ಬೆಂಗಳೂರು:ಮಹಾಮಾರಿ ಕೋವಿಡ್ನಿಂದ ಸಾಕಷ್ಟು ಉದ್ಯಮಗಳು ನಷ್ಟ ಅನುಭವಿಸುವಂತಾಗಿದೆ. ಅದೆಷ್ಟೋ ಕಂಪನಿಗಳು ಬಾಗಿಲು ಮುಚ್ಚಿವೆ. ಉದ್ಯಮಗಳಿಗೆ ದೊಡ್ಡ ಪ್ರಮಾಣದಲ್ಲಿ ಹೊಡೆತ ಬಿದ್ದಿರೋದು ನಮಗೆಲ್ಲ ತಿಳಿದಿರುವ ವಿಚಾರ. ಕೋವಿಡ್ ಮೊದಲ ಅಲೆಯಿಂದ ಚೇತರಿಸಿಕೊಳ್ಳುತ್ತಿದ್ದ ಸಮಯದಲ್ಲಿ ರೂಪಾಂತರಗೊಂಡ ಸೋಂಕಿನಿಂದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ. ಅದೇ ರೀತಿ ಕುಕ್ಕುಟೋದ್ಯಮದ ಮೇಲೂ ಕೋವಿಡ್ ಕರಿಛಾಯೆ ಆವರಿಸಿದ್ದು, ವ್ಯಾಪಾರ ಕುಠಿತಗೊಂಡಿದೆ. ಅದರ ನೇರ ಪರಿಣಾಮ ಕೋಳಿ ಸಾಕಾಣಿಕೆಯ ಮಾಲೀಕರ ಮೇಲೆ ಬಿದ್ದಿದ್ದು, ಕಾರ್ಮಿಕರು ಸಹ ಜೀವನ ನಿರ್ವಹಣೆಗೆ ಪರದಾಡುತ್ತಿದ್ದಾರೆ.
ವದಂತಿಯಿಂದ ಕುಕ್ಕುಟೋದ್ಯಮ ಕುಂಠಿತ:
ವಿಶ್ವದ ಯಾವುದೇ ಭಾಗದಲ್ಲಿ ಯಾವುದೇ ರೀತಿಯ ರೋಗ ಕಾಣಿಸಿಕೊಳ್ಳಲಿ, ಇದಕ್ಕೆ ಮೊದಲು ಬಲಿಯಾಗುವುದು ಕುಕ್ಕುಟೋದ್ಯಮಿ. ಕೋಳಿಗಳಿಂದಲೇ ವೈರಾಣು ಹರಡುತ್ತದೆ ಎಂಬ ವದಂತಿಗಳು ಹಬ್ಬಿ ಗಂಭೀರ ಪ್ರಭಾವ ಬೀರುತ್ತದೆ. ಇದರಿಂದ ಮಾಲೀಕರು ಸಾಕಷ್ಟು ನಷ್ಟ ಅನುಭವಿಸುತ್ತಾರೆ. ವರ್ಷಕ್ಕೆ ಒಂದು ಬಾರಿಯಾದರೂ ಹಕ್ಕಿ ಜ್ವರದ ಭೀತಿಯನ್ನು ಎದುರಿಸಬೇಕಾಗುತ್ತದೆ. ಕಳೆದೊಂದು ವರ್ಷದಿಂದ ಹೊಸದಾಗಿ ಕೋವಿಡ್ ವಕ್ಕರಿಸಿದ್ದು, ಮಹಾಮಾರಿಯಿಂದ ಕುಕ್ಕುಟೋದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ.
ಕೋವಿಡ್ ಎರಡನೇ ಅಲೆ ಕರ್ನಾಟಕದ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಅದರಲ್ಲೂ ಬೆಂಗಳೂರಿನಲ್ಲಿ ಸೋಂಕು ವಿಪರೀತವಾಗಿ ಉಲ್ಬಣಗೊಂಡು, ಹೋಟೆಲ್, ಚಿಕನ್ ಸ್ಟಾಲ್, ಮಾಲ್‌ಗಳು, ಬೀದಿ ಬದಿಯ ಫಾಸ್ಟ್ ಫುಡ್ ಸೆಂಟರ್ಗಳು ಲಾಕ್ಡೌನ್ನಿಂದಾಗಿ ಮುಚ್ಚುವಂತೆ ಮಾಡಿದೆ. ಇದರಿಂದ ಬೆಂಗಳೂರಿನ ಕುಕ್ಕುಟೋದ್ಯಮಕ್ಕೆ ಸಾಕಷ್ಟು ನಷ್ಟ ಉಂಟಾಗಿದೆ.
ಹಾಕಿದ ಬಂಡವಾಳವೂ ಕೈ ಸೇರುತ್ತಿಲ್ಲ:
ಸರ್ಕಾರ ಬೆಳಗ್ಗೆ 4 ಗಂಟೆಗಳ ಕಾಲ ಚಿಕನ್ ಸೆಂಟರ್ಗಳನ್ನು ತೆರೆಯಲು ಅನುಮತಿ ನೀಡಿದ್ದರೂ ಅಷ್ಟಾಗಿ ವ್ಯಾಪಾರ ಆಗುತ್ತಿಲ್ಲ. ಇದರಿಂದ ಕೋಳಿ ಸಾಕಾಣಿಕೆ ಉದ್ಯಮದ ಮೇಲೆ ಸಾಕಷ್ಟು ಪೆಟ್ಟು ಬಿದ್ದಿದೆ. ಕೊರೊನಾ ಎರಡನೇ ಅಲೆ ಆರಂಭಕ್ಕೂ ಮೊದಲು ಕೋಳಿ ಫಾರಂಗಳಲ್ಲಿ 1 ಕೆಜಿ ಕೋಳಿಗೆ ಸುಮಾರು 120 ರಿಂದ 130ರವರೆಗೆ ಮಾರಾಟವಾಗುತ್ತಿತ್ತು. ಆದರೆ ಕರ್ನಾಟಕದಲ್ಲಿ ಸೋಂಕು ಹೆಚ್ಚಾಗಿ ಲಾಕ್ಡೌನ್ ಆದ ಪರಿಣಾಮ ಕುಕ್ಕುಟೋದ್ಯಮ ಮೇಲೆ ಸಾಕಷ್ಟು ಪರಿಣಾಮ ಬೀರಿ ಈಗ 1ಕೆಜಿ ಕೋಳಿಗೆ ಕೇವಲ 25 ರಿಂದ 30 ರೂಪಾಯಿಗೆ ಮಾರಾಟವಾಗುತ್ತಿದೆ. ಆದರೆ ಒಂದು ಕೋಳಿಯನ್ನು ಕನಿಷ್ಠ 45 ದಿನಗಳವರೆಗೆ ಪೋಷಣೆ ಮಾಡಲು 80ರೂ. ವೆಚ್ಚ ಬರುತ್ತದೆ. ಸೋಂಕಿನ ಪ್ರಭಾವದಿಂದ ಇತ್ತ ಸಾಕಾಣಿಕೆ ವೆಚ್ಚವೂ ಕೈ ಸೇರುತ್ತಿಲ್ಲ ಎನ್ನುತ್ತಾರೆ ಫೌಲ್ಟ್ರಿ ಫಾರಂ ಮಾಲೀಕರು.
ಕೋಳಿ ವಿತರಣೆ ಮಾಡುವ ಮಧ್ಯವರ್ತಿಗಳು ಸಾಕಾಣಿಕೆದಾರರಿಂದ ಒಂದು ಕೆ.ಜಿ. ಗೆ 25ರಿಂದ 30 ರೂ. ನೀಡಿ ಖರೀದಿಸುತ್ತಿದ್ದಾರೆ. ನಂತರ ಅವರು 60-70 ರೂಪಾಯಿ ಲಾಭವನ್ನು ಇಟ್ಟುಕೊಂಡು ಮಾಂಸದ ಅಂಗಡಿಗಳಿಗೆ ವಿತರಣೆ ಮಾಡುತ್ತಾರೆ. ಚಿಕನ್ ಸ್ಟಾಲ್ನವರು ಪ್ರತಿ ಕೆ.ಜಿ.ಗೆ 160-180 ರವರೆಗೆ ಮಾರಾಟ ಮಾಡುತ್ತಿದ್ದಾರೆ. ಇದು ಸಾಕಾಣಿಕೆದಾರರ ಅಸಮಾಧಾನಕ್ಕೆ ಕಾರಣವಾಗಿದೆ. ಹಾಕಿದ ಬಂಡವಾಳವೂ ತಮ್ಮ ಕೈ ಸೇರುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.