ಆನೇಕಲ್(ಬೆಂಗಳೂರು):ತಾಲೂಕಿನ ಹೆಬ್ಬಗೋಡಿ ಠಾಣೆಯ ಪೊಲೀಸರು ಬಂಧಿಸಿದ್ದ ಮತ್ತೋರ್ವ ಕಳ್ಳನಿಗೆ ಕೊರೊನಾ ದೃಢಪಟ್ಟಿದ್ದು, 30 ಪೊಲೀಸರು ಕ್ವಾರಂಟೈನ್ ಆಗಿದ್ದಾರೆ.
ಮತ್ತೋರ್ವ ಕಬ್ಬಿಣ ಕಳ್ಳನಿಗೂ ಕೊರೊನಾ: ಹೆಬ್ಬಗೋಡಿ ಠಾಣೆಯ 30 ಪೊಲೀಸ್ ಸಿಬ್ಬಂದಿ ಕ್ವಾರಂಟೈನ್! - ಕಬ್ಬಿಣ ಕಳ್ಳನಿಗೆ ಕೊರೊನಾ ಪಾಸಿಟಿವ್
ಆನೇಕಲ್ ತಾಲೂಕಿನಲ್ಲಿ ಮತ್ತೋರ್ವ ಕಬ್ಬಿಣ ಕಳ್ಳನಿಗೆ (ರೋಗಿ 1397) ಕೊರೊನಾ ಪಾಸಿಟಿವ್ ಬಂದಿದ್ದು, ಹೆಬ್ಬಗೋಡಿ ಠಾಣೆಯ 30 ಪೊಲೀಸರು ಕ್ವಾರಂಟೈನ್ ಆಗಿದ್ದಾರೆ.
ಮೂವರು ಆರೋಪಿಗಳು ಕಬ್ಬಿಣ ಕಳ್ಳತನ ಮಾಡುವಾಗ ರೆಡ್ ಹ್ಯಾಂಡ್ ಆಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ಈ ಪೈಕಿ ಮಂಗಳವಾರ ಪಾದರಾಯನಪುರ ಬಳಿಯ ಜೆ.ಜೆ.ಆರ್ ನಗರ ವಾರ್ಡ್ 136ರ ನಿವಾಸಿಯಾಗಿದ್ದ ಕಳ್ಳ (ರೋಗಿ-1396)ಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಇದರಿಂದಾಗಿ ಉಳಿದ ಇಬ್ಬರು ಕಳ್ಳರನ್ನ ಪರೀಕ್ಷೆಗೆ ಒಳಪಡಿಸಿದ್ದು, (ರೋಗಿ 1397) ಕಳ್ಳನ ರಿಪೋರ್ಟ್ ಪಾಸಿಟಿವ್ ಬಂದಿದೆ. ಇನ್ನೋರ್ವ ಆರೋಪಿಯ ವರದಿ ನೆಗೆಟಿವ್ ಬಂದಿದೆ.
ಸದ್ಯ ಮತ್ತೊಬ್ಬ ಕಳ್ಳನಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಹೆಬ್ಬಗೋಡಿ ಪೊಲೀಸರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಇದರಿಂದಾಗಿ ಹೆಬ್ಬಗೋಡಿ ಠಾಣೆಗೆ ದಿನಕ್ಕೆ ಮೂರು ಬಾರಿ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗುತ್ತಿದೆ. ಅಲ್ಲದೆ ಆನೇಕಲ್ ತಾಲೂಕಿನ ಮೊದಲ ಕೊರೊನಾ ಸೋಂಕಿತ ನಿನ್ನೆ ಸಾವನ್ನಪ್ಪಿದ್ದು, ಜನರಲ್ಲಿ ಮತ್ತಷ್ಟು ಭೀತಿ ಹುಟ್ಟಿಸಿದೆ.