ಬೆಂಗಳೂರು: ಪಾದರಾಯನಪುರದಲ್ಲಿ ಗಲಾಟೆ ಮಾಡಿದ ಆರೋಪಿಗಳಲ್ಲಿ ಕೆಲವರಿಗೆ ಕೊರೊನಾ ಸೋಂಕು ದೃಢಪಟ್ಟಿರುವುದರಿಂದ ಅವರನ್ನು ಬಂಧಿಸಲು ತೆರಳಿದ್ದ 32 ಪೊಲೀಸರನ್ನು ಸದ್ಯ ಕ್ವಾರಂಟೈನ್ ಮಾಡಲಾಗಿದೆ.
ಅಲ್ಲಿನ ಗಲಾಟೆ ಬಳಿಕ ಭದ್ರತೆ, ಪರಿಶೀಲನೆ ಹಾಗೂ ಆರೋಪಿಗಳನ್ನ ಹಿಡಿಯುವ ಕಾರ್ಯಾಚರಣೆಯಲ್ಲಿ ನೂರಾರು ಪೊಲೀಸರು ನಿರತರಾಗಿದ್ದರು. ಈಗ ಅವರಿಗೂ ಆತಂಕ ಮೂಡಿದೆ.
ಪೊಲೀಸ್ ಇಲಾಖೆಗೂ ವಕ್ಕರಿಸಿತಾ ಕೊರೊನಾ ಭೀತಿ... ಡಿಸಿಪಿಯಿಂದ ಬಿಬಿಎಂಪಿ ಜಂಟಿ ಆಯುಕ್ತರಿಗೆ ಪತ್ರ ಸದ್ಯ ಬೆಂಗಳೂರಿನ ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬಾನೋತ್ ಇದೀಗ ಪಾಲಿಕೆಯ ಜಂಟಿ ಆಯುಕ್ತರಿಗೊಂದು ಪತ್ರವನ್ನ ಬರೆದಿದ್ದಾರೆ. ಪಾದರಾಯನಪುರ ಗಲಭೆ ಪ್ರಕರಣದಲ್ಲಿ ಆರೋಪಿಗಳನ್ನ ಹಿಡಿದು ಶಬ್ಬಾಶ್ ಅನ್ನಿಸಿಕೊಂಡ ಪೊಲೀಸರ ಭಯಕ್ಕೊಂದು ಮದ್ದನ್ನು ಕೊಡಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪತ್ರದಲ್ಲಿ ಏನಿದೆ?:
ಬಿಬಿಎಂಪಿ ಹಾಗೂ ಆರೋಗ್ಯಧಿಕಾರಿಗಳ ಮೇಲೆ ಹಲ್ಲೆ ಮಾಡಿದ ದಿನ ಒಟ್ಟು 18ಪೊಲೀಸರ ತಂಡಗಳು ಕಾರ್ಯ ನಿರ್ವಹಿಸಿದ್ದು, 130ಕ್ಕೂ ಹೆಚ್ಚು ಆರೋಪಿಗಳನ್ನ ಬಂಧಿಸಲಾಗಿದೆ. ಇದರಲ್ಲಿ 500ಕ್ಕೂ ಹೆಚ್ಚು ಪಶ್ಚಿಮ ವಿಭಾಗ ಪೊಲೀಸರು ಆರೋಪಿಗಳನ್ನ ಹಿಡಿಯಲು ಹಾಗೂ ಭದ್ರತೆ ಕಾಪಾಡುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಹೀಗಾಗಿ 32 ಜನರನ್ನ ಮಾತ್ರವಲ್ಲದೇ ಕಾರ್ಯಾಚರಣೆಯಲ್ಲಿದ್ದ ಎಲ್ಲಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನ ಕ್ವಾರಂಟೈನ್ ಮಾಡಲು ಪಾಲಿಕೆಯ ಜಂಟಿ ಆಯುಕ್ತರಿಗೆ ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬಾನೋತ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.