ಬೆಂಗಳೂರು:ಕೊರೊನಾ ಕಾಡ್ಗಿಚ್ಚು ಎಲ್ಲೆಡೆ ಹಬ್ಬುತ್ತಿದ್ದು, ಸದ್ಯ ಟೆಂಟ್ ಹೌಸ್ ಹಾಗೂ ಧ್ವನಿ ವರ್ಧಕದವರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಹೌದು, ಮಾರ್ಚ್ನಿಂದ ಜುಲೈವರೆಗೂ ಟೆಂಟ್ ಹೌಸ್ ಹಾಗೂ ಧ್ವನಿ ವರ್ಧಕದವರಿಗೆ ಸೀಸನ್ ಆಗಿದ್ದು, ಹಬ್ಬ-ಶುಭ ಸಮಾರಂಭಗಳು, ಮದುವೆಗಳು ಹೆಚ್ಚಾಗಿ ನಡೆಯುವ ಸಮಯವಿದು. ಆದ್ರೀಗ ಈ ಕೊರೊನಾ ತಂದಿಟ್ಟ ಫಜೀತಿ ಅಷ್ಟಿಷ್ಟಲ್ಲ. ಲಾಕ್ಡೌನ್ನಿಂದಾಗಿ ನಮ್ಮ ಬ್ಯುಸಿನೆಸ್ ಹಾಳಾಗಿದೆ. ಲಾಕ್ಡೌನ್ ಸಡಿಲಿಕೆ ಆಗಿ ಅಂಗಡಿ ತೆಗೆದಿದ್ರೂ ಕೂಡಾ ಅರ್ಡರ್ಗಳು ಇಲ್ಲದಂತಾಗಿದೆ. ಇನ್ನು ಕೆಲಸ ಮಾಡುವವರಿಗೆ ಸಂಬಳ ಕೊಡಲು ನಮ್ಮ ಬಳಿ ಹಣವಿಲ್ಲ ಎಂದು ಧ್ವನಿವರ್ಧಕ ಅಂಗಡಿ ಮಾಲೀಕ ಹರೀಶ್ ತಮ್ಮ ಕಷ್ಟ ತೋಡಿಕೊಂಡಿದ್ದಾರೆ.
ದುಡಿಯುವ ಕೈಗಳನ್ನು ಕಟ್ಟಿ ಹಾಕಿದ ಕೊರೊನಾ: ಸಂಕಷ್ಟದಲ್ಲಿ ಟೆಂಟ್ ಹೌಸ್ ಹಾಗೂ ಧ್ವನಿ ವರ್ಧಕ ಕಾರ್ಮಿಕರು ಅದೇ ರೀತಿ ಟೆಂಟ್ ಹೌಸ್ ಇಟ್ಟುಕೊಂಡಿರುವವರು ಕಳೆದೆರಡು ತಿಂಗಳಿನಿಂದ ಅಂಗಡಿ ಕ್ಲೋಸ್ ಆಗಿದ್ದ ಕಾರಣ ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಪೆಂಡಾಲ್ ಬಟ್ಟೆಗಳನ್ಜು ಇಲಿಗಳು ಕಚ್ಚಿದ್ದು, ನಮಗೆ ಸಾವಿರಾರು ರೂಪಾಯಿ ನಷ್ಟ ಆಗಿದೆ ಎಂದು ರಾಜಾಜಿ ನಗರದಲ್ಲಿ ಟೆಂಟ್ ಹೌಸ್ ಇಟ್ಟುಕೊಂಡಿರುವ ಶ್ರಿಕಾಂತ್ ತಮ್ಮ ಅಳಲನ್ನು ತೋಡಿಕೊಂಡ್ರು.
ಸುಮಾರು 35 ವರ್ಷಗಳಿಂದ ನಾವು ಈ ಟೆಂಟ್ ಹೌಸ್ ನಡೆಸಿಕೊಂಡು ಬರ್ತಿದ್ದೇವೆ. ನಮಗೆ ಯಾವ ವರ್ಷವೂ ಇಂತಹ ಕಷ್ಟ ಎದುರಾಗಿರಲಿಲ್ಲ. ಇದರಿಂದ ಅಡುಗೆ ಭಟ್ಟರು, ಪಾತ್ರೆ ತೊಳೆಯುವವರು, ಟೆಂಟ್ ಹೌಸ್ ಲೇಬರ್ ಪ್ರತಿಯೊಬ್ಬರಿಗೂ ಕಷ್ಟ ಎದುರಾಗಿದೆ. ನಮ್ಮ ಸಮಸ್ಯೆಯನ್ನು ಯಾರೂ ಕೂಡಾ ಕೇಳ್ತಿಲ್ಲ. ಅಸಂಘಟಿತ ವಲಯದ ಕಾರ್ಮಿಕರಾಗಿದ್ರೂ ಸಹ ನಮ್ಮ ಕಷ್ಟಕ್ಕೆ ಯಾರೂ ಸ್ಪಂದಿಸುತ್ತಿಲ್ಲ. ಒಂದು ಮದುವೆ ಆರ್ಡರ್ ನಮಗೆ ಸಿಕ್ಕಿದ್ರೆ 120 ಜನರ ಜೀವನ ನಡೆಯುತ್ತಿತ್ತು. ಅದ್ರೆ ಈ ಕೊರೊನಾ ನಮ್ಮ ಬದುಕನ್ನೇ ಕಿತ್ತು ತಿಂದಿದೆ ಎಂದರು.
ಈಗ ಅಂಗಡಿ ಒಪನ್ ಮಾಡಿದ್ದೇವೆ. ಜೂನ್-ಜುಲೈ ಆಷಾಢದಲ್ಲಿ ನಮಗೆ ವ್ಯಾಪರ ನಡೆಯುವುದಿಲ್ಲ. ಒಟ್ಟಿನಲ್ಲಿ ಕೊರೊನಾದಿಂದ ನಮ್ಮ ಬದುಕು ಅತಂತ್ರವಾಗಿದೆ ಎಂದು ಅರ್.ಅರ್ ಟೆಂಟ್ ಹೌಸ್ ಮಾಲೀಕ ಶ್ರೀಕಾಂತ್ ಈಟಿವಿ ಭಾರತ ಜೊತೆ ತಮ್ಮ ಕಷ್ಟವನ್ನು ಹೇಳಿಕೊಂಡಿದ್ದಾರೆ.