ಬೆಂಗಳೂರು: ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆ ಪ್ರಕರಣ ಸಂಬಂದಿಸಿದಂತೆ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ಬೆಂಕಿ ಇಟ್ಟ ಪ್ರಕರಣದಲ್ಲಿ ಮಾಜಿ ಮೇಯರ್ ಸಂಪತ್ ರಾಜ್ ಆರೋಪಿಯಾಗಿದ್ದು, ಸದ್ಯ 3ನೇ ಬಾರಿಗೆ ಕೊರೊನಾ ಪಾಸಿಟಿವ್ ಆಗಿದೆ ಎಂದು ಮತ್ತೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆ.
ಮಾಜಿ ಮೇಯರ್ ಸಂಪತ್ ರಾಜ್ಗೆ 3ನೇ ಬಾರಿ ಕೊರೊನಾ ಪಾಸಿಟಿವ್ - Bangalore riot case
ಬೆಂಗಳೂರು ಗಲಭೆ ಪ್ರಕರಣದ ಪ್ರಮುಖ ಆರೋಪಿ ಮಾಜಿ ಮೇಯರ್ ಸಂಪತ್ ರಾಜ್ ಅವರಿಗೆ 3ನೇ ಬಾರಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈ ಬಗ್ಗೆ ಖಾಸಗಿ ಆಸ್ಪತ್ರೆಯವರು ಸಿಸಿಬಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಕೊರೊನಾ ಸೋಂಕಿಗೆ ತುತ್ತಾದರೆ 14 ದಿನ, 20 ದಿನ ಅಥವಾ ಒಂದು ತಿಂಗಳಿನಲ್ಲಿ ಗುಣಮುಖರಾಗಬಹುದು. ಆದರೆ ಎರಡು ತಿಂಗಳಾದರೂ ಮಾಜಿ ಮೇಯರ್ ಸಂಪತ್ ರಾಜ್ ಅವರು ಕೊರೊನಾ ಸೋಂಕಿನಿಂದ ಗುಣಮುಖರಾಗಿಲ್ಲವಂತೆ. ಖಾಸಗಿ ಆಸ್ಪತ್ರೆಯವರು ಮತ್ತೆ ಕೊರೊನಾ ಪಾಸಿಟಿವ್ ದೃಢವಾಗಿದೆ ಎಂದು ಸಿಸಿಬಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸಂಪತ್ ರಾಜ್ ಅವರ ಈ ನಡೆ ಬಹಳಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿರುವ ಕಾರಣ ಆರೋಗ್ಯ ಇಲಾಖೆಯ ಸರ್ಕಾರಿ ವೈದ್ಯರ ತಂಡ ಖಾಸಗಿ ಆಸ್ಪತ್ರೆಗೆ ತೆರಳಿ ಆರೋಗ್ಯದ ಬಗ್ಗೆ ಅಧ್ಯಯನ ನಡೆಸಲಿದೆ. ಈಗಾಗಲೇ ಸಿಸಿಬಿ ಆರೋಗ್ಯ ಇಲಾಖೆಗೆ ಪತ್ರ ಬರೆದ ಕಾರಣ ನುರಿತ ತಜ್ಙರ ತಂಡವನ್ನು ಸಿದ್ಧ ಮಾಡಲಾಗಿದೆ. ಈ ತಂಡ ಸಂಪತ್ ಆರೋಗ್ಯ ತಪಾಸಣೆ ಮಾಡಿ ಸಿಸಿಬಿ ಅಧಿಕಾರಿಗಳಿಗೆ ವರದಿ ನೀಡಲಿದ್ದಾರೆ.