ಬೆಂಗಳೂರು:ಕೊರೊನಾ ವೈರಸ್ ವಿರುದ್ಧದ ಹೋರಾಟ ಪರೋಕ್ಷವಾಗಿ ಪ್ಲಾಸ್ಟಿಕ್ ನಿರ್ಬಂಧದಂತಹ ನಿರ್ಧಾರವನ್ನೇ ಸರ್ಕಾರ ಸಡಿಲಿಕೆ ಮಾಡುವಂತೆ ಮಾಡಿದೆ. ಏಕ ಬಳಕೆಯ ವಾಟರ್ ಬಾಟಲ್ ಬಳಕೆ ನಿರ್ಧಾರವನ್ನು ಸರ್ಕಾರವೇ ಬದಲಿಸಿಕೊಂಡಿದ್ದು, ಗಾಜಿನ ನೀರಿನ ಬಾಟಲಿ ಜಾಗಕ್ಕೆ ಮತ್ತೆ ಪ್ಲಾಸ್ಟಿಕ್ ವಾಟರ್ ಬಾಟಲ್ ಎಂಟ್ರಿ ಕೊಟ್ಟಿದೆ.
ರಾಜ್ಯದಲ್ಲಿ ಪ್ಲಾಸ್ಟಿಕ್ ಬಳಕೆಗೆ ಬ್ರೇಕ್ ಹಾಕುವ ಭಾಗವಾಗಿ ವಿಧಾನಸೌಧ ಹಾಗೂ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ, ಒಮ್ಮೆ ಬಳಸಿ ಎಸೆಯುವ ಪ್ಲಾಸ್ಟಿಕ್ ಬಾಟಲ್ನಲ್ಲಿನ ಮಿನರಲ್ ವಾಟರ್ ಬದಲು ಗಾಜಿನ ಬಾಟಲಿಯಲ್ಲಿ ಖನಿಜಯುಕ್ತ ಕುಡಿಯುವ ನೀರನ್ನು ವಿತರಿಸುವ ಪರಿಪಾಠಕ್ಕೆ ನಾಂದಿ ಹಾಡಲಾಗಿತ್ತು. ಸಚಿವ ಸಂಪುಟ ಸಭೆ, ಸಮಿತಿಗಳ ಸಭೆ, ಸರ್ವ ಪಕ್ಷ ಸಭೆ, ಅಧಿಕಾರಿಗಳ ಸಭೆ ಹಾಗೂ ಪತ್ರಿಕಾಗೋಷ್ಠಿಯಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲ್ ಬದಲು ಮರುಬಳಕೆಯ ಗಾಜಿನ ನೀರಿನ ಬಾಟಲಿಯಲ್ಲಿ ನೀರು ವಿತರಿಸಲಾಗುತ್ತಿತ್ತು. ಕೆಎಸ್ಆರ್ಟಿಸಿ ಕೂಡ ಪ್ರಯಾಣಿಕರಿಗೆ ಉಚಿತವಾಗಿ ನೀಡುತ್ತಿದ್ದ ಪ್ಲಾಸ್ಟಿಕ್ ವಾಟರ್ ಬಾಟಲ್ ವಿತರಣೆ ಸ್ಥಗಿತಗೊಳಿಸಿ ಪ್ಲಾಸ್ಟಿಕ್ ವಾಟರ್ ಬಾಟಲ್ ವಿರುದ್ಧ ಜಾಗೃತಿ ಮೂಡಿಸಿತ್ತು.
ಆದರೆ, ಈಗ ಕೊರೊನಾ ಸೋಂಕು ಬಂದು ಇಷ್ಟು ದಿನ ಮಾಡಿದ್ದ ಪ್ಲಾಸ್ಟಿಕ್ ವಾಟರ್ ಬಾಟಲ್ ಬಳಕೆ ನಿರ್ಬಂಧವನ್ನೇ ಸಡಿಲಿಕೆಯಾಗುವಂತೆ ಮಾಡಿದೆ. ಸಿಎಂ ಕಚೇರಿ ವಿಧಾನದಲ್ಲಿ ನಡೆಯುವ ಸಭೆಗಳಲ್ಲಿ ಟೇಬಲ್ ಮೇಲೆ ಇರುತ್ತಿದ್ದ ಗಾಜಿನ ನೀರಿನ ಬಾಟಲಿಗಳ ಜಾಗದಲ್ಲಿ ಮತ್ತೆ ಒಮ್ಮೆ ಬಳಸಿ ಎಸೆಯುವ ಪ್ಲಾಸ್ಟಿಕ್ ನೀರಿನ ಬಾಟಲಿಗಳು ಬಂದು ಕುಳಿತಿವೆ. ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಡೆಸುವ ಸುದ್ದಿಗೋಷ್ಠಿಗಳಲ್ಲಿಯೂ ಈಗ ಮತ್ತೆ ಪ್ಲಾಸ್ಟಿಕ್ ನೀರಿನ ಬಾಟಲ್ ರಾರಾಜಿಸುತ್ತಿವೆ. ಪ್ಲಾಸ್ಟಿಕ್ ನಿಷೇಧಕ್ಕೆ ಮುನ್ನುಡಿ ಬರೆದಿದ್ದ ಜಾಗದಲ್ಲೇ ಈಗ ಮತ್ತೆ ಪ್ಲಾಸ್ಟಿಕ್ ಬಳಕೆ ಮರು ಆರಂಭ ಆಗಿದೆ.