ಬೆಂಗಳೂರು: ಕೋವಿಡ್-19 ಪರೀಕ್ಷೆ ನಡೆಸಿದ ಬಳಿಕ ವರದಿ ನೀಡಲು ವಿಳಂಬವಾಗುತ್ತಿರುವುದೇಕೆ? ಹೀಗೆ ವರದಿ ವಿಳಂಬವಾಗುವುದು ಸೋಂಕು ವ್ಯಾಪಿಸಲು ಕಾರಣವಾಗುವುದಿಲ್ಲವೇ? ಎಂದು ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಯನ್ನು ಪ್ರಶ್ನಿಸುತ್ತಲೇ ಹೈಕೋರ್ಟ್ ಆಂತಕ ವ್ಯಕ್ತಪಡಿಸಿದೆ.
ಕೊರೊನಾ ಸೋಂಕಿಗೆ ಸಕಾಲದಲ್ಲಿ ಚಿಕಿತ್ಸೆ ಸಿಗದೆ ರೋಗಿಗಳು ಸಾವನ್ನಪ್ಪುತ್ತಿದ್ದಾರೆ. ಆಸ್ಪತ್ರೆಗಳಲ್ಲಿಯೂ ಹಾಸಿಗೆಗಳ ಕೊರತೆ ಇದೆ ಎಂದು ವಕೀಲೆ ಗೀತಾ ಮಿಶ್ರಾ ಸೇರಿದಂತೆ ಹಲವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ಶುಕ್ರವಾರ ವಿಚಾರಣೆ ನಡೆಸಿತು.
ಈ ವೇಳೆ ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿದ ಪೀಠ, ನ್ಯಾಯಾಧೀಶರೊಬ್ಬರ ತಂದೆಗೆ ಕೊರೊನಾ ಸೋಂಕು ತಗುಲಿದೆ. ಇದರಿಂದ ನ್ಯಾಯಾಧೀಶರ ವಸತಿ ಸಮುಚ್ಚಯದ 14 ನ್ಯಾಯಾಧೀಶರು ಕ್ವಾರಂಟೈನ್ ಆಗಿದ್ದಾರೆ. ಜುಲೈ 4ರಂದೇ ಪರೀಕ್ಷೆ ಮಾಡಿಸಿದರೂ ವರದಿ ಬಂದಿಲ್ಲ. ಇವರಿಗೇ ಹೀಗಾದರೆ ಜನಸಾಮಾನ್ಯರು ಪರೀಕ್ಷೆ ಮಾಡಿಸಿದರೆ ವರದಿ ಬರಲು ಎಷ್ಟು ಸಮಯ ಬೇಕು? ಎಂದು ಕೇಳಿತು. ಅಲ್ಲದೆ ಶಂಕಿತ ರೋಗಿಗಳು ಪರೀಕ್ಷೆ ಬಳಿಕ ಮನೆಗೆ ಹೋಗಿ ಕುಟುಂಬದ ಸದಸ್ಯರೊಂದಿಗೆ ಇರುತ್ತಾರೆ. ಅನೇಕ ದಿನ ಕಳೆದ ನಂತರ ವರದಿಯು ಪಾಸಿಟಿವ್ ಎಂದು ಬಂದರೆ, ಅಷ್ಟರಲ್ಲೇ ಸೋಂಕಿತ ವ್ಯಕ್ತಿಯ ಕುಂಟುಂಬದ ಇತರ ಸದಸ್ಯರಿಗೂ ಕೊರೊನಾ ಹರಡಿರುತ್ತದೆ. ಇದನ್ನು ಹೇಗೆ ನಿಯಂತ್ರಿಸಲಾಗುತ್ತದೆ? ವರದಿ ಪಾಸಿಟಿವ್ ಬಂದರೆ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲು ಎಷ್ಟು ಸಮಯ ಬೇಕು ಎಂದು ಪ್ರಶ್ನಿಸಿತು.
ಕೊರೊನಾಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳು ಮತ್ತು ಅವುಗಳಲ್ಲಿರುವ ಖಾಲಿ ಹಾಸಿಗೆಗಳ ವಿವರಗಳನ್ನು ಪಡೆದುಕೊಳ್ಳಲು ಅನುಕೂಲವಾಗುವಂತೆ ಒಂದು ಕೇಂದ್ರೀಕೃತ ವೆಬ್ಸೈಟ್ ಆರಂಭಿಸಲು ಕ್ರಮ ಕೈಗೊಳ್ಳಿ ಎಂದು ಸರ್ಕಾರಕ್ಕೆ ಪೀಠ ಸಲಹೆ ನೀಡಿತು. ಜತೆಗೆ ಆರಂಭಿಸಿರುವ ವೆಬ್ಸೈಟ್ನಲ್ಲಿ ಆಗಿಂದಾಗ್ಗೆ ಖಾಲಿ ಹಾಸಿಗೆಗಳು ಲಭ್ಯವಿರುವ ಆಸ್ಪತ್ರೆಗಳ ವಿವರ ಕೊಡಬೇಕು. ಈ ಬಗ್ಗೆ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲೂ ಮಾಹಿತಿ ಒದಗಿಸಬೇಕು ಎಂದು ಸರ್ಕಾರ ಹಾಗೂ ಬಿಬಿಎಂಪಿಗೆ ಸೂಚಿಸಿ, ಜುಲೈ 13ಕ್ಕೆ ವಿಚಾರಣೆ ಮುಂದೂಡಿತು.