ಬೆಂಗಳೂರು:ಸರ್ಕಾರ ಸೂಚಿಸಿದ ಕೋವಿಡ್ ರೋಗಿಗಳಿಗೆ ಪ್ರವೇಶ ನಿರಾಕರಣೆ ಹಿನ್ನೆಲೆಯಲ್ಲಿ ನಗರದ ವಿಕ್ರಂ ಹಾಸ್ಪಿಟಲ್, ಸಾಗರ್ ಅಪೋಲೋ ಆಸ್ಪತ್ರೆಗೆ ಡಿಹೆಚ್ಒ ಶ್ರೀನಿವಾಸ್ ಗುಳೂರು ದಿಢೀರ್ ಭೇಟಿ ನೀಡಿದ್ದಾರೆ.
ಕೊರೊನಾ ವೈರಸ್ ಸಂದರ್ಭದಲ್ಲಿ ಐಎಲ್ಐ ಮತ್ತು ಎಸ್ಎಆರ್ಐ ಪ್ರಕರಣಗಳಿಗೆ ಚಿಕಿತ್ಸೆ ನೀಡದಿರುವ ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್ ನೀಡಲಾಗಿದೆ.
ದಿಢೀರ್ ಭೇಟಿ ನೀಡಿ ನೋಟಿಸ್ ನೀಡಿದ ಡಿಹೆಚ್ಒ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ದಾಖಲಾತಿ ಪಡೆದು ಚಿಕಿತ್ಸೆ ನೀಡಬೇಕು. ಆಸ್ಪತ್ರೆಯಲ್ಲಿ ಶೇ.50ರಷ್ಟು ಹಾಸಿಗೆಗಳನ್ನು ಕಾಯ್ದಿರಿಸಬೇಕು ಹಾಗೂ ಕಾಯ್ದಿರಿಸಲಾಗಿರುವ ಹಾಸಿಗೆಗಳ ಮಾಹಿತಿಯನ್ನ ಸಲ್ಲಿಸುವಂತೆ ಈ ಹಿಂದೆ ಸೂಚಿಸಲಾಗಿತ್ತು. ಆದರೆ ಸರ್ಕಾರದಿಂದ ಸೂಚಿಸಲ್ಪಟ್ಟ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿಲ್ಲ ಎಂಬ ಮಾಹಿತಿ ತಿಳಿದು ಬಂದಿದೆ.
ಈ ಹಿನ್ನೆಲೆಯಲ್ಲಿ ಎಪಿಡಿಮಿಕ್ ಡಿಸೀಸ್ ಕಾಯಿದೆ ಹಾಗೂ ಕೆಪಿಎಂಇ ಕಾಯ್ದೆ ಅಡಿ ಕಾನೂನು ಕ್ರಮ ಕೈಗೊಂಡು ಪರವಾನಗಿ ರದ್ದು ಮಾಡುತ್ತೇವೆ. ಈಗಾಗಲೇ ಆಸ್ಪತ್ರೆಯಿಂದ ಕಾನೂನು ಉಲ್ಲಂಘನೆಯಾಗಿದೆ. ಇದಕ್ಕೆ ಸಮಜಾಯಿಷಿ ನೀಡಬೇಕು. ಇಲ್ಲವಾದಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿ ನೋಟಿಸ್ ಜಾರಿಗೊಳಿಸಿದ್ದಾರೆ.