ಬೆಂಗಳೂರು :ಲಾಕ್‌ಡೌನ್ ಸಂದಿಗ್ಧ ಪರಿಸ್ಥಿತಿ ಹೊರಗೆ ದುಡಿಯುವ ಹಾಗೂ ಮನೆಯೊಳಗೆ ದುಡಿಯುವ ಮಹಿಳೆಯರನ್ನು ಹೆಚ್ಚಿನ ಒತ್ತಡಕ್ಕೆ, ಆತಂಕಕ್ಕೆ ದೂಡಿದೆ. ಎಲ್ಲಾ ವಿಭಾಗಗಳಲ್ಲೂ ಕೆಲಸ ಮಾಡುವ ಮಹಿಳೆಯರಿಗೆ ಕೆಲಸ ಕಳೆದುಕೊಳ್ಳುವ ಆತಂಕ ಒಂದೆಡೆಯಾದ್ರೆ, ಸಂಬಳವಿಲ್ಲದೆ ಆರ್ಥಿಕ ಬಿಕ್ಕಟ್ಟನ್ನೂ ಮತ್ತೊಂದೆಡೆ ಎದುರಿಸಬೇಕಾಗಿದೆ.
ಮನೆಗೆಲಸದವರಿಗೆ ಕಳೆದ ಮೂರ್ನಾಲ್ಕು ತಿಂಗಳಿಂದಲೂ ಕೆಲಸ ಇಲ್ಲ. ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುವ ಮಹಿಳೆಯರೂ ಕೊರೊನಾ ಭೀತಿಯಿಂದಲೇ ಪ್ರತಿನಿತ್ಯ ದುಡಿಯಬೇಕಾಗಿದೆ. ಕಟ್ಟಡ ಕಾರ್ಮಿಕರು ಕೆಲಸವಿಲ್ಲದೆ ಬಡತನದಲ್ಲಿ ಮತ್ತಷ್ಟು ಮುಳುಗುವಂತೆ ಮಾಡಿದೆ.
ನಿತ್ಯ ಅನಿವಾರ್ಯವಾಗಿ, ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿರುವ ಮಹಿಳಾ ಪೊಲೀಸ್ ಸಿಬ್ಬಂದಿ, ಅಧಿಕಾರಿಗಳು, ವೈದ್ಯರು, ಆರೋಗ್ಯ ಕಾರ್ಯಕರ್ತರು ತಮ್ಮ ಪುಟ್ಟ ಮಕ್ಕಳಿಂದ, ಕುಟುಂಬದಿಂದ ದೂರ ಇದ್ದು ಕೊರೊನಾದ ವಿರುದ್ಧ ಹೋರಾಡುತ್ತಿದ್ದಾರೆ. ಮನೆಯಲ್ಲಿರುವ ಮಹಿಳೆಯರಿಗೆ ಲಾಕ್‌ಡೌನ್ ಆರಂಭದಲ್ಲಿ ಕುಟುಂಬದ ಜೊತೆ ಸಮಯ ಕಳೆಯೋದು ಖುಷಿ ಅನಿಸಿದ್ರೂ ನಂತರದಲ್ಲಿ ಹೆಚ್ಚಾದ ದೌರ್ಜನ್ಯ, ಕುಟುಂಬ ಕಲಹಗಳು ದುಃಖಕ್ಕೆ ದೂಡಿವೆ.
ದುಡಿಮೆಯ ಮಹಿಳೆಯರಿಗೆ ಸವಾಲಾದ ಕೊರೊನಾ.. ಮನೋಸ್ಥೈರ್ಯ ಹೆಚ್ಚಿಸೋದು ಹೇಗೆ? ಮಹಿಳಾ ಪೊಲೀಸರು ಹೊರಗಡೆ ಶೌಚಾಲಯ ವ್ಯವಸ್ಥೆ ಇಲ್ಲದೆ, ಠಾಣೆಗಳಲ್ಲೂ ಸ್ವಚ್ಚತೆ ಇಲ್ಲದೆ ಪರದಾಡಿದಂತಹ ಘಟನೆಗಳು ನಡೆದಿವೆ. ಕಚೇರಿ ಕೆಲಸದ ಜೊತೆಗೆ ಮನೆಕೆಲಸ ನಿಭಾಯಿಸುವುದು ಹೆಚ್ಚಿನ ಒತ್ತಡ ನೀಡಿದೆ. ಅಲ್ಲದೆ ಲಾಕ್ಡೌನ್ನಲ್ಲಿ ವಾಹನಗಳನ್ನು ಜಪ್ತಿ ಮಾಡುವ ಸಂದರ್ಭದಲ್ಲಿ ದಿನದ ಎಲ್ಲಾ ಹೊತ್ತು ರಸ್ತೆಯಲ್ಲೆ ಕಳೆಯಬೇಕಾಗುತ್ತದೆ.
ಈ ಬಗ್ಗೆ ಈಟಿವಿ ಭಾರತ್ ಜೊತೆ ಮಾತನಾಡಿದ ಜನವಾದಿ ಮಹಿಳಾ ಸಂಘಟನೆಯ ಉಪಾಧ್ಯಕ್ಷೆ ವಿಮಲಾ ರಾವ್, ಕೋವಿಡ್ 19, ಕಾರಣದಿಂದ ಲಾಕ್ ಡೌನ್ ಘೋಷಣೆಯಾಯ್ತು. ಇದು ಮಹಿಳೆಯರ ಮೇಲೆಯೂ ಕೆಟ್ಟ ಪರಿಣಾಮ ಬೀರಿದೆ. ಕೌಟುಂಬಿಕ ಹೊರೆ ಜಾಸ್ತಿಯಾಯ್ತು. ಕೌಟುಂಬಿಕ ದೌರ್ಜನ್ಯಗಳೂ ಹೆಚ್ಚಾಗಿವೆ. ಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ದ ಮಹಿಳೆಯರು ಕೆಲಸದ ಭದ್ರತೆಗೆ ಭಯಪಡಬೇಕಾಯಿತು. ಮನೆಕೆಲಸ ಮಾಡುತ್ತಿದ್ದ ಮಹಿಳೆಯರು, ಸಂಬಳ ಇಲ್ಲದೆ ಕೆಲಸ ಇಲ್ಲದೆ ಕಷ್ಟ ಅನುಭವಿಸಬೇಕಾಯಿತು ಎಂದಿದ್ದಾರೆ.
ಇದರ ಜೊತೆಗೆ ಕೆಲವು ಕಾರ್ಮಿಕರಿಗೆ ತೀರಾ ಅತ್ಯಗತ್ಯವಾದ ಬಿ.ಪಿ, ಶುಗರ್ ಮಾತ್ರೆಗಳನ್ನು ತೆಗೆದುಕೊಳ್ಳಲೂ ಕಷ್ಟ ಆಯ್ತು. ಅಸಂಘಟಿತ ವಲಯದ, ಕಷ್ಟಜೀವಿಗಳ ಸಹಾಯಕ್ಕೆ ಸರ್ಕಾರಗಳು ಧಾವಿಸಬೇಕಿದೆ. ಈ ಕುರಿತು ಗಮನಹರಿಸಲು ಜನವಾದಿ ಸಂಘಟನೆ ಬಿಬಿಎಂಪಿಯನ್ನು ಸಂಪರ್ಕಿಸಿತ್ತು. ಅಸಂಘಟಿತ ವಲಯದ ಮಹಿಳಾ ಕಾರ್ಮಿಕರ ಅಕೌಂಟ್ ಗೆ ಏಳುವರೇ ಸಾವಿರ ರೂಪಾಯಿಯಾದರೂ ಹಾಕುವಂತೆ ಬಿಬಿಎಂಪಿ ಹಾಗೂ ಕೇಂದ್ರಕ್ಕೆ ಮನವಿ ಮಾಡಲಾಯಿತು ಎಂದು ಸ್ಪಷ್ಟನೆ ನೀಡಿದ್ದಾರೆ.
ಸವಾಲಾದ ವರ್ಕ್ ಫ್ರಮ್ ಹೋಂ ಐಟಿ ಉದ್ಯೋಗ
ಬಹುಪಾಲು ಐಟಿ ಕಂಪನಿಗಳು ಮನೆಯಿಂದಲೇ ಕೆಲಸ ನಿರ್ವಹಿಸುವಂತೆ ತನ್ನ ಉದ್ಯೋಗಿಗಳಿಗೆ ಸೂಚಿಸಿವೆ. ನಗರದಲ್ಲಿದ್ದ ಯುವತಿಯರು ಸಾಕಷ್ಟು ಮಂದಿ ಮನೆ ಖಾಲಿ ಮಾಡಿ ಊರು ಸೇರಿದ್ದಾರೆ. ಕೆಲಸದ ಒತ್ತಡವೂ ಹೆಚ್ಚಿದ್ದು, ದಿನದ ಹೆಚ್ಚಿನ ಸಮಯ ಕೆಲಸ ತೆಗೆಸಿಕೊಳ್ಳಲು ಕಂಪನಿಗಳು ಮುಂದಾಗಿದೆ. ಮನೆಯಿಂದಲೇ ಕೆಲಸ ಮಾಡುವುದರಿಂದ ಇಂಟರ್ನೆಟ್ ಲಭ್ಯತೆ ಕಡಿಮೆಯಾಗಿ, ರಾತ್ರಿ ಹೊತ್ತಲ್ಲೂ ದುಡಿಯಬೇಕಾದ ಪರಿಸ್ಥಿತಿ ಬಂದಿದೆ. ಅನೇಕ ಕಚೇರಿಯಲ್ಲಿ ವೇತನದ ಕಡಿತ ಆಗಿದೆ. ಉದ್ಯೋಗದ ಅಭದ್ರತೆಯೂ ಕಾಡುತ್ತಿದೆ ಎಂದಿದ್ದಾರೆ ಐಟಿ ಉದ್ಯೋಗಿ ರಾಣಿ ತಿಳಿಸಿದ್ದಾರೆ.
ಆಪ್ತ ಸಮಾಲೋಚಕರಾದ ಸುಧಾ ಶರ್ಮಾ ಚವತ್ತಿ ಮಾತನಾಡಿ ಆತಂಕ, ಕಷ್ಟ ಈಗ ಎಲ್ಲೆಡೆ ಇದ್ದು, ಮಹಿಳೆಯರೂ ಹೊರತಾಗಿಲ್ಲ. ಲಾಕ್ಡೌನ್ನಿಂದ ಇದುವರೆಗೆ ಮಹಿಳೆ ನಿಭಾಯಿಸಿದ ಪಾತ್ರ ದೊಡ್ಡದು. ಮಕ್ಕಳು, ಹಿರಿಯರನ್ನು ನೋಡಿಕೊಂಡು ವರ್ಕ್ ಫ್ರಂ ಹೋಂ ಮಾಡುತ್ತಿದ್ದಾರೆ. ಸಿಟ್ಟು, ಕಿರಿಕಿರಿ ಹೆಚ್ಚಾಗಿದ್ದು ಇದನ್ನು ಮಹಿಳೆಯರು ನಿಭಾಯಿಸಬೇಕಿದೆ. ಮಹಿಳೆಯರು ಕಷ್ಟವನ್ನು ನಿಭಾಯಿಸುವ ರೀತಿಯನ್ನು ತಾಳ್ಮೆ, ಪ್ರೀತಿಯನ್ನು ಗಳಿಸಿಕೊಳ್ಳಬೇಕಾಗಿದೆ ಎಂದು ಸಲಹೆ ನೀಡಿದ್ದಾರೆ.