ರಾಜ್ಯದಲ್ಲಿ ಮಾರ್ಚ್ 8ರಂದು ಕೊರೊನಾ ವೈರಸ್ ಕಾಣಿಸಿದ ಮೇಲೆ ಅದು ವೇಗ ಹೆಚ್ಚಿಸಿಕೊಳ್ತಾನೇ ಹೋಯ್ತು. ಇದರಿಂದಾಗಿ ಕೆಟ್ಟು ನಿಂತಿರೋ ಸರ್ಕಾರದ ಆಡಳಿತ ಯಂತ್ರದ ರಿಪೇರಿಗೆ ಅಧಿಕಾರಿ ವರ್ಗ ಸಾಕಷ್ಟು ಸರ್ಕಸ್ ಮಾಡ್ತಿದೆ.
ಅದೇ ಕಾರಣಕ್ಕೆ ಬೆಳಗಾವಿ ಮಹಾನಗರ ಪಾಲಿಕೆಗೆ ಅಂದಾಜು 70 ಕೋಟಿ ರೂ., ನಷ್ಟವಾಗಿದೆ. ರಿಯಲ್ ಎಷ್ಟೇಟ್ ಉದ್ಯಮ ನಿಂತ ನೀರಾಗಿದ್ದು, ನಿವೇಶನ ಖರೀದಿಸುವವರೂ ಇಲ್ಲದಂತಾಗಿದೆ. ಹೀಗಾಗಿ, ಉಪನೋಂದಣಿ ಕಚೇರಿಗಳಿಂದಲೂ ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ಸಂಗ್ರಹವಾಗುತ್ತಿಲ್ಲ. ಅಧಿಕಾರಿಗಳು ಕೊರೊನಾ ನಿಯಂತ್ರಣ ಕಾರ್ಯದಲ್ಲಿ ನಿರತರಾಗಿರುವ ಕಾರಣ, ಕಂದಾಯ, ಕೃಷಿ ಹಾಗೂ ತಹಶೀಲ್ದಾರ್ ಕಚೇರಿಗಳಲ್ಲಿ ಯಾವ ಕೆಲಸಗಳೂ ಸಾಗುತ್ತಿಲ್ಲ. ಇದರಿಂದ ಕೂಡ ಆದಾಯಕ್ಕೆ ಕತ್ತರಿ ಬಿದ್ದಿದೆ.
ಬೊಕ್ಕಸಕ್ಕೆ ತುಂಬಿಸಬೇಕಾದ ಆದಾಯಕ್ಕೂ ಕೊಕ್ಕೆ ಹಾಕಿದ ಕೊರೊನಾ ಗಣಿನಾಡು ಬಳ್ಳಾರಿಯಲ್ಲಿ ಕೋವಿಡ್ ಸೋಂಕು ಹರಡಿದ್ರೂ ಯಾವುದೇ ನಾಗರಿಕ ಸೇವಾ ಕಾರ್ಯಗಳು ಸ್ಥಗಿತಗೊಂಡಿಲ್ಲ. ವಿವಿಧ ಕಚೇರಿಗಳ ಸಿಬ್ಬಂದಿಗೆ ಸೋಂಕು ಹರಡಿತ್ತು. ಆದರೂ ಯಾವುದೇ ಸರ್ಕಾರಿ ಕಚೇರಿ ಕೆಲಸಗಳಿಗೆ ಅಡ್ಡಿಯುಂಟಾಗಿಲ್ಲ.
ಆದರೆ, ಹುಬ್ಬಳ್ಳಿ ಇವರಡಕ್ಕಿಂತ ಭಿನ್ನ. ಲಾಕ್ಡೌನ್ ವೇಳೆ ಆದಾಯದಲ್ಲಿ ಗಣನೀಯವಾಗಿ ಇಳಿಕೆ ಕಂಡಿದ್ದ ವಾಣಿಜ್ಯ ನಗರಿಯಲ್ಲಿ ಲಾಕ್ಡೌನ್ ಸಡಲಿಕೆ ನಂತರ ಆದಾಯ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಏಪ್ರಿಲ್ನಿಂದ ಆಗಸ್ಟ್ ಅಂತ್ಯದವರೆಗೆ ಹುಬ್ಬಳ್ಳಿ ಉಪ ನೋಂದಣಾಧಿಕಾರಿಗಳ ಕಾರ್ಯಾಲಯದ ವ್ಯಾಪ್ತಿಯಲ್ಲಿ ನೀಡಿರುವ ಗುರಿಯಲ್ಲಿ ಪ್ರತಿಶತಃ 97.53ರಷ್ಟು ಆದಾಯ ಸಂಗ್ರಹವಾಗಿದೆ.
ಲಾಕ್ಡೌನ್ನಿಂದ ಜನರಲ್ಲಿ ಹಣಕಾಸಿನ ಸಮಸ್ಯೆ. ಕೊರೊನಾ ಭಯಕ್ಕೆ ಹೊಸ ಪ್ರಾಜೆಕ್ಟ್ಗಳಲ್ಲಿ ತೊಡಗಿಕೊಳ್ಳಲು ಹಿಂದೇಟು ಹಾಕುತ್ತಿರುವುದರಿಂದಾಗಿ ಸರ್ಕಾರಕ್ಕೆ ನಿರೀಕ್ಷಿತ ಆದಾಯ ಬರುತ್ತಿಲ್ಲ. ಕೊರೊನಾ ಕಂಟಕ ದೂರವಾಗುವವರೆಗೂ ರಾಜ್ಯದ ಆರ್ಥಿಕತೆ ಪುನಶ್ಚೇತನ ಕಷ್ಟಸಾಧ್ಯ.