ಬೆಂಗಳೂರು : ಕೊರೊನಾ ಭೀತಿ ಹಿನ್ನೆಲೆಯಲ್ಲಿ ನ್ಯಾಯಾಲಯಗಳಿಗೆ ಬರುವ ವಕೀಲರು ಮತ್ತು ಕಕ್ಷೀದಾರರ ಸಂಖ್ಯೆ ಕ್ಷೀಣಿಸಿದ್ದು, ಹೈಕೋರ್ಟ್ ಸೇರಿದಂತೆ ವಿಚಾರಣಾ ನ್ಯಾಯಾಲಯಗಳ ಕಲಾಪಗಳು ಸೋಮವಾರ ಬಹು ಬೇಗನೇ ಮುಗಿದು ಹೋದವು.
ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ನ್ಯಾಯಾಲಯಗಳಿಗೆ ಆಗಮಿಸುವ ಕಕ್ಷಿದಾರರು ಮತ್ತು ವಕೀಲರ ಸಂಖ್ಯೆ ಕಡಿಮೆ ಮಾಡಲು ಹೈಕೋರ್ಟ್ ಮಾ.21ರಂದು ಅಧಿಸೂಚನೆ ಹೊರಡಿಸಿ, ಕಲಾಪದ ಅವಧಿಯನ್ನು ಬೆಳಗ್ಗೆ 10.30ರಿಂದ ಮಧ್ಯಾಹ್ನ 1.30ರವರೆಗೆ ನಿಗದಿಪಡಿಸಿತ್ತು. ಅದರಂತೆ ಬೆಂಗಳೂರಿನ ಹೈಕೋರ್ಟ್ ಪ್ರಧಾನ ಪೀಠದಲ್ಲಿ 1.30ರವರೆಗೆ ಕಲಾಪ ನಡೆಯಬೇಕಿದ್ದರೂ, ವಕೀಲರು ಮತ್ತು ಕಕ್ಷೀದಾರರ ಸಂಖ್ಯೆ ತೀರಾ ವಿರಳವಾಗಿದ್ದರಿಂದ ಬಹುತೇಕ ನ್ಯಾಯಪೀಠಗಳ ಕಲಾಪಗಳು ಮಧ್ಯಾಹ್ನ 12 ಗಂಟೆ ವೇಳೆಗೆ ಮುಗಿದು ಹೋಗಿದ್ದವು. ಬೆರಳೆಣಿಕೆ ಪೀಠಗಳು ಮಾತ್ರ ಮಧ್ಯಾಹ್ನ 1.30 ರವೆರೆಗೆ ಕಲಾಪ ನಡೆಸಿದವು.
ಹೈಕೋರ್ಟ್ ಭಣಭಣ:ಕೊರೊನಾ ವೈರಸ್ ಸದ್ದು ಮಾಡುವವರೆಗೂ ವಕೀಲರು ಹಾಗು ಕಕ್ಷಿದಾರರಿಂದಲೇ ತುಂಬಿ ತುಳುಕುತ್ತಿದ್ದ ಹೈಕೋರ್ಟ್ ಆವರಣ, ಕೋರ್ಟ್ ಹಾಲ್ ಮತ್ತು ಕಾರಿಡಾರ್‌ಗಳು ಸೋಮವಾರ ಬಣಗುಡುತ್ತಿದ್ದವು. ಇನ್ನು, ಹಾಜರಾದ ವಕೀಲರು ತಮ್ಮ ಪ್ರಕರಣದ ವಿಚಾರಣೆ ಮುಗಿದ ಕೂಡಲೇ ನ್ಯಾಯಾಲಯದ ಆವರಣ ಬಿಟ್ಟು ತೆರಳಿದರು.