ಕರ್ನಾಟಕ

karnataka

ETV Bharat / state

ಕೊರೊನಾ ಎಫೆಕ್ಟ್.. ಮಧ್ಯಂತರ ಆದೇಶಗಳನ್ನು ವಿಸ್ತರಿಸಿದ ಹೈಕೋರ್ಟ್ - ಸೆಪ್ಟೆಂಬರ್​ ಅಂತ್ಯದವರೆಗೂ ಮಧ್ಯಂತರ ಆದೇಶ

ಈ ಬಾರಿ ಎರಡು ತಿಂಗಳ ಅವಧಿಗೆ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ. ಅದರಂತೆ ಅಕ್ರಮ ಕಟ್ಟಡಗಳ ತೆರವುಗೊಳಿಸುವುದಕ್ಕೆ ನೀಡಿದ್ದ ತಡೆ, ಈಗಾಗಲೇ ನೀಡಿರುವ ಜಾಮೀನು ಅಥವಾ ನಿರೀಕ್ಷಣಾ ಜಾಮೀನು ಆದೇಶಗಳು ಮುಕ್ತಾಯಗೊಳ್ಳುವಂತಿದ್ದರೆ ವಿಸ್ತರಣೆಗೊಳ್ಳಲಿವೆ..

High Court
ಹೈಕೋರ್ಟ್

By

Published : Aug 7, 2020, 2:42 PM IST

ಬೆಂಗಳೂರು :ಕೊರೊನಾ ಸೋಂಕು ತೀವ್ರವಾಗಿ ವ್ಯಾಪಿಸುತ್ತಿರುವ ಹಿನ್ನೆಲೆ ರಾಜ್ಯದ ಎಲ್ಲಾ ನ್ಯಾಯಾಲಯಗಳು ನೀಡಿರುವ ಮಧ್ಯಂತರ ಆದೇಶಗಳನ್ನು ಸೆಪ್ಟೆಂಬರ್ ಅಂತ್ಯದವರೆಗೂ ವಿಸ್ತರಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ.

ಮೊಹಮ್ಮದ್ ಆರೀಫ್ ಜಮೀಲ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಕೊರೊನಾ ಸೋಂಕು ರಾಜ್ಯದೆಲ್ಲೆಡೆ ವ್ಯಾಪಿಸುತ್ತಿರುವುದರಿಂದ ನ್ಯಾಯಾಲಯಗಳು ಸೀಮಿತವಾಗಿ ಕಾರ್ಯನಿರ್ವಹಿಸುತ್ತಿವೆ. ಈ ಹಿನ್ನೆಲೆ, ಕಕ್ಷಿದಾರರು ನ್ಯಾಯಾಲಯಕ್ಕೆ ಬರಲು ಕಷ್ಟವಾಗುವುದರಿಂದ ಸರ್ಕಾರದ ಪ್ರಾಧಿಕಾರಗಳು ಅಕ್ರಮ ಕಟ್ಟಡಗಳ ಅಥವಾ ಸರ್ಕಾರಿ ಭೂಮಿಯ ಒತ್ತುವರಿ ತೆರವು ಕಾರ್ಯದಲ್ಲಿ ಸ್ವಲ್ಪ ನಿಧಾನಗೊಳಿಸುವಂತೆ‌‌ ಆದೇಶದಲ್ಲಿ ತಿಳಿಸಲಾಗಿದೆ.

ಕಳೆದ ಮಾರ್ಚ್‌ 24ರಂದು ಕೇಂದ್ರ ಸರ್ಕಾರ‌ ಲಾಕ್​​ಡೌನ್ ಘೋಷಣೆ ಮಾಡಿದ ಕಾರಣ ಕಕ್ಷಿದಾರರ ಹಿತ ಕಾಯಲು ಹಾಗೂ ಸಾರ್ವಜನಿಕರು ಕೋರ್ಟ್​ಗಳಿಗೆ‌ ಅಲೆದಾಡುವುದನ್ನು ತಪ್ಪಿಸಲು ಹೈಕೋರ್ಟ್, ಜಿಲ್ಲಾ ನ್ಯಾಯಾಲಯಗಳು, ಸಿವಿಲ್ ಕೋರ್ಟ್‌ಗಳು, ಫ್ಯಾಮಿಲಿ ಕೋರ್ಟ್‌ಗಳು, ಕಾರ್ಮಿಕ ನ್ಯಾಯಾಲಯಗಳು, ಕೈಗಾರಿಕಾ ನ್ಯಾಯಮಂಡಳಿಗಳು ಸೇರಿ ರಾಜ್ಯದ ಎಲ್ಲ ನ್ಯಾಯಾಲಯಗಳು ಹೊರಡಿಸಿದ ಮಧ್ಯಂತರ ಆದೇಶಗಳನ್ನು ಒಂದು ತಿಂಗಳವರೆಗೆ ವಿಸ್ತರಿಸಿ ಹೈಕೋರ್ಟ್ ಆದೇಶ ನೀಡಿತ್ತು.‌

ಆದರೆ, ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದಿರುವುದರಿಂದ ಪ್ರತಿ ತಿಂಗಳು ಮಧ್ಯಂತರ ಆದೇಶಗಳನ್ನು ವಿಸ್ತರಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ಎರಡು ತಿಂಗಳ ಅವಧಿಗೆ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ. ಅದರಂತೆ ಅಕ್ರಮ ಕಟ್ಟಡಗಳ ತೆರವುಗೊಳಿಸುವುದಕ್ಕೆ ನೀಡಿದ್ದ ತಡೆ, ಈಗಾಗಲೇ ನೀಡಿರುವ ಜಾಮೀನು ಅಥವಾ ನಿರೀಕ್ಷಣಾ ಜಾಮೀನು ಆದೇಶಗಳು ಮುಕ್ತಾಯಗೊಳ್ಳುವಂತಿದ್ದರೆ ವಿಸ್ತರಣೆಗೊಳ್ಳಲಿವೆ.

ABOUT THE AUTHOR

...view details