ಬೆಂಗಳೂರು: ಕ್ರೈಂ ಚಟುವಟಿಕೆ, ಸಮಾಜಘಾತುಕ ಕೆಲಸಗಳನ್ನ ಮಟ್ಟ ಹಾಕುವ ಪೊಲೀಸರಲ್ಲಿ ಕೊರೊನಾ ಸೋಂಕು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿದೆ. ಲಾಕ್ಡೌನ್ ವೇಳೆ ಕಡಿಮೆಯಾಗಿದ್ದ ಕ್ರೈಂ ರೇಟ್ ಲಾಕ್ ಡೌನ್ ಸಡಿಲಿಕೆ ಮಾಡಿದ ಸಂದರ್ಭದಲ್ಲಿ ಹೆಚ್ಚಾಗಿ ದಾಖಲಾಗಿತ್ತು. ಆದರೆ, ಸದ್ಯ ಕೊರೊನಾ ವಾರಿಯರ್ ಗಳಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ಕಾಣುತ್ತಿದ್ದು, ಆರೋಪಿಗಳನ್ನ ಹೆಡೆಮುರಿಕಟ್ಟುವಲ್ಲಿ ಪೊಲೀಸರೇ ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಠಾಣೆಗಳಲ್ಲಿ ಯಾವುದಾದರೂ ಪ್ರಕರಣ ದಾಖಲಾದಾಗ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತಂಡ ರಚನೆ ಮಾಡಿ ಪೊಲೀಸರು ಆರೋಪಿಗಳನ್ನ ಮಟ್ಟ ಹಾಕುತ್ತಿದ್ದರು. ಆದರೆ, ಪ್ರಸ್ತುತ ಕ್ರೈಂ ಚಟುವಟಿಕೆ ನಿಯಂತ್ರಣಕ್ಕೆ ಇಂತಹ ಕ್ರಮ ಕೈಗೊಳ್ಳಲು ಸಿಬ್ಬಂದಿ ಕೊರತೆ ಎದುರಾಗಿದೆ. ಅಷ್ಟೇ ಅಲ್ಲ ಆರೋಪಿಗಳನ್ನ ಸೆರೆ ಹಿಡಿದು ತಂದ ಮೇಲೆ ಕೊರೊನಾ ಭೀತಿ ಸಹ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ನಗರದ 330 ಕೊರೊನಾ ವಾರಿಯರ್ಸ್ಗಳಿಗೆ ಪಾಸಿಟಿವ್ ಬಂದಿದ್ದು, ನಗರದ 65 ಠಾಣೆಗಳನ್ನ ಸೀಲ್ಡೌನ್ ಮಾಡಲಾಗಿದೆ. ಹೀಗಾಗಿ ಜೂನ್ ತಿಂಗಳ ಕ್ರೈಂ ರೇಟ್ ನೋಡುವುದಾದರೆ ಮರ್ಡರ್ -18, ಕೊಲೆಯತ್ನ -೦, ಡಕಾಯಿತಿ-೦, ರಾಬರಿ- 15, ಸರಗಳ್ಳತನ-15, ಹಗಲು ದರೋಡೆ- 6, ರಾತ್ರಿ ದರೋಡೆ- 58, ಮನೆ ಕಳ್ಳತನ-46 ಸೇರಿ ಒಟ್ಟು 1432 ಪ್ರಕರಣ ದಾಖಲಾಗಿದ್ದು ಈ ಅಪರಾಧಿಗಳನ್ನು ಹಿಡಿಯಲಿಕ್ಕೆ ತೆರಳುವುದೇ ಸವಾಲಿನ ಕೆಲಸವಾಗಿದೆ.