ಬೆಂಗಳೂರು:ಚಾಮರಾಜನಗರದ ಪ್ರಸಿದ್ಧ ಮಲೆಮಹಾದೇಶ್ವರ ಜಾತ್ರಾಮಹೋತ್ಸವಕ್ಕೂ ಕೊರೊನಾ ಬಿಸಿ ತಟ್ಟಿದ್ದು, ಈ ಬಾರಿ ಜಾತ್ರಾಮಹೋತ್ಸವ ಸರಳವಾಗಿ ಆಚರಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಚಾಮರಾಜನಗರ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ತಿಳಿಸಿದರು.
ಪ್ರಸಿದ್ಧ ಮಲೆಮಹಾದೇಶ್ವರ ಜಾತ್ರಾಮಹೋತ್ಸವಕ್ಕೂ ತಟ್ಟಿದ ಕೊರೋನಾ ಬಿಸಿ ಈ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಚಾಮರಾಜನಗರ ಉಸ್ತುವಾರಿ ಸಚಿವ ಸುರೇಶ್ ಕುಮಾರ್, ಮಾರ್ಚ್ 22 - 27 ರವರೆಗೆ ಮಲೆಮಹದೇಶ್ವರ ಬೆಟ್ಟದಲ್ಲಿ ಜಾತ್ರೆ ನಡೆಯಲಿದೆ. ಪ್ರತಿವರ್ಷ ಅದ್ಧೂರಿಯಾಗಿ ನಡೆಯುವ ಜಾತ್ರೆಯಲ್ಲಿ ಲಕ್ಷಾಂತರ ಜನ ಭಾಗವಹಿಸುತ್ತಾರೆ. ಆದರೆ, ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಈ ಬಾರಿ ಮಲೆಮಹಾದೇಶ್ವರ ಜಾತ್ರೆಯನ್ನು ಸರಳವಾಗಿ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಈ ಬಗ್ಗೆ ಶಾಸಕರಾದ ನರೇಂದ್ರ, ಎನ್. ಮಹೇಶ್, ಸಚಿವ ಸುರೇಶ್ ಕುಮಾರ್, ಜಿಲ್ಲಾಧಿಕಾರಿ ಸೇರಿ ಸಭೆ ನಡೆಸಿದ್ದು, ಈ ಬಾರಿ ಜಾತ್ರಾಮಹೋತ್ಸವ ಸಾಂಪ್ರದಾಯಿಕವಾಗಿ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ. ಜಾತ್ರೆ ವೇಳೆ ಅನೇಕ ಮಂದಿ ರಸ್ತೆ ಬದಿಗಳಲ್ಲಿ ಮಲಗುತ್ತಾರೆ. ಜಾತ್ರೆ ಅತ್ಯಂತ ಸರಳ ರೀತಿ ಮಾಡುವುದರಿಂದ ರಸ್ತೆ ಬದಿ ಮಲಗುವ ವ್ಯವಸ್ಥೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ದೇವಸ್ಥಾನದ ಸಮೀಪದ ಯಾತ್ರಿ ನಿವಾಸ ಸೇರಿ ವಿವಿಧ ಕಟ್ಟಡಗಳಲ್ಲಿನ ಕೊಠಡಿಗಳನ್ನು ಭಕ್ತರಿಗೆ ನೀಡಬಾರದು ಎಂದು ಸೂಚನೆ ನೀಡಲಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಮುಂಜಾಗೃತ ಕ್ರಮ ಕೈಗೊಳ್ಳಲಾಗುತ್ತಿದೆ. ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.