ಕರ್ನಾಟಕ

karnataka

ETV Bharat / state

ಮಾಧ್ಯಮಗಳಲ್ಲಿ ಶವಸಂಸ್ಕಾರ, ನಿಮ್ಮನ್ನಷ್ಟೇ ನೋಡುವಂತಾಗಿದೆ.. ಸಭೆಯಲ್ಲಿ ಡಿಕೆಸು-ಸುಧಾಕರ್‌ ಜಟಾಪಟಿ - ebate of the MP, the legislator, the rhetoric

ಸುಧಾಕರ್ ಅವರು, ಆಕ್ಸಿಜನ್ ಸಮಸ್ಯೆ ಇಂದು ನಿನ್ನೆಯದಲ್ಲ, ಹಲವು ವರ್ಷಗಳಿಂದಲೂ ಇದೆ ಎಂದಾಗ, ಇದಕ್ಕೆ ಸಿಟ್ಟಾದ ಡಿ ಕೆ ಸುರೇಶ್, ಆರೋಗ್ಯ ಸಚಿವರೇ, ಇಂದು ಏನಾಗಿದೆ ಗೊತ್ತಾ? ಬರೀ ಮಾಧ್ಯಮಗಳಲ್ಲಿ ಹೇಳಿಕೆ ನೀಡುವುದನ್ನು ನಿಲ್ಲಿಸಿ. ನಿತ್ಯ ನಿಮ್ಮನ್ನು ನೋಡುವುದು, ಶವಸಂಸ್ಕಾರ ನೋಡೋದು. ಇದೇ ಆಗಿದೆ. ಸರಿಯಾಗಿ ಕೆಲಸ ಮಾಡಿ ಎಂದು ಏರು ಧ್ವನಿಯಲ್ಲಿ ಹೇಳಿದಾಗ, ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ.

ಕೊರೊನಾ ಸಭೆ
ಕೊರೊನಾ ಸಭೆ

By

Published : Apr 19, 2021, 8:58 PM IST

Updated : Apr 19, 2021, 10:12 PM IST

ಬೆಂಗಳೂರು :ಬೆಂಗಳೂರಿನಲ್ಲಿ ಕೊರೊನಾ ಸೋಂಕು ಪ್ರಕರಣ ತೀವ್ರತೆ ಹೆಚ್ಚಿರುವ ಹಿನ್ನೆಲೆ ಇಂದು ಕರೆದಿದ್ದ ಬೆಂಗಳೂರಿನ ಸಚಿವರು, ಸಂಸದರು ಹಾಗೂ ಶಾಸಕರ ಸಭೆಯಲ್ಲಿ ಬಿಸಿ ಬಿಸಿ ಚರ್ಚೆ, ವಾಗ್ದಾಳಿ, ಮಾತಿನ ಜಟಾಪಟಿ ನಡೆದಿದೆ ಎಂದು ತಿಳಿದು ಬಂದಿದೆ.

ಮೊದಲು ಕಾಂಗ್ರೆಸ್ ಶಾಸಕ ರಾಮಲಿಂಗಾರೆಡ್ಡಿ ಅವರು, ಸರ್ಕಾರದ ನಿಲುವು ಸ್ಪಷ್ಟಪಡಿಸಿದಲ್ಲಿ ಪೂರಕವಾಗಿ ಏನು ಮಾಡಬಹುದು ಎಂದು ಪ್ರಶ್ನಿಸಿದ್ದಾರೆ. ತಮ್ಮ ಅಭಿಪ್ರಾಯ, ವಿಶೇಷವಾಗಿ, ರಚನಾತ್ಮಕ ಸಲಹೆಗಳನ್ನು ಪಡೆದು, ವೈಜ್ಞಾನಿಕ ನೆಲೆಗಟ್ಟಿನಲ್ಲಿ ಸರ್ಕಾರದ ನಿಲುವು ಪ್ರಕಟಿಸುವುದಾಗಿ ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

ನಂತರ, ರಾಮಲಿಂಗಾರೆಡ್ಡಿ ಮಾತನಾಡಿ, ಈ ಸಂದರ್ಭದಲ್ಲಿ ನಮ್ಮ ಸಂಪೂರ್ಣ ಸಹಕಾರ ತಮಗೆ ಇದೆ. ನಾವು ಇಲ್ಲಿ ರಾಜಕಾರಣ ಮಾಡಲು ಬಂದಿಲ್ಲ. ತಾವೂ ಈ ವಿಚಾರದಲ್ಲಿ ರಾಜಕಾರಣ ಮಾಡಬೇಡಿ ಎಂದು ಗರಂ ಆಗಿದ್ದಾರೆ. ಆಹಾರವಾಗಲೀ ಅಥವಾ ಔಷಧಿಯಾಗಲೀ ನ್ಯಾಯಯುತವಾಗಿ ವಿತರಿಸಿ.

ರಾಜ್ಯದಲ್ಲಿ ಒಂದೆಡೆ ಹಾಸಿಗೆ ಇಲ್ಲ, ಮತ್ತೊಂದೆಡೆ ತೀವ್ರ ನಿಗಾ ಘಟಕದಲ್ಲಿ ಸ್ಥಳಾವಕಾಶ ಇಲ್ಲ, ಮಗದೊಂದೆಡೆ ಆಮ್ಲಜನಕದ ದಾಸ್ತಾನು ಇಲ್ಲ ಎಂಬ ಭಯಾನಕ ಪರಿಸ್ಥಿತಿ ಇದೆ. ಸಾರ್ವಜನಿಕ ಹಿತದೃಷ್ಟಿಯಿಂದ ಬೆಂಗಳೂರು ನಗರದಲ್ಲಿ ಕನಿಷ್ಠ 25,000 ಹಾಸಿಗೆಗಳನ್ನು ವ್ಯವಸ್ಥೆ ಮಾಡಿ ಎಂದು ಒತ್ತಾಯಿಸಿದ್ದಾರೆ.

ಕೊರೊನಾ ನಿಯಂತ್ರಣಕ್ಕೆ ಉನ್ನತಮಟ್ಟದ ಸಭೆ ನಡೆಸಿದ ಸರ್ಕಾರ

ಮನೆಯಲ್ಲಿ ದಿಗ್ಬಂಧನದಲ್ಲಿರುವ (ಹೋಮ್ ಐಸೋಲೇಷನ್ ) ಜನರು ರಸ್ತೆಗಳಲ್ಲಿ ಓಡಾಡುತ್ತಿದ್ದಾರೆ. ಲಾಕ್​ಡೌನ್‌ಗಿಂತಲೂ ದಂಡ ಪ್ರಕ್ರಿಯಾ ಸಂಹಿತೆ ಪರಿಚ್ಛೇಧ 144 ಜಾರಿ ಮಾಡಿ ಗುಂಪು ಸೇರುವುದನ್ನು ತಡೆಯುವುದು ಉತ್ತಮ.

ಕಲ್ಯಾಣ ಮಂಟಪ, ಸಮುದಾಯ ಭವನ, ಮಾರುಕಟ್ಟೆಗಳಲ್ಲಿ ಜನಸಂದಣಿ ನಿಯಂತ್ರಿಸಿ, ನೈಟ್ ಕರ್ಫ್ಯೂ ಸಮಯ ಬದಲಾವಣೆ ಅಗತ್ಯವಿಲ್ಲ. ಕೊಳಗೇರಿಗಳಲ್ಲಿ ಲಸಿಕಾ ಆಭಿಯಾನಕ್ಕೆ ಒತ್ತು ಕೊಡಿ ಎಂದು ಸಲಹೆ ನೀಡಿದ್ದಾರೆ.

ಶಾಸಕ ಜಮೀರ್ ಅಹಮದ್ ಮಾತನಾಡಿ, ಬಡವರು, ಮಧ್ಯಮ ವರ್ಗಕ್ಕೆ ಲಾಕ್​ಡೌನ್ ಕಷ್ಟ ತಂದೊಡ್ಡುತ್ತದೆ. ಲಾಕ್​ಡೌನ್ ಪರಿಹಾರ ಅಲ್ಲ. ಪ್ರತಿ ಶಾಸಕರಿಗೂ ಕನಿಷ್ಠ 25 ಹಾಸಿಗೆಗಳನ್ನ ಮೀಸಲಿರಿಸಿ. ಹಾಸಿಗೆಗಳನ್ನು ವಿತರಿಸಲು ಅವಕಾಶ ನೀಡಿ.

ಚಾಮರಾಜಪೇಟೆ ಕ್ಷೇತ್ರದ ಜಮಾ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು 20,000 ಜನರಿಗೆ ಅವಕಾಶ ಇದ್ದರೂ, ಪವಿತ್ರ ರಂಜಾನ್ ಮಾಸದಲ್ಲಿ ಈ ಸಾಮರ್ಥ್ಯದ ಕಾಲು ಭಾಗ ಅಂದರೆ 5,000 ಜನರಿಗೆ ಮಾತ್ರ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಸೋಂಕಿತರಿಗೆ ಸರ್ಕಾರದ ವತಿಯಿಂದಲೇ ಚಿಕಿತ್ಸೆ ಕೊಡಿಸಿ. ರೆಮಿಡೆಸಿವರ್ ಇಂಜೆಕ್ಷನ್ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವವರನ್ನು ಬಂಧಿಸಿ ಎಂದು ಹೇಳಿದ್ದಾರೆ.

ವಿಧಾನ ಪರಿಷತ್ ಸದಸ್ಯ ಸಿ. ಎಂ. ಇಬ್ರಾಹಿಂ ಮಾತನಾಡಿ, ತಮ್ಮ ಸ್ವಂತ ತಂದೆ-ತಾಯಿಯನ್ನು ಹೆತ್ತ ಮಕ್ಕಳೂ ಮುಟ್ಟುತ್ತಿಲ್ಲ. ಶವದ ಮೂಲಕ ಕೋವಿಡ್-19 ಸೋಂಕು ಹರಡುವುದಿಲ್ಲ ಎಂಬ ವಿಷಯವನ್ನು ಜನಸಾಮಾನ್ಯರಿಗೆ ವೈದ್ಯರ ಮೂಲಕ ಮನವರಿಕೆ ಮಾಡಿ ಕೊಡಿ, ಕನಿಷ್ಠ ವಾರಕ್ಕೊಮ್ಮೆ ಅಥವಾ 10 ದಿನಗಳಿಗೊಮ್ಮೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಎಂದು ಸಲಹೆ ನೀಡಿದ್ದಾರೆ.

ದಾಸರಹಳ್ಳಿ ಕ್ಷೇತ್ರದ ಜೆಡಿಎಸ್ ಶಾಸಕ ಮಂಜುನಾಥ್ ಮಾತನಾಡಿ, ಸಂಚಾರಿ ವೈದ್ಯರ ತಂಡ ರಚಿಸಿ ಹೋಮ್ ಐಸೋಲೇಷನ್​ನಲ್ಲಿ ಇರುವವರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೂಲಕ ಉಚಿತ ಔಷಧಿ ವಿತರಿಸಿ.

ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಿ. ಸತ್ತವರನ್ನು ಅವರ ಜಮೀನುಗಳಲ್ಲಿ ಅಂತ್ಯ ಸಂಸ್ಕಾರ ಮಾಡಲು ಅವಕಾಶ ಕಲ್ಪಿಸಿ. ಇದರಿಂದ ಸ್ಮಶಾನಗಳಲ್ಲಿ ಅಂತ್ಯ ಸಂಸ್ಕಾರಕ್ಕೆ ಸಾಲುಗಟ್ಟಿ ನಿಲ್ಲುವುದು ತಪ್ಪುತ್ತದೆ ಎಂದು ಸಲಹೆ ನೀಡಿದ್ದಾರೆ.

ಮಾತಿನ ಚಕಮಕಿ :ಸಭೆಯಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವಿರುದ್ಧ ಕಾಂಗ್ರೆಸ್ ಸಂಸದ ಡಿ ಕೆ ಸುರೇಶ್ ಮುಗಿಬಿದ್ದಿದ್ದಾರೆ. ನೀವು ಸರಿಯಾಗಿ ಕೆಲಸ ಮಾಡಿದ್ದೀರಾ? ನೀವು ಸರಿಯಾಗಿ‌ ಕೆಲಸ ಮಾಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಆಸ್ಪತ್ರೆಗಳಲ್ಲಿ ಸರಿಯಾಗಿ ಬೆಡ್​ಗಳೇ ಸಿಗುತ್ತಿಲ್ಲ.

ಬಡ ರೋಗಿಗಳನ್ನು ದಾಖಲು ಮಾಡಿಕೊಳ್ಳುತ್ತಿಲ್ಲ. ಅಂತ್ಯಸಂಸ್ಕಾರಕ್ಕೆ ಹೆಚ್ಚು ಹಣ ಕೇಳುತ್ತಿದ್ದಾರೆ. ಹೋಗ್ಲಿ ಈಗ ಎಷ್ಟು ಬೆಡ್, ವೆಂಟಿಲೇಟರ್​ಗಳಿವೆ ಇದರ ಬಗ್ಗೆಯಾದರೂ ಸರಿಯಾದ ಮಾಹಿತಿ ಕೊಡಿ. ನೀವು ಆರೋಗ್ಯ ಸಚಿವರು, ಜವಾಬ್ದಾರಿ ನಿಮ್ಮದೇ ಎಂದು ಸುಧಾಕರ್ ವಿರುದ್ಧ ತಿರುಗಿಬಿದ್ದಿದ್ದಾರೆ.

ಈ ವೇಳೆ ಸಚಿವರು ಹಾಗೂ ಸುರೇಶ್ ಮಧ್ಯೆ ಮಾತಿನ ಜಟಾಪಟಿ ನಡೆದಿದೆ. ಈ ಸಂದರ್ಭದಲ್ಲಿ ಸುಧಾಕರ್ ಅವರ ಬೆಂಬಲಕ್ಕೆ ನಿಂತ ಸಚಿವ ವಿ.ಸೋಮಣ್ಣ, ಹಗಲು-ರಾತ್ರಿ ಶ್ರಮಿಸುತ್ತಿದ್ದಾರೆ. ಅವರ ಮೇಲೆ ನಿಮ್ಮ ಆರೋಪವೇಕೆ ಎಂದಿದ್ದಾರೆ.

ಆಗ ಸುಧಾಕರ್ ಅವರು, ಆಕ್ಸಿಜನ್ ಸಮಸ್ಯೆ ಇಂದು ನಿನ್ನೆಯದಲ್ಲ, ಹಲವು ವರ್ಷಗಳಿಂದಲೂ ಇದೆ ಎಂದಾಗ, ಇದಕ್ಕೆ ಸಿಟ್ಟಾದ ಡಿ ಕೆ ಸುರೇಶ್, ಆರೋಗ್ಯ ಸಚಿವರೇ, ಇಂದು ಏನಾಗಿದೆ ಗೊತ್ತಾ? ಬರೀ ಮಾಧ್ಯಮಗಳಲ್ಲಿ ಹೇಳಿಕೆ ನೀಡುವುದನ್ನು ನಿಲ್ಲಿಸಿ. ನಿತ್ಯ ನಿಮ್ಮನ್ನು ನೋಡುವುದು, ಶವಸಂಸ್ಕಾರ ನೋಡೋದು.

ಇದೇ ಆಗಿದೆ. ಸರಿಯಾಗಿ ಕೆಲಸ ಮಾಡಿ ಎಂದು ಏರು ಧ್ವನಿಯಲ್ಲಿ ಹೇಳಿದಾಗ, ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಆಗ ಸಚಿವ ಆರ್‌ ಅಶೋಕ್ ಮಧ್ಯ ಪ್ರವೇಶಿಸಿ, ಸಮಾಧಾನ ಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

Last Updated : Apr 19, 2021, 10:12 PM IST

ABOUT THE AUTHOR

...view details