ದೇವನಹಳ್ಳಿ: ಯುಕೆಯಲ್ಲಿ ಕೊರೊನಾ ವೈರಸ್ನ ಎರಡನೇ ಅಲೆ ಪ್ರಾರಂಭವಾದ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶದಿಂದ ಬರುವ ಪ್ರಯಾಣಿಕರನ್ನು ಕಡ್ಡಾಯವಾಗಿ ಲ್ಯಾಬ್ ಟೆಸ್ಟ್ಗೆ ಒಳಪಡಿಸಲಾಗುತ್ತಿದೆ. ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವ ಎನ್ಎಬಿಎಲ್ ಮತ್ತು ಐಸಿಎಂಆರ್ ಪ್ರಮಾಣೀಕೃತ ಪರೀಕ್ಷಾ ಸೌಲಭ್ಯವನ್ನು ಪ್ರಯಾಣಿಕರಿಗೆ ನೀಡಲಾಗುತ್ತಿದೆ.15 ನಿಮಿಷದಲ್ಲಿ ಟೆಸ್ಟ್ ವರದಿ ಪ್ರಯಾಣಿಕರಿಗೆ ಸಿಗಲಿದೆ.
ಕೆಐಎಎಲ್ನಲ್ಲಿ ಆರ್.ಟಿ.ಪಿ.ಸಿ.ಆರ್ ಸೌಲಭ್ಯ ಆರಂಭ ಯುಕೆಯಲ್ಲಿ ಕೊರೊನಾ ವೈರಸ್ನ ಎರಡನೇ ಅಲೆ ಪ್ರಾರಂಭವಾಗಿದ್ದು, ಕರ್ನಾಟಕ ಸರ್ಕಾರದ ನಿರ್ದೇಶನದಂತೆ ವಿದೇಶದಿಂದ ಬರುವ ಪ್ರಯಾಣಿಕರನ್ನ ಕಡ್ಡಾಯವಾಗಿ ಕೋವಿಡ್ ಟೆಸ್ಟ್ಗೆ ಒಳಪಡಿಸಲಾಗುತ್ತಿದೆ. ಇದಕ್ಕಾಗಿ ದಿನದ 24 ಗಂಟೆ ಕಾರ್ಯನಿರ್ವಹಿಸುವ ಕೋವಿಡ್-19 ಪರೀಕ್ಷಾ ಸೌಲಭ್ಯವನ್ನು ಏರ್ ಪೋರ್ಟ್ನಲ್ಲಿ ಆರಂಭಿಸಲಾಗಿದೆ. ಟರ್ಮಿನಲ್ನ ಒಳಗೆ ಮಾದರಿ ಸಂಗ್ರಹಿಸುವ ಕಿಯಾಸ್ಕ್ ಇರುತ್ತೆ, ಕೆಂಪೇಗೌಡ ವಿಮಾನ ನಿಲ್ದಾಣ ಟರ್ಮಿನಲ್ ಹೊರಗಡೆ ಅತ್ಯಾಧುನಿಕ ಮತ್ತು ಉತ್ತಮ ಗುಣಮಟ್ಟದ ಪ್ರಯೋಗಾಲಯ ಇರುತ್ತದೆ.
ವಿಮಾನ ನಿಲ್ದಾಣದಲ್ಲಿ ಕೋವಿಡ್-19 ಸುರಕ್ಷತಾ ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಪ್ರಯಾಣಿಕರು ಪಾಲಿಸಬೇಕಿದೆ. ಪ್ರಯಾಣಿಸುವ ಮುನ್ನ ಕೋವಿಡ್ ಟೆಸ್ಟ್ಗೆ ಒಳಗಾಗದ ಮತ್ತು ವಿದೇಶದಿಂದ ಬೆಂಗಳೂರಿಗೆ ಬರುವ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಪ್ರಾರಂಭವಾಗಿರುವ ಕೋವಿಡ್ -19 ಆರ್ಟಿ -ಪಿಸಿಆರ್ ಟೆಸ್ಟ್ ಸೌಲಭ್ಯ ಪಡೆಯಬಹುದು. ಹಾಗೆಯೇ ಬೆಂಗಳೂರಿನಿಂದ ಪ್ರಯಾಣಿಸುವ ಮತ್ತು ಹೋಗುವ ಸ್ಥಳದಲ್ಲಿ ಆರ್ಟಿ-ಪಿಸಿಆರ್ ಟೆಸ್ಟ್ ಸೌಲಭ್ಯ ಇದ್ಲದವರು ಸಹ ಇದನ್ನು ಪಡೆಯಬಹುದಾಗಿದೆ.
15 ನಿಮಿಷದಲ್ಲಿ ಪ್ರಯಾಣಿಕರ ಕೈಗೆ ಸಿಗಲಿದೆ ಪರೀಕ್ಷಾ ವರದಿ:
ಭಾರತದಲ್ಲಿ ಮೊದಲ ಬಾರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಾಗತಿಕವಾಗಿ ಮಾನ್ಯತೆ ಪಡೆದಿರುವ ಆ್ಯಬಾಟ್ ಐಡಿ ನೌ ಟೆಸ್ಟ್ ಸೌಲಭ್ಯ ಕೊಡಲಾಗಿದೆ. ಇದರಲ್ಲಿ ಕೇವಲ 15 ನಿಮಿಷದಲ್ಲಿ ಆರ್.ಟಿ.ಪಿ.ಸಿ.ಆರ್. ಪರೀಕ್ಷಾ ವರದಿಯನ್ನು ಪ್ರಯಾಣಿಕರಿಗೆ ನೀಡಲಾಗುತ್ತೆ.
ಓದಿ:ಕೊರೊನಾ ವ್ಯಾಕ್ಸಿನ್ ನೀಡಲು ಫೈನಲ್ ಲಿಸ್ಟ್ ಅಪ್ಲೋಡ್ ಮಾಡುತ್ತಿದೆ ಬಿಬಿಎಂಪಿ
ಸಾಮಾನ್ಯ ಆರ್.ಟಿ.ಪಿ.ಸಿ.ಆರ್. ಪರೀಕ್ಷೆ ವರದಿ ಪಡೆಯಲು ಆರು ಗಂಟೆಗಳ ಸಮಯ ಬೇಕಾಗುತ್ತದೆ. ಪರೀಕ್ಷೆಯ ಫಲಿತಾಂಶಗಳು ಬರುವವರೆಗೆ ಈ ಪರೀಕ್ಷೆಗೆ ಒಳಗಾದ ಜನರು ವಿಶೇಷವಾಗಿ ಗುರುತಿಸಲಾದ ಪ್ರದೇಶದಲ್ಲಿ ಕಾಯ್ದುಕೊಂಡಿರಬೇಕಾಗುತ್ತದೆ. ಪರೀಕ್ಷೆಗೆ ಒಳಗಾದವರೊಂದಿಗೆ ನೇರವಾಗಿ ಪರೀಕ್ಷಾ ವರದಿಗಳನ್ನು ಡಿಜಿಟಲ್ ವೇದಿಕೆಗಳ ಮೂಲಕ ಹಂಚಿಕೊಳ್ಳಲಾಗುತ್ತದೆ. ಸರ್ಕಾರದ ಅವಶ್ಯಕತೆಗಳಿಗೆ ತಕ್ಕಂತೆ ಎಲ್ಲ ಮಾದರಿಗಳ ಫಲಿತಾಂಶಗಳನ್ನು ಐ.ಸಿ.ಎಂ.ಆರ್. ವೆಬ್‍ಸೈಟ್‍ನಲ್ಲಿ ನೋಂದಣಿ ಮಾಡಲಾಗುವುದು.
- ಆರ್.ಟಿ.ಪಿ.ಸಿ.ಟಿ ಎಕ್ಸ್ಪ್ರೆಸ್ ಟೆಸ್ಟ್ಗಾಗಿ 5000 ರೂಪಾಯಿ ಪಾವತಿಸಬೇಕು. ಇದರ ವರದಿ 13 ನಿಮಿಷದಲ್ಲಿ ಸಿಗಲಿದೆ.
- ಆರ್.ಟಿ.ಪಿ.ಸಿ.ಆರ್. (ಸ್ಪೆಷಲ್ ಟರ್ನ್ ಅರೌಂಡ್) ಟೆಸ್ಟ್ಗೆ 2,500 ರೂ.- ವರದಿಗೆ 5 ರಿಂದ 6 ಗಂಟೆ ಕಾಯಬೇಕು.
- ಆರ್.ಟಿ.ಪಿ.ಸಿ.ಆರ್ (ಸಾಮಾನ್ಯ) ಟೆಸ್ಟ್ಗಾಗಿ 800 ರೂ.- ವರದಿ ಸಿಗಲು 24 ಗಂಟೆ ಕಾಯಬೇಕು.
- ಆ್ಯಸ್ಟರ್ ಏರ್‍ಪೋರ್ಟ್ ಮೆಡಿಕಲ್ ಸೆಂಟರ್ನಲ್ಲಿ ಆರ್.ಟಿ.ಪಿ.ಸಿ.ಆರ್ ಟೆಸ್ಟ್ಗಾಗಿ 1,200 ರೂಪಾಯಿ ಪಾವತಿಸಿದ್ರೆ, 24 ಗಂಟೆಯಲ್ಲಿ ವರದಿ ಸಿಗಲಿದೆ.
ಆರ್.ಟಿ.ಪಿ.ಸಿ.ಆರ್ ಟೆಸ್ಟ್ನಲ್ಲಿ ಪಾಸಿಟಿವ್ ಬಂದರೆ ಪ್ರಯಾಣಿಕರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕಳಿಸಲಾಗುತ್ತದೆ ಮತ್ತು ವರದಿ ನೆಗೆಟಿವ್ ಬಂದರೆ 14 ದಿನಗಳ ಹೋಮ್ ಕ್ವಾರಂಟೈನ್ಗೆ ಒಳಗಾಗಬೇಕು.