ಬೆಂಗಳೂರು: ಕೊರೊನಾ ನಮ್ಮ ಜೀವನದ ಮೇಲೆ ಹಲವು ಮಾರ್ಗಗಳಲ್ಲಿ ಪರಿಣಾಮ ಬೀರಿದ್ದು, ಸಾಮಾಜಿಕ ಅಂತರದಿಂದ ವರ್ಚುವಲ್ ಕ್ಲಾಸ್ ರೂಂಗಳವರೆಗೆ ನಮಗೇ ತಿಳಿಯದಂತೆ ಜೀವನವು ಸಾಕಷ್ಟು ಬದಲಾಗಿದೆ. ವೃತ್ತಿಪರ ಕೋರ್ಸ್ಗಳ ಪ್ರವೇಶಾತಿ ಮೇಲೆಯೂ ಈ ಮಹಾಮಾರಿ ಹೊಡೆತ ನೀಡಿದ್ದು, ದಾಖಲಾತಿ ಗಣನೀಯವಾಗಿ ಇಳಿಮುಖ ಕಂಡಿದೆ.
ಇಡೀ ದೇಶದಲ್ಲಿ ಸುಮಾರು ನಾಲ್ಕು ಸಾವಿರ ಇಂಜಿನಿಯರಿಂಗ್ ಕಾಲೇಜುಗಳಿದ್ದು, ಒಂದು ವರ್ಷಕ್ಕೆ 15 ಲಕ್ಷ ಇಂಜಿನಿಯರಿಂಗ್ ಪದವೀಧರರು ಹೊರ ಬರುತ್ತಾರೆ. ಇದರ ಜೊತೆಗೆ ಪಾಲಿಟೆಕ್ನಿಕ್, ಐಟಿಐ ಹಾಗೂ ಸಾಫ್ಟ್‌ವೇರ್ ಡೆವಲಪ್ಮೆಂಟ್ ಮಾಡುವ ಸುಮಾರು 10 ಲಕ್ಷ ಸಂಸ್ಥೆಗಳಿವೆ. ಒಟ್ಟಾರೆ 25 ಲಕ್ಷ ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್ ಪಡೆಯುತ್ತಾರೆ. ಆದರೆ ಈ ಬಾರಿ ದಾಖಲಾತಿಯಲ್ಲಿ ತುಂಬಾ ಇಳಿಮುಖವಾಗಿದೆ.
ವೃತ್ತಿಪರ ಕೋರ್ಸ್ಗಳ ಪ್ರವೇಶಾತಿಗೆ ಕೊರೊನಾ ಅಡ್ಡಗಾಲು ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಶುರುವಾಗುವ ಭಯ ಪೋಷಕರಲ್ಲಿದ್ದು, ಮುಂದೆ ಕಾಲೇಜು ಆರಂಭವಾಗದಿದ್ದರೆ ಏಕೆ ಶುಲ್ಕ ಕಟ್ಟಬೇಕು ಎನ್ನುವ ಮನೋಭಾವನೆಯೂ ಇದೆ . ಇನ್ನು ಇಂಜಿನಿಯರಿಂಗ್ ಮಾಡಲು ಬೆಂಗಳೂರಿಗೆ ಹೊರ ರಾಜ್ಯದಿಂದ ವಿದ್ಯಾರ್ಥಿಗಳು ಬರುತ್ತಿದ್ದರು. ಆದರೆ ಆ ಸಂಖ್ಯೆಯೂ ಕುಸಿದಿದೆ.
ಇನ್ನು ಬಳ್ಳಾರಿಯ ರಾವ್ ಬಹದ್ದೂರ್ ವೈ.ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ, ಈಗಾಗಲೇ ಪ್ರವೇಶಾತಿ ಪ್ರಕ್ರಿಯೆಗೆ ಸಾಂಕೇತಿಕವಾಗಿ ಚಾಲನೆ ದೊರೆತಿದೆ. ಕಳೆದ ಶೈಕ್ಷಣಿಕ ಸಾಲಿನಲ್ಲಿ ಬೆಂಗಳೂರು, ಚಿತ್ರದುರ್ಗ, ಮೈಸೂರು ಹಾಗೂ ತುಮಕೂರು ಮತ್ತು ಹುಬ್ಬಳ್ಳಿಯಿಂದಲೂ ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯಲು ಇಚ್ಛಿಸಿದ್ದರು. ಆದರೀಗ ಬಳ್ಳಾರಿ, ಕೊಪ್ಪಳ, ರಾಯಚೂರು, ಬೀದರ್, ಯಾದಗಿರಿ ಜಿಲ್ಲೆಗಳಿಂದ ಮಾತ್ರ ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯಲು ಬಯಸಿದ್ದಾರೆ. ಆದ್ದರಿಂದ ದಾಖಲಾತಿ ಪ್ರಮಾಣ ತಗ್ಗಿದೆ.
ಇನ್ನು ಕೊರೊನಾ ಹಾವಳಿ ನಡುವೆಯೂ ಬೆಳಗಾವಿಯ ಸರ್ಕಾರಿ ಪಾಲಿಟೆಕ್ನಿಕ್‍ಗೆ ಎಲ್ಲ ವಿಭಾಗಗಳಲ್ಲಿ ಸೀಟುಗಳ ಭರ್ತಿಯಾಗಿವೆ. ಏಳು ವಿಭಾಗಗಳಲ್ಲಿ ತಲಾ 63 ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶವಿದ್ದು, ಎಲ್ಲಾ ವಿಭಾಗಗಳ ಸೀಟುಗಳು ಭರ್ತಿಯಾಗಿವೆ.
ಕೊರೊನಾ ಹಿನ್ನೆಲೆಯಲ್ಲಿ ಕಾಲೇಜು ಆರಂಭ ಸಾಧ್ಯವಾಗದ ಕಾರಣ, ಈವರೆಗೆ ಸರ್ಕಾರಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಆನ್‍ಲೈನ್ ಮೂಲಕ ತರಗತಿ ನೀಡಲಾಗುತ್ತಿದೆ. ಸರ್ಕಾರದ ಮಾರ್ಗಸೂಚಿ ಪ್ರಕಾರ ಕಳೆದ ಒಂದು ವಾರದಿಂದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಆಪ್‍ಲೈನ್ ತರಗತಿ ಆರಂಭಿಸಲಾಗಿದೆ.
ಒಟ್ಟಾರೆ ಕೋವಿಡ್ನಿಂದಾಗಿ ಜನರ ಮನಸ್ಥಿತಿ ದಿನಕ್ಕೊಂದು ರೀತಿ ಬದಲಾಗುತ್ತಿದ್ದು, ಅದರ ಪರಿಣಾಮ ಕಾಲೇಜುಗಳ ಮೇಲೂ ಬೀರುತ್ತಿರುವುದು ಈ ಮೂಲಕ ಕಾಣಬಹುದಾಗಿದೆ..