ಬೆಂಗಳೂರು: ಕೊರೊನಾ ಸೋಂಕಿತ ಇಡೀ ಕುಟುಂಬವೊಂದು ಸಿಎಂ ನಿವಾಸದ ಮುಂದೆಯೇ ಆ್ಯಂಬುಲೆನ್ಸ್ಗಾಗಿ ಅಂಗಲಾಚಿದ ಘಟನೆ ನಡೆದಿದೆ. ನಂತರ ಅವರನ್ನು ಟಿಟಿ ವಾಹನದಲ್ಲಿ ಕೆ.ಸಿ ಜನರಲ್ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು.
ಪೊಲೀಸರೇ ಕರೆ ಮಾಡಿ ಅರ್ಧ ಗಂಟೆ ಕಾದು ಕುಳಿತರೂ ಆ್ಯಂಬುಲೆನ್ಸ್ ಸ್ಥಳಕ್ಕೆ ಬರದಿದ್ದಾಗ ಟಿಟಿ ವಾಹನದಲ್ಲಿ ಆಸ್ಪತ್ರೆಗೆ ರವಾನಿಸಲಾಯಿತು.
ಕೊರೊನಾ ಸೋಂಕಿತ ವ್ಯಕ್ತಿಯೊಬ್ಬ ಪತ್ನಿ ಹಾಗು ಇಬ್ಬರು ಮಕ್ಕಳ ಜೊತೆ ಮುಖ್ಯಮಂತ್ರಿಗಳ ನಿವಾಸ ಕಾವೇರಿ ಬಳಿ ಬಂದು ನನಗೆ ಕೊರೊನಾ ಪಾಸಿಟಿವ್ ಇದೆ. ಎಲ್ಲೂ ಬೆಡ್ ಸಿಗುತ್ತಿಲ್ಲ, ನನಗೆ ಸುಸ್ತಾಗುತ್ತಿದೆ, ಆಸ್ಪತ್ರೆಯಲ್ಲಿ ಬೆಡ್ ಕೊಡಿಸಿ ಎಂದು ಅಂಗಲಾಚಿದ್ದಾರೆ.
ಬಳಿ ಪೊಲೀಸರು ಕರೆ ಮಾಡಿದರೂ ಆ್ಯಂಬುಲೆನ್ಸ್ ವಿಳಂಬ ಬನಶಂಕರಿಯ ಅಂಬೇಡ್ಕರ್ ನಗರ ನಿವಾಸಿ, ಅವರ 11 ತಿಂಗಳ ಮಗು, ಐದು ವರ್ಷದ ಮಗು ಹಾಗೂ ಪತ್ನಿ ಜೊತೆ ಬಂದಿದ್ದರು. ಇಬ್ಬರು ಮಕ್ಕಳಿಗೆ ಜ್ವರ ಇದೆ. ನನಗೆ ಸುಸ್ತಾಗುತ್ತಿದೆ ಯಾವ ಆಸ್ಪತ್ರೆಗೆ ಕಾಲ್ ಮಾಡಿದರೂ ಬೆಡ್ ಸಿಗುತ್ತಿಲ್ಲ. ಯಾವುದೇ ಆಸ್ಪತ್ರೆಯವರೂ ಕೂಡ ನಮಗೆ ಸರಿಯಾಗಿ ಪ್ರತಿಕ್ರಿಯೆ ನೀಡುತ್ತಿಲ್ಲ. ನಮಗೆ ಬೆಡ್ ಕೊಡಿಸಿ ಎಂದು ಬೇಡಿಕೊಂಡರು. ಮಾಧ್ಯಮದವರ ಮುಂದೆಯೂ ಅಳಲು ತೋಡಿಕೊಂಡರು.
ಸ್ಥಳಕ್ಕೆ ಬಂದ ಪೊಲೀಸರು ದೂರದಲ್ಲಿ ನಿಂತು ಅವರನ್ನು ವಿಚಾರಿಸಿದರು. ಸಿಎಂ ನಿವಾಸದ ಬಳಿ ಬಂದ ಕಾರಣ ಸೋಂಕಿತರ ಬಗ್ಗೆ ಮಾಹಿತಿ ಪಡೆದರು. ಕೂಡಲೇ ಆ್ಯಂಬುಲೆನ್ಸ್ಗೆ ಕರೆ ಮಾಡಿದರು. ಆದರೆ ಸಿಎಂ ನಿವಾಸದ ಬಳಿಗೇ ತಕ್ಷಣಕ್ಕೆ ಆ್ಯಂಬುಲೆನ್ಸ್ ಬರಲಿಲ್ಲ. 30 ನಿಮಿಷಗಳಾದರೂ ಒಂದೂ ಆ್ಯಂಬುಲೆನ್ಸ್ ಬರಲಿಲ್ಲ. ನಂತರ ಅವರನ್ನು ಟೆಂಪೋ ಟ್ರಾವೆಲರ್ನಲ್ಲಿ ಕೋವಿಡ್ ಕೇರ್ ಸೆಂಟರ್ ಕೆ.ಸಿ. ಜನರಲ್ ಆಸ್ಪತ್ರೆಗೆ ಕಳುಹಿಸಲಾಯಿತು.
ಸೋಂಕಿತ ಕುಟುಂಬವನ್ನು ಆಸ್ಪತ್ರೆಗೆ ಕಳುಹಿಸಿಕೊಟ್ಟ ನಂತರ ನಾಲ್ಕು ಆ್ಯಂಬುಲೆನ್ಸ್ಗಳು ಸ್ಥಳಕ್ಕೆ ಬಂದವು. ಆದರೆ ಸಮಯಕ್ಕೆ ಸರಿಯಾಗಿ ಸಿಎಂ ನಿವಾಸಕ್ಕೇ ಆ್ಯಂಬುಲೆನ್ಸ್ ತಲುಪುವುದಿಲ್ಲ. ಪೊಲೀಸರೇ 108ಗೆ ಕರೆ ಮಾಡಿದರೂ ತಕ್ಷಣ ಆಗಮಿಸಲ್ಲ ಎಂದರೆ ಆ್ಯಂಬುಲೆನ್ಸ್ ಕೊರತೆ ಇದೆ ಎನ್ನುವುದಕ್ಕೆ ಇದೇ ಸಾಕ್ಷಿ ಎನ್ನಲಾಗುತ್ತಿದೆ.