ಕರ್ನಾಟಕ

karnataka

ETV Bharat / state

ಲಾಕ್‌ಡೌನ್‌ ಎಫೆಕ್ಟ್‌ : ತ್ರಿಶಂಕು ಸ್ಥಿತಿಯಲ್ಲಿ ಅಸಂಘಟಿತ ಕಾರ್ಮಿಕರ ಬದುಕು! - bangalore corona news

ಮಾ. 24ರಿಂದ ಲಾಕ್‌ಡೌನ್ ಜಾರಿಯಾದ ಬಳಿಕ ನಿತ್ಯವೂ ಇವರಿಗೆ ಸಿಗುತ್ತಿದ್ದ ಕೂಲಿ ಕೆಲಸ ಇಲ್ಲವಾಗಿದೆ. ಪರಿಣಾಮ ದಿನನಿತ್ಯದ ಸಂಪಾದನೆ ಇಲ್ಲದೆ ಊಟಕ್ಕೂ ಪರದಾಡುವ ಸ್ಥಿತಿ ತಲುಪಿದೆ ಅಸಂಘಟಿತ ಕಾರ್ಮಿಕರ ಬದುಕು.

corona-effect-
ಲಾಕ್‌ಡೌನ್‌ ಎಫೆಕ್ಟ್‌

By

Published : Apr 8, 2020, 7:48 PM IST

ಬೆಂಗಳೂರು: ಲಾಡ್‌ಡೌನ್​ನಿಂದಾಗಿ ನಗರ ಪ್ರದೇಶಗಳಲ್ಲಿ ಸೇರಿಕೊಂಡಿರುವ ಸಾವಿರಾರು ಅಸಂಘಟಿತ ಕಾರ್ಮಿಕರ ಬದುಕು ಇತ್ತ ಕೆಲಸವೂ ಇಲ್ಲದೆ ಅತ್ತ ಹಳ್ಳಿಗಳಿಗೂ ವಾಪಸಾಗಲು ಸಾಧ್ಯವಾಗದೆ ಜೀವನ ನಡೆಸಲು ಕೈಯಲ್ಲಿ ಬಿಡಿಗಾಸು ಇಲ್ಲದೆ ತ್ರಿಶಂಕು ಸ್ಥಿತಿ ತಲುಪಿದೆ.

ಹೊಟ್ಟೆಪಾಡಿಗಾಗಿ ಕೂಲಿ ಕೆಲಸ ಅರಸಿ ದೂರದ ಉತ್ತರ ಭಾರತ, ಉತ್ತರ ಕರ್ನಾಟಕ ಹಾಗೂ ಸುತ್ತಮುತ್ತಲ ಜಿಲ್ಲೆಗಳಿಂದ ಸಿಲಿಕಾನ್ ಸಿಟಿ ಬೆಂಗಳೂರಿಗೆ ಲಕ್ಷಾಂತರ ಮಂದಿ ಆಗಮಸಿದ್ದಾರೆ. ದಿನಗೂಲಿಯನ್ನೇ ನೆಚ್ಚಿಕೊಂಡಿರುವ ಇವರಿಗೆ ಇಲ್ಲಿ ಕನಿಷ್ಠ ಸೂರು ಕೂಡ ಇಲ್ಲ. ಬದಲಿಗೆ ಇವರು ಕೆಲಸ ಮಾಡುತ್ತಿರುವ ನಿರ್ಮಾಣ ಹಂತದ ಕಟ್ಟಡಗಳು, ಬಾಡಿಗೆ ಶೆಡ್‌ಗಳು ಅಥವಾ ಕೊಳೆಗೇರಿಗಳಲ್ಲಿ ಗುಡಿಸಲು ಕಟ್ಟಿಕೊಂಡು ಜೀವನ ನಡೆಸುತ್ತಿರುವ ಇವರಿಗೆ ಪ್ರತಿದಿನ ದುಡಿದರಷ್ಟೇ ಬದುಕು. ಇಲ್ಲದಿದ್ದರೆ ಒಪ್ಪೊತ್ತಿನ ಊಟಕ್ಕೂ ತತ್ವಾರ. ಇದೀಗ ಕೊರೊನಾ ಭೀತಿಯಲ್ಲಿ ಲಾಕ್‌ಡೌನ್ ಜಾರಿ ಮಾಡಿರುವುದರಿಂದ ಇವರ ಬದುಕಿಗೆ ಗರ ಬಡಿದಂತಾಗಿದೆ.

ಕಳೆದ ಹದಿನೈದು ದಿನಗಳಿಂದ ಅದರಲ್ಲೂ ಮಾ. 24ರಿಂದ ಲಾಕ್‌ಡೌನ್ ಜಾರಿಯಾದ ಬಳಿಕ ನಿತ್ಯವೂ ಇವರಿಗೆ ಸಿಗುತ್ತಿದ್ದ ಕೂಲಿ ಕೆಲಸ ಇಲ್ಲವಾಗಿದೆ. ಪರಿಣಾಮ ದಿನ ನಿತ್ಯದ ಸಂಪಾದನೆ ಇಲ್ಲದೆ ಊಟಕ್ಕೂ ಪರದಾಡುವ ಸ್ಥಿತಿ ಇದೆ. 24ರ ರಾತ್ರಿ ನಗರ ಬಿಟ್ಟು ಹಳ್ಳಿಗಳಿಗೆ ಹೋಗುವವರು ಹೋಗಬಹುದು ಎಂದು ಸಿಎಂ ಯಡಿಯೂರಪ್ಪ ಸೂಚನೆ ನೀಡಿದ ಬಳಿಕ ಇವರಲ್ಲಿ ಸಾವಿರಾರು ಮಂದಿ ರಾತ್ರೋರಾತ್ರಿ ನಡೆದೇ ನಗರ ಬಿಟ್ಟು ಹೋಗಿದ್ದಾರೆ. ನಗರದಿಂದ ಹೊರ ಹೋಗಲಾಗದೆ ಇಲ್ಲೇ ಉಳಿದವರ ಪರಿಸ್ಥಿತಿ ಚಿಂತಾಜನಕವಾಗಿದೆ.

ಕೆಲವರು ಮಧ್ಯರಾತ್ರಿ ಊರು ಬಿಟ್ಟು ಹೋಗಲು ಪ್ರಯತ್ನಿಸಿದರಾದರೂ ಪೊಲೀಸ್ ಸರ್ಪಗಾವಲು ದಾಟಲಿಕ್ಕೆ ಇವರಿಗೆ ಸಾಧ್ಯವಾಗಲಿಲ್ಲ. ಕೊನೆಗೆ ಜಿಲ್ಲಾಡಳಿತ ಮತ್ತು ಬಿಬಿಎಂಪಿ ಅಧಿಕಾರಿಗಳು ಆಹಾರ ಸೇರಿದಂತೆ ಅಗತ್ಯ ವಸ್ತುಗಳುನ್ನು ಪೂರೈಸುವುದಾಗಿ ತಿಳಿಸಿದರೂ ಸದ್ಯಕ್ಕೆ ಅಕ್ಕಿ ಮತ್ತು ಹಾಲು ಹೊರತುಪಡಿಸಿ ಬೇರೇನೂ ಸಿಗುತ್ತಿಲ್ಲ. ಕೈಯಲ್ಲಿ ಉಳಿದಿದ್ದ ಕಾಸು ಖರ್ಚಾಗಿ ಹೋಗಿದ್ದು, ತರಕಾರಿ-ದಿನಸಿಗೂ ದುಡ್ಡಿಲ್ಲದಂತಾಗಿದೆ. ಅನಾರೋಗ್ಯಕ್ಕೆ ಒಳಗಾಗದರೂ ಚಿಕಿತ್ಸೆಗೆ ದುಡ್ಡಿಲ್ಲದಂತಾಗಿದೆ.

ಲಾಕ್‌ಡೌನ್‌ ಎಫೆಕ್ಟ್‌

ಇಂತಹ ಕಾರ್ಮಿಕರು ನಗರದ ಕೆ.ಆರ್‌ ಪುರ, ವೈಟ್‌ಫೀಲ್ಡ್‌, ಗಂಗಮ್ಮನಗುಡಿ, ಜಯನಗರ, ಯಲಹಂಕ ಸುತ್ತಮುತ್ತ ಸಾವಿರಾರು ಸಂಖ್ಯೆಯಲ್ಲಿದ್ದಾರೆ. ಇವರಿಗೆ ಸ್ವಸಹಾಯ ಸಂಘಗಳು, ಎನ್‌ಜಿಒಗಳು, ಜಿಲ್ಲಾಡಳಿತದ ವತಿಯಿಂದ ಆಗಾಗ್ಗೆ ಆಹಾರ ಪೂರೈಸುತ್ತಿದ್ದಾರಾದರೂ ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ. ತಾವೇ ಊಟ ಸಿದ್ಧ ಮಾಡಿಕೊಳ್ಳಲು ಇವರಿಗೆ ಅಗತ್ಯ ಪಡಿತರ ಮತ್ತು ಗ್ಯಾಸ್ ಸಿಲಿಂಡರ್ ವ್ಯವಸ್ಥೆ ಕೂಡ ಇಲ್ಲ. ಹೊರಗೆ ಹೋಗಲು ಪೊಲೀಸರು ಬಿಡುತ್ತಿಲ್ಲ. ಪರಿಣಾಮ ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿಗೆ ತಲುಪಿದ್ದಾರೆ. ಹೀಗಾಗಿ ಸರ್ಕಾರ ಆಹಾರ ಸೇರಿದಂತೆ ತಮ್ಮ ಅಗತ್ಯತೆಗಳನ್ನು ಪೂರೈಸಬೇಕು ಎಂದು ಗೋಗರೆಯುತ್ತಿದ್ದಾರೆ.

ಲಾಕ್‌ಡೌನ್ ಜಾರಿಯಾದಾಗಿನಿಂದ ಕೆಲಸ ಕಾರ್ಯವಿಲ್ಲದೆ ಕಂಗಾಲಾಗಿರುವ ಅಸಂಘಟಿತ ವಲಯಗಳ ಕಾರ್ಮಿಕರು ಕೂಲಿ ಸಿಗುವ ಭರವಸೆಯಲ್ಲೇ ತಮ್ಮ ಗುತ್ತಿಗೆದಾರರ ಕರೆಗಾಗಿ ಕಾಯುತ್ತಾ ಕೂತಿದ್ದಾರೆ. ಆದರೆ ಗುತ್ತಿಗೆದಾದರರು ಹಾಗೂ ಮೇಸ್ತ್ರಿಗಳು ಈಗಾಗಲೇ ಏ. 14ರವರೆಗೆ ಲಾಕ್‌ಡೌನ್‌ ಮುಗಿಯುವರೆಗೆ ಯಾವುದೇ ಕೆಲಸವಿಲ್ಲ ಎಂದು ತಿಳಿಸಿರುವುದರಿಂದ ಯಾವಾಗ ಈ ಬಂಧನದಿಂದ ಬಿಡುಗಡೆ ಸಿಗುತ್ತದೆಯೋ ಎಂದು ಕಾಯುತ್ತಾ ಕೂತಿದ್ದಾರೆ. ಒಂದು ವೇಳೆ ಲಾಕ್‌ಡೌನ್‌ ಏ. 14ರ ನಂತರವೂ ಮುಂದುವರೆದರೆ ತಮ್ಮ ಬದುಕು ಅಕ್ಷರಶಃ ನರಕವಾಗಲಿದೆ ಎನ್ನುತ್ತಾರೆ ಅಸಂಘಟಿತ ಕೂಲಿ ಕಾರ್ಮಿಕರು.

ABOUT THE AUTHOR

...view details