ಬೆಂಗಳೂರು: ಕೊರೊನಾ ಭೀತಿ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್‌ಡೌನ್ ಘೋಷಿಸಲಾಗಿದ್ದು, ಈ ಅವಧಿಯಲ್ಲಿ ಯಾವುದೇ ಕಾನೂನು ಕ್ರಮ ಜರುಗಿಸದಂತೆ ಈ ಹಿಂದೆ ನೀಡಲಾಗಿರುವ ಮಧ್ಯಂತರ ಆದೇಶಗಳನ್ನು ಮುಂದಿನ ಒಂದು ತಿಂಗಳ ಕಾಲ ವಿಸ್ತರಿಸಿ ಹೈಕೋರ್ಟ್ ಆದೇಶಿಸಿದೆ.
ಮೊಹಮ್ಮದ್ ಆರೀಫ್ ಜಮೀಲ್ ಮತ್ತು ಕೆ.ಟಿ.ಅನೂಪ್ ಎಂಬುವರು ಸಲ್ಲಿಸಿರುವ ಎರಡು ಪ್ರತ್ಯೇಕ ಪಿಐಎಲ್ ಅರ್ಜಿಗಳ ವಿಚಾರಣೆ ನಡೆಸಿರುವ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಮತ್ತು ಹಿರಿಯ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠ, ಸಂವಿಧಾನದ ಅನುಚ್ಛೇದ 226 ಮತ್ತು 227ರ ಅಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಹೈಕೋರ್ಟ್ ಸೇರಿದಂತೆ ಇಡೀ ರಾಜ್ಯದ ಎಲ್ಲಾ ನ್ಯಾಯಾಲಯಗಳು ನೀಡಿರುವ ಮಧ್ಯಂತರ ಆದೇಶಗಳನ್ನು ವಿಸ್ತರಿಸಿ ಆದೇಶ ಹೊರಡಿಸಲಾಗಿದೆ.
ಅದರಂತೆ ಹೈಕೋರ್ಟ್ನ ಬೆಂಗಳೂರು ಪ್ರಧಾನ ಪೀಠ, ಕಲಬುರಗಿ ಮತ್ತು ಧಾರವಾಡದ ಪೀಠಗಳು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾ ನ್ಯಾಯಾಲಯಗಳು, ವಿಚಾರಣಾ ನ್ಯಾಯಾಲಯಗಳು, ಕಾರ್ಮಿಕ ನ್ಯಾಯಾಲಯಗಳು, ಕೌಟುಂಬಿಕ ನ್ಯಾಯಾಲಯಗಳು, ಕೈಗಾರಿಕಾ ನ್ಯಾಯಾಧಿಕರಣಗಳು ನೀಡಿರುವ ಮಧ್ಯಂತರ ಆದೇಶಗಳು ಒಂದು ತಿಂಗಳ ಕಾಲ ವಿಸ್ತರಣೆ ಆಗಿವೆ.
ಮಾರ್ಚ್ 24ರಿಂದ ಮುಂದಿನ ಒಂದು ತಿಂಗಳ ಅವಧಿಯೊಗಳಗೆ ಮುಕ್ತಾಯವಾಗುವ ಎಲ್ಲಾ ಮಧ್ಯಂತರ ಆದೇಶಗಳು ಅಲ್ಲಿಂದ ಒಂದು ತಿಂಗಳು ವಿಸ್ತರಣೆ ಆಗಲಿವೆ. ಹೀಗಾಗಿ ಅವಧಿ ನಿಗದಿಪಡಿಸಿ ನೀಡಿರುವ ಜಾಮೀನು ಆದೇಶಗಳು, ತೆರವು ಕಾರ್ಯಾಚರಣೆ ಆದೇಶಗಳು ತಿಂಗಳ ಕಾಲ ವಿಸ್ತರಣೆ ಆಗಿದ್ದು, ಈ ಅವಧಿಯಲ್ಲಿ ನ್ಯಾಯಾಲಯದ ಆದೇಶಂತೆ ಯಾವುದೇ ಕಾನೂನು ಕ್ರಮ ಜರುಗಿಸುವಂತಿಲ್ಲ.