ಬೆಂಗಳೂರು:ಕೊರೊನಾದಿಂದ ತಮ್ಮ ಭಾವ ಹಾಗೂ ಅವರ ತಂದೆಯನ್ನು ಕಳೆದುಕೊಂಡು ನೊಂದಿರುವ ಯುವ ನಟನ ಬೆಂಬಲಕ್ಕೆ ನಿಂತಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಕೊರೊನಾ ರೋಗಿಗಳ ಚಿಕಿತ್ಸೆಯಲ್ಲಿ ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಅಕ್ರಮ ಮತ್ತು ನಿಷ್ಕ್ರಿಯತೆಯಿಂದ ತನ್ನವರನ್ನು ಕಳೆದುಕೊಂಡ ಈ ದುಃಖತಪ್ತ ಯುವನಟನ ಹೃದಯವಿದ್ರಾವಕ ಮಾತುಗಳನ್ನೊಮ್ಮೆ ಕೇಳಿ. ‘ರಾಜ್ಯ ಸರ್ಕಾರ ಸಾಮೂಹಿಕ ಹತ್ಯೆ ನಡೆಸುತ್ತಿದೆ’ ಎನ್ನುತ್ತಿದ್ದಾನೆ ಎಂದರು.
ವಿಡಿಯೋ ಮಾಡಿರುವ ಯುವ ನಟ ತಮ್ಮ ಮಾತಿನಲ್ಲಿ, ಸರ್ಕಾರದ ಭ್ರಷ್ಟಾಚಾರವನ್ನು ಪ್ರಸ್ತಾಪಿಸಿದ್ದಾನೆ. ಈ ಬಾರಿ ಕೊರೊನಾ ಹಿಂದಿನ ಬಾರಿಯಂತಿಲ್ಲ. ಸಾಕಷ್ಟು ಭಿನ್ನವಾಗಿದೆ. ಪ್ರತಿಯೊಬ್ಬರೂ ಸುಳ್ಳು ಹೇಳುತ್ತಿದ್ದಾರೆ. ಸರ್ಕಾರ ರೋಗ ನಿಯಂತ್ರಣದ ವಿಚಾರದಲ್ಲಿ ಹೇಳುತ್ತಿರುವ ಮಾತು ಬೇರೆ. ಇರುವ ವಾಸ್ತವ ಅಂಶವೇ ಬೇರೆಯಾಗಿದೆ. ಕಳೆದ ಎರಡು ದಿನದಲ್ಲಿ ನಾನು ನನ್ನ ಭಾವ ಹಾಗೂ ಅವರ ತಂದೆಯನ್ನು ಕಳೆದುಕೊಂಡಿದ್ದೇನೆ. ವಾಸ್ತವಾಂಶ ನನಗೆ ತಿಳಿದಿದೆ ಎಂದಿದ್ದಾರೆ.
ಪಾಸಿಟಿವ್ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಾವಿನ ಸಂಖ್ಯೆ ಕೂಡ ನಿಖರವಾಗಿ ಹೇಳುತ್ತಿಲ್ಲ ಎಂದಿರುವ ಅವರು, ಆರ್ಟಿಪಿಸಿಆರ್ ತಪಾಸಣೆಯಿಂದ ಆರಂಭಿಸಿ, ಪ್ರತಿಯೊಂದಕ್ಕೂ ಆಸ್ಪತ್ರೆಯಲ್ಲಿ ಹಣ ಕೇಳುತ್ತಾರೆ. ಆಮ್ಲಜನಕವನ್ನೇ ಪೂರೈಸಲಾಗದ ಸರ್ಕಾರ, ಇನ್ನೇನು ಕೊಡಲು ಸಾಧ್ಯ. ಆಮ್ಲಜನಕ ಕೊರತೆಯಿಂದ ಒಂದು ದಿನ ಆರು ಮಂದಿ ಸಾವನ್ನಪ್ಪಿರುವುದನ್ನು ಈ ಕಣ್ಣಲ್ಲಿ ನೋಡಿದ್ದೇನೆ. ವ್ಯವಸ್ಥೆ ತುಂಬಾ ಹದಗೆಟ್ಟಿದೆ ಎಂದು ವಿವರಿಸಿದ್ದಾರೆ.
ಒಟ್ಟಾರೆ ಸರ್ಕಾರದ ಅವ್ಯವಸ್ಥೆಯನ್ನು ತಮ್ಮ 13 ನಿಮಿಷದ ವಿಡಿಯೋದಲ್ಲಿ ಸವಿಸ್ತಾರವಾಗಿ ವಿವರಿಸಿದ್ದಾರೆ. ಇವರ ವಿಡಿಯೋವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮೂಲಕ ಸರ್ಕಾರದ ಲೋಪ ತೋರಿಸುವ ಹಾಗೂ ಗಮನ ಸೆಳೆಯುವ ಯತ್ನ ಮಾಡಿದ್ದಾರೆ.