ಬೆಂಗಳೂರು: ಸಾಂಕ್ರಾಮಿಕ ಕೊರೊನಾ ವೈರಸ್ನಿಂದಾಗಿ ವಿದ್ಯಾರ್ಥಿಗಳ ಭವಿಷ್ಯಕ್ಕೂ ತೊಂದರೆಯಾಯಿತು. ಕೋವಿಡ್ ಭೀತಿಗೆ 2020 - 2021ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯನ್ನೇ ರದ್ದು ಮಾಡಲಾಯ್ತು. ಬದಲಿಗೆ 10 ಹಾಗೂ ಪ್ರಥಮ ಪಿಯುಸಿ ಅಂಕಗಳನ್ನ ಆಧಾರಿಸಿ ಅವರಿಗೆ ಫಲಿತಾಂಶ ಪ್ರಕಟಿಸಲಾಯ್ತು. ಈ ವೇಳೆ, ಫಲಿತಾಂಶ ತೃಪ್ತಿಕರವಾಗಿಲ್ಲ ಅಂದರೆ, ಅಂತಹವರಿಗೆ ಪರೀಕ್ಷೆ ನಡೆಸಲು ನಿರ್ಧರಿಸಲಾಗಿತ್ತು.
ಫಲಿತಾಂಶವನ್ನ ತಿರಸ್ಕರಿಸಿದವರಿಗೆ ಹಾಗೂ ಖಾಸಗಿ ವಿದ್ಯಾರ್ಥಿಗಳಿಗೆ ಇದೇ ಆಗಸ್ಟ್ 19 ರಿಂದ ಸೆಪ್ಟೆಂಬರ್ 3 ತನಕ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದೆ. ಈಗಾಗಲೇ ಸಕಲ ತಯಾರಿ ಮಾಡಿಕೊಂಡಿರುವ ಪಿಯು ಬೋರ್ಡ್ ವಿದ್ಯಾರ್ಥಿಗಳು ಧೈರ್ಯವಾಗಿ ಬಂದು ಪರೀಕ್ಷೆ ಬರೆಯಿರಿ ಅಂತ ಹುರಿದುಂಬಿಸಿದೆ.
ಈ ಕುರಿತು ಪಿಯು ಬೋರ್ಡ್ನ ನಿರ್ದೇಶಕಿ ಸ್ನೇಹಲ್ ಪ್ರತಿಕ್ರಿಯಿಸಿದ್ದಾರೆ. ಆಗಸ್ಟ್ 19 ರಿಂದ ಸೆಪ್ಟೆಂಬರ್ 3ರ ತನಕ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದೆ. ರಾಜ್ಯದಲ್ಲಿ ಒಟ್ಟಾರೆ 18,414 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಅದರಲ್ಲಿ 17,469 ಖಾಸಗಿ ವಿದ್ಯಾರ್ಥಿಗಳು, 352 ಪುನರಾವರ್ತಿತ ಹಾಗೂ 593 ಫ್ರೆಶರ್ಸ್ ಪರೀಕ್ಷೆ ಬರೆಯಲಿದ್ದಾರೆ. ತಾಲೂಕಿಗೆ ಒಂದರಂತೆ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಒಂದಕ್ಕಿಂತ ಹೆಚ್ಚು ಪರೀಕ್ಷಾ ಕೇಂದ್ರ ಮಾಡಿ ಒಟ್ಟು 187 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಅಂತ ತಿಳಿಸಿದರು.
ಇನ್ನು ಮಹಾರಾಷ್ಟ್ರ- ಕೇರಳದ ಭಾಗದಿಂದ ಬರುವವರಿಗೆ ಆರ್ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಲಾಗಿದೆ. ಹೊರ ರಾಜ್ಯದಿಂದ ಬರುವ ವಿದ್ಯಾರ್ಥಿಗಳು ಕಡ್ಡಾಯವಾಗಿ 72 ಗಂಟೆಗಳ ನೆಗೆಟಿವ್ ರಿಪೋರ್ಟ್ ತರಬೇಕಿದೆ. ಅಂತಹ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ಇರಲಿದೆ ಎಂದು ಮಾಹಿತಿ ನೀಡಿದ್ದಾರೆ.
ಮಹಾರಾಷ್ಟ್ರದ ಗಡಿಭಾಗದ ಜಿಲ್ಲೆಗಳಾದ ಗುಲ್ಬರ್ಗ, ಬೀದರ್, ಬೆಳಗಾವಿ ಹಾಗೂ ಕೊಡಗು, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲೂ ಯಾರಾದರೂ ಹೊರ ರಾಜ್ಯದಿಂದ ಬಂದರೆ ರಿಪೋರ್ಟ್ ತರಬೇಕಿದೆ.