ಬೆಂಗಳೂರು:ಮೂರನೇ ಅಲೆ ಹೆಚ್ಚಾಗಿ ಮಕ್ಕಳಿಗೆ ಬಾಧಿಸಲಿದೆ ಎಂದು ಹೇಳಲಾಗ್ತಿತ್ತು. ಈ ಹಿನ್ನೆಲೆ ಈಗಾಗಲೇ 1 ರಿಂದ 9ನೇ ತರಗತಿಯ ಮಕ್ಕಳಿಗೆ ಆಫ್ಲೈನ್ ತರಗತಿಗಳನ್ನು ಜನವರಿ 31 ರವರೆಗೂ ಬಂದ್ ಮಾಡಲಾಗಿದ್ದು, ಇದರಿಂದ ಕೋವಿಡ್ ಹರಡುವಿಕೆಗೆ ಕೊಂಚ ತಡೆಯಾದಂತಾಗಿದೆ.
ಈವರೆಗೆ ಬೆಂಗಳೂರು ನಗರದಲ್ಲಿ 1 ರಿಂದ 19 ವರ್ಷದ ಒಟ್ಟು 6,974 ಮಕ್ಕಳಲ್ಲಿ ಕೋವಿಡ್ ದೃಢಪಟ್ಟಿದೆ. ನಗರದ ಒಟ್ಟು ಸೋಂಕಿತರ ಪ್ರಮಾಣದಲ್ಲಿ ಶೇ.12ರಷ್ಟು ಪ್ರಮಾಣದಲ್ಲಿ ಮಕ್ಕಳಿಗೆ ಕೋವಿಡ್ ಹರಡುತ್ತಿದೆ. ಆದರೆ ಖಾಸಗಿ ಆಸ್ಪತ್ರೆ ಹೊರತುಪಡಿಸಿ, ಸರ್ಕಾರಿ ಮಕ್ಕಳ ಕೋವಿಡ್ ಆಸ್ಪತ್ರೆಯಾದ ಇಂದಿರಾಗಾಂಧಿ ಆಸ್ಪತ್ರೆಗೆ 10 ಮಕ್ಕಳು ದಾಖಲಾಗಿದ್ದು, ಹೆಚ್ಡಿಯು ಬೆಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಹುತೇಕ ಎಲ್ಲ ಮಕ್ಕಳಲ್ಲಿಯೂ ಸೌಮ್ಯ ಗುಣಲಕ್ಷಣಗಳಿವೆ. ಆದರೆ ಶೇ.1ರಷ್ಟು ಮಕ್ಕಳಲ್ಲಿ ಮಿಸ್-ಸಿ ಗುಣಲಕ್ಷಣ ಇರಬಹುದು ಎನ್ನಲಾಗ್ತಿದೆ. ಅಂದರೆ ಹೃದಯ, ಶ್ವಾಸಕೋಶ, ಕಿಡ್ನಿ, ಮೆದುಳು, ಚರ್ಮ ಅಥವಾ ಕಣ್ಣಿನಲ್ಲಿ ಊತದ ಪರಿಸ್ಥಿತಿ ಕಂಡುಬರುತ್ತದೆ. ಇದಕ್ಕೆ ಮಕ್ಕಳಿಗೆ ಪ್ರತ್ಯೇಕವಾದ ಚಿಕಿತ್ಸಾ ವಿಧಾನದಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯ ನಿರ್ದೇಶಕರು ತಿಳಿಸಿದ್ದಾರೆ.
ಶಿಕ್ಷಣ ಇಲಾಖೆ ವತಿಯಿಂದ ವಿದ್ಯಾರ್ಥಿಗಳಿಗೆ ಕೋವಿಡ್ ಹರಡಿರುವ ಬಗ್ಗೆ ಮಾಹಿತಿ ಕಲೆಹಾಕಿದ್ದು, ಶಿಕ್ಷಣ ಇಲಾಖೆ ಜಿಲ್ಲಾವಾರು ಮಾಹಿತಿ ಸಂಗ್ರಹಿಸಿದೆ. ಇದರ ಪ್ರಕಾರ 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಬೆಂಗಳೂರು ಉತ್ತರದಲ್ಲಿ - 1, ಬೆಂಗಳೂರು ದಕ್ಷಿಣದಲ್ಲಿ- 29 ಹಾಗೂ 7 ಮಂದಿ ಶಿಕ್ಷಕರಿಗೂ ಕೋವಿಡ್ ತಗುಲಿದೆ.
ದಿನಾಂಕ | 0 ರಿಂದ 9 ವರ್ಷದ ಮಕ್ಕಳು | 10-19 ವರ್ಷದ ಮಕ್ಕಳು | ಒಟ್ಟು |
ಜ. 2 | 34 | 100 | 134 |
ಜ.3 | 33 | 109 | 142 |
ಜ. 4 | 53 | 203 | 256 |
ಜ.5 | 99 | 373 | 472 |
ಜ.6 | 128 | 463 | 591 |
ಜ.7 | 208 | 726 | 934 |
ಜ.8 | 207 | 725 | 932 |
ಜ.9 | 261 | 921 | 1182 |
ಜ.10 | 274 | 878 | 1152 |
ಜ. 11 | 295 | 884 | 1179 |
ಒಟ್ಟು | 1592 | 5382 | 6974 |
ಈ ಕುರಿತು 'ಈಟಿವಿ ಭಾರತ'ದೊಂದಿಗೆ ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ.ಬಾಲಸುಂದರ್ ಮಾತನಾಡಿ, ನಗರದಲ್ಲಿ ಡಿಸೆಂಬರ್ ಅಂತ್ಯದಿಂದ ಕೋವಿಡ್ ಹೆಚ್ಚಾಗಿದೆ. ಕಳೆದ ನಾಲ್ಕೈದು ದಿನಗಳಲ್ಲಿ ಸಾವಿರಕ್ಕೂ ಹೆಚ್ಚು ಪ್ರಕರಣಗಳು ಮಕ್ಕಳಲ್ಲಿ ಕಂಡುಬರುತ್ತಿವೆ. ಈ ಬಾರಿ ನಗರದಲ್ಲಿ 15 ಸಾವಿರಕ್ಕೂ ಹೆಚ್ಚು ಮಕ್ಕಳ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಶೇ.10 ರಿಂದ 12ರಷ್ಟು ಮಕ್ಕಳಲ್ಲಿ ಪಾಸಿಟಿವ್ ಕಂಡುಬರುತ್ತಿದೆ. ಆದರೆ ಆಸ್ಪತ್ರೆಗೆ ದಾಖಲಾಗುವ ಮಕ್ಕಳ ಪ್ರಮಾಣ ಬಹಳ ಕಡಿಮೆ ಇದೆ. ಪ್ರತಿನಿತ್ಯ 2 ರಿಂದ 3 ಮಕ್ಕಳು ಮಾತ್ರ ದಾಖಲಾಗುತ್ತಿದ್ದಾರೆ ಎಂದು ಮಾಹಿತಿ ನೀಡಿದರು.