ಬೆಂಗಳೂರು: ಕೋವಿಡ್-19 ಸಂಕಷ್ಟದಲ್ಲೂ ಕೊರೊನಾ ವಾರಿಯರ್ ಆಗಿ ದುಡಿದ ಪೇದೆಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಎಸಿಬಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ 34 ವರ್ಷದ ಪೇದೆಯನ್ನು ಕೊರೊನಾ ತುರ್ತು ಪರಿಸ್ಥಿತಿಯ ಭದ್ರತೆಗಾಗಿ ಕೆ.ಆರ್.ಮಾರುಕಟ್ಟೆ ವಾರ್ಡ್ನ ವ್ಯಾಪ್ತಿಯಲ್ಲಿ ಬರುವ ಟಿಪ್ಪುನಗರದ ಆನಂದಪುರ ಸ್ಲಂ ಬಳಿ ಚೆಕ್ ಪೋಸ್ಟ್ನಲ್ಲಿ ನಿಯೋಜಿಸಲಾಗಿತ್ತು. ಏಪ್ರಿಲ್ 26ರಿಂದ ಅವರು ಈ ಕೆಲಸದಲ್ಲಿ ನಿರತರಾಗಿದ್ದರು. ಸ್ವಲ್ಪ ದಿನದ ಹಿಂದೆ ಜ್ವರ ಮತ್ತು ಕೆಮ್ಮು ಕಾಣಿಸಿಕೊಂಡಿದ್ದರಿಂದ ವಿಕ್ಟೋರಿಯಾ ಆಸ್ಪತ್ರೆಗೆ ಆರೋಗ್ಯ ಪರೀಕ್ಷೆಗೆಂದು ತೆರಳಿದ್ದಾರೆ. ಪಾದರಾಯನಪುರ ಬಳಿಯ ಟಿಪ್ಪುನಗರ ಮೊದಲೇ ಸೂಕ್ಷ್ಮ ಪ್ರದೇಶವಾದ್ದರಿಂದ ಕೊರೊನಾ ಪರೀಕ್ಷೆ ನಡೆಸಲಾಗಿದೆ.
ಬಳಿಕ ಇಎಸ್ಐ ಆಸ್ಪತ್ರೆಗೆ ಚಿಕಿತ್ಸೆಗೆಂದು ಕಳಿಸಲಾಗಿದೆ. ಆದ್ರೆ ಇಂದು ಬೆಳಗ್ಗೆ ರಿಪೋರ್ಟ್ನಲ್ಲಿ ಕೋವಿಡ್-19 ಪಾಸಿಟಿವ್ ಬಂದಿದ್ದು, ಪೇದೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಜೊತೆಗೆ ಇನ್ನಿಬ್ಬರು ಪೊಲೀಸ್ ಸಿಬ್ಬಂದಿ ಪ್ರಥಮ ಸಂಪರ್ಕದಲ್ಲಿದ್ದು, ಜೊತೆ ಜೊತೆಗೆ ಊಟ, ತಿಂಡಿ ಮಾಡುತ್ತಿದ್ದರು. ಆಗಾಗ ಚಾಮರಾಜಪೇಟೆ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದರು ಎಂದು ಪಾಲಿಕೆ ಅಧಿಕಾರಿಗಳು ಹಿಸ್ಟರಿ ಪತ್ತೆ ಹಚ್ಚಿದ್ದಾರೆ.
ಆದರೆ ಅವರ ಪತ್ನಿ, ಕುಟುಂಬಸ್ಥರನ್ನು ಭೇಟಿಯಾಗಿಲ್ಲ. ಮೊದಲೇ ಬೇರೆ ಕಡೆ ಕಳಿಸಿದ್ದರಿಂದ ಕುಟುಂಬದ ಜೊತೆ ಸಂಪರ್ಕ ಇರಲಿಲ್ಲ. ಅದೇ ಕಟ್ಟಡದಲ್ಲಿ ವಾಸವಾಗಿದ್ದ ಮನೆ ಓನರ್ರನ್ನೂ ಭೇಟಿಯಾಗಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಪೊಲೀಸ್ ಸ್ಟೇಷನ್ ಹಾಗೂ ಅವರು ಭೇಟಿಯಾದ ಪೊಲೀಸ್ ಸಿಬ್ಬಂದಿ, ಪ್ರಥಮ, ದ್ವಿತೀಯ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ ಎಂದು ಈಟಿವಿ ಭಾರತ್ಗೆ ಚಾಮರಾಜಪೇಟೆ ವಲಯದ ಆರೋಗ್ಯಾಧಿಕಾರಿ ಮನೋರಂಜನ್ ಹೆಗಡೆ ಮಾಹಿತಿ ನೀಡಿದ್ದಾರೆ.