಸುತ್ತಿದ್ದವರಿಗೆ ಕೊರೊನಾ ಆಕ್ರಮಿಸಿದ ಸುದ್ದಿ ಆತಂಕ ಮೂಡಿಸಿದ್ದು, ಇತ್ತೀಚೆಗೆ ಅಂತಹ ಸುದ್ದಿ ಕೇಳದೇ ಕೆಲವರ ಮನಸ್ಸು ಕೊಂಚ ನಿರಾಳವಾಗಿತ್ತು. ಆದರೆ ಇದೀಗ ತಮಿಳುನಾಡಿನ ಪ್ರಕರಣ ರಾಜ್ಯ ಹಾಗೂ ಮಹಾನಗರದ ಜನರನ್ನು ಇನ್ನಷ್ಟು ಕಂಗೆಡಿಸಿದೆ.
ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲಾ ಅರಸವರಲ್ಲಿ ಗ್ರಾಮದಲ್ಲಿ ಕೊರೊನಾ ಸೋಂಕಿತ ವ್ಯಕ್ತಿಗೆ ಕ್ಷೌರ ಮಾಡಿದ್ದ ಸವಿತಾ ಸಮಾಜದ ವ್ಯಕ್ತಿಗೆ ಕೊರೊನಾ ಸೋಕು ಹರಡಿತ್ತು. ಕ್ಷೌರಿಕನಿಂದ ಕಟಿಂಗ್ ಮಾಡಿಸಿಕೊಂಡ ಗ್ರಾಹಕರಾದ ನಾಲ್ವರಿಗೂ ಸೋಂಕು ನಂತರದ ದಿನದಲ್ಲಿ ದೃಢಪಟ್ಟಿದ್ದು, ಭಾರೀ ಆತಂಕ ಮೂಡಿಸಿತ್ತು.