ಕರ್ನಾಟಕ

karnataka

By

Published : Aug 4, 2020, 11:36 AM IST

ETV Bharat / state

ಭೂಗತ ಪಾತಕಿ ರವಿ ಪೂಜಾರಿ ವಿಚಾರಣೆ ನಡೆಸಿದ್ದ ಸಿಸಿಬಿಯ 14 ಸಿಬ್ಬಂದಿಗೆ ಕೊರೊನಾ!

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಭೂಗತ ಪಾತಕಿ ರವಿ ಪೂಜಾರಿಯ ವಿಚಾರಣೆ ನಡೆಸಿದ್ದ ಸಿಸಿಬಿಯ 14 ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದ್ದು, ಜೈಲಿನಲ್ಲಿರುವವರಿಗೂ ಸೋಂಕು ಹರಡುವ ಭೀತಿ ಶುರುವಾಗಿದೆ.

Corona for CCB staff
ಸಿಸಿಬಿ ಸಿಬ್ಬಂದಿಗೆ ಕೊರೊನಾ

ಬೆಂಗಳೂರು:ಭೂಗತ ಪಾತಕಿ ರವಿ ಪೂಜಾರಿಯ ವಿಚಾರಣೆ ನಡೆಸಿದ್ದ ಸಿಸಿಬಿಯ 14 ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಮಂಗಳೂರಿನ ನ್ಯಾಯವಾದಿ ನೌಶದ್ ಕಾಶಿಂಜಿ ಕೊಲೆ ಹಾಗೂ ಖಾಸಗಿ ವಾಹಿನಿ ಮಾಲೀಕನ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರ ಜೈಲಿನಿಂದ ಕರೆ ತಂದು ರವಿ ಪೂಜಾರಿಯ ವಿಚಾರಣೆ ನಡೆಸಲಾಗಿತ್ತು. ಮಡಿವಾಳ ಬಳಿಯ ಎಫ್​ಎಸ್​ಎಲ್ ಕಚೇರಿಯಲ್ಲಿ ಮುಂಜಾಗ್ರತಾ ಕ್ರಮಗಳೊಂದಿಗೆ ವಿಚಾರಣೆ ನಡೆಸಲಾಗಿತ್ತು. ಆದರೆ ಇದೀಗ ವಿಚಾರಣೆ ನಡೆಸಿದ್ದ ಎಸಿಪಿ, ಇನ್ಸ್​​​ಪೆಕ್ಟರ್​, ಟೈಪಿಸ್ಟ್​ ಸೇರಿದಂತೆ 14 ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸದ್ಯ ರವಿ ಪೂಜಾರಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಅಲ್ಲಿನ ಕೈದಿಗಳು ಮತ್ತು ಸಿಬ್ಬಂದಿಗೂ ಸೋಂಕು ಹರಡುವ ಭೀತಿ ಶುರುವಾಗಿದೆ.

ಸಿಸಿಬಿ ಸಿಬ್ಬಂದಿಗೆ ಕೊರೊನಾ ಸೋಕು ತಗುಲಿರುವುದು ದೃಢಪಡುತ್ತಿದ್ದಂತೆ ವಿಚಾರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ತನಿಖೆ ನಡೆಸಿದ ಅಧಿಕಾರಿಗಳು ಕ್ವಾರಂಟೈನ್​ಗೆ ಒಳಗಾಗಿದ್ದಾರೆ.

ಮುಂಬೈ ಪೊಲೀಸರಿಂದ ಪಾತಕಿ ನಿರಾಳ:

ಮುಂಬೈ ಪೊಲೀಸರು ತನ್ನನ್ನು ವಶಕ್ಕೆ ಪಡೆಯುತ್ತಾರೆ ಎಂಬ ಭೀತಿ ರವಿ ಪೂಜಾರಿಗಿತ್ತು. ಹೀಗಾಗಿ ಅವರ ವಶಕ್ಕೆ ನೀಡದಂತೆ ಅಧಿಕಾರಿಗಳ ಮುಂದೆ ಕೈ ಮುಗಿದು ಬೇಡಿಕೊಂಡಿದ್ದ ಎನ್ನಲಾಗಿದೆ. ಆದರೆ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಿವೆ. ಈ ನಡುವೆ ವಿಚಾರಣೆ ನಡೆಸಿದ್ದ ಸಿಸಿಬಿ ಅಧಿಕಾರಿಗಳಿಗೆ ಸೋಂಕು ತಗುಲಿದೆ. ಹೀಗಾಗಿ ಸದ್ಯಕ್ಕೆ ಮುಂಬೈ ಪೊಲೀಸರು ವಿಚಾರಣೆ ಮುಂದೂಡಿದ್ದಾರೆ. ಇದರಿಂದ ರವಿ ಪೂಜಾರಿ ತಾತ್ಕಾಲಿಕವಾಗಿ ನಿರಾಳನಾಗಿದ್ದಾನೆ. ಸದ್ಯ ಆತನನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ನಿಗಾದಲ್ಲಿ ಇಡಲಾಗಿದೆ.

ABOUT THE AUTHOR

...view details