ಬೆಂಗಳೂರು: ಕೊರೊನಾ ಮಹಾಮಾರಿಗೆ ರಾಜ್ಯ ತತ್ತರಿಸಿದೆ. ಸದ್ಯ ವೈರಸ್ನ ಅಪಾಯ ಅರಿತಂತಿರುವ ಸಾರ್ವಜನಿಕರು ನಿಧಾನವಾಗಿ ಎಚ್ಚೆತ್ತಿಕೊಳ್ಳುತ್ತಿದ್ದಾರೆ. ದೇಶದಲ್ಲೇ ಅತ್ಯಂತ ವೇಗವಾಗಿ ಕೊರೊನಾ ವ್ಯಾಪಿಸುತ್ತಿರುವ ರಾಜ್ಯಗಳಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 100ರ ಸಮೀಪ ಬಂದು ತಲುಪಿದೆ.
ದೇಶದಾದ್ಯಂತ ಲಾಕ್ಡೌನ್ ಆದೇಶ ಜಾರಿಯಾದರೂ ರಾಜ್ಯ ರಾಜಧಾನಿಯಲ್ಲಿ ಜನ ಲಾಕ್ಡೌನ್ ಆದೇಶವನ್ನು ಮೊದಲು ಹಗುರವಾಗಿ ಪರಿಗಣಿಸಿದ್ದ ಬೆಂಗಳೂರಿಗರು ಇದೀಗ ವೈರಸ್ನ ಅಪಾಯ ಮಟ್ಟ ಅರಿವಿಗೆ ಬಂದಿದ್ದು, ಲಾಕ್ಡೌನ್ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.
ಕೊರೊನಾ ಎಫೆಕ್ಟ್: ವೈರಸ್ ಭೀತಿಯಿಂದ ಕೊನೆಗೂ ಎಚ್ಚೆತ್ತ ಬೆಂಗಳೂರು ಮಂದಿ ಕಳೆದೆರಡು ದಿನಗಳಿಗೆ ಹೋಲಿಸಿದರೆ ಅನಗತ್ಯವಾಗಿ ಓಡಾಡುತ್ತಿದ್ದವರ ಸಂಖ್ಯೆ ಗಣನೀಯ ಇಳಿಕೆ ಕಂಡಿದೆ. ಇಂದಿನಿಂದ ಸಾಕಷ್ಟು ಕಠಿಣ ಕ್ರಮಗಳನ್ನು ಅನುಸರಿಸಲು ಆರಂಭಿಸಿದ ಹಿನ್ನೆಲೆ ಕಳೆದ ಮೂರ್ನಾಲ್ಕು ದಿನಗಳಿಗೆ ಹೋಲಿಸಿದರೆ ವಾಹನ ಹಾಗೂ ಜನ ಸಂಚಾರ ಕೊಂಚ ಮಟ್ಟಿಗೆ ತಗ್ಗಿದೆ.
ವಿದೇಶದಿಂದ ಬರುವ ವಿಮಾನಯಾನವನ್ನು ಮಾ.22ರಿಂದ ನಿಲ್ಲಿಸಲಾಗಿದೆ. ಅಲ್ಲಿಯವರೆಗೂ ದೇಶಕ್ಕೆ ನಿತ್ಯ 80 ಸಾವಿರ ಮಂದಿ ಆಗಮಿಸಿದ್ದಾರೆ. ಕನಿಷ್ಠ 20 ಸಾವಿರದಷ್ಟು ರಾಜ್ಯಕ್ಕೆ ಅದರಲ್ಲೂ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಮಂಗಳೂರು ವಿಮಾನ ನಿಲ್ದಾಣಕ್ಕೂ ಬಂದಿಳಿದಿದ್ದಾರೆ. ಇವರಲ್ಲಿ ಹಲವರು ಹೋಂ ಕ್ವಾರಂಟೈನ್ನಲ್ಲಿದ್ದಾರೆ. ಇವರ 14 ದಿನದ ಕ್ವಾರಂಟೈನ್ ಅವಧಿ ಏ.5ಕ್ಕೆ ಮುಕ್ತಾಯವಾಗಲಿದೆ.
ಇನ್ನು ನಿನ್ನೆ ರಾತ್ರಿಯಿಂದ ಹೊಸ ನಿಯಮ ಜಾರಿಯಾಗಿದ್ದು, ಪೊಲೀಸರು ಲಾಠಿ ಬೀಸುವ ಬದಲು, ಅನಗತ್ಯವಾಗಿ ರಸ್ತೆಯಲ್ಲಿ ಓಡಾಡುವವರು, ವಾಹನ ಚಾಲನೆ ಮಾಡುವವರನ್ನು ಸಾಮೂಹಿಕವಾಗಿ ಕ್ವಾರಂಟೈನ್ನಲ್ಲಿ ಇರಿಸುವ ಕಾರ್ಯ ಮಾಡುತ್ತಿದ್ದಾರೆ.
ಇದೆಲ್ಲದರ ಪರಿಣಾಮ ವಾಹನ ಹಾಗೂ ಜನಸಂಚಾರ ಸಾಕಷ್ಟು ಪ್ರಮಾಣದಲ್ಲಿ ತಗ್ಗಿದೆ. ಒಟ್ಟಾರೆ ದಿನದಿಂದ ದಿನಕ್ಕೆ ಜನರಲ್ಲಿ ಜಾಗೃತಿ ಹೆಚ್ಚುತ್ತಿದ್ದು, ಸದ್ಯದ ಮಟ್ಟಿಗೆ ಲಾಕ್ಡೌನ್ ಆದೇಶಕ್ಕೆ ಬೆಂಗಳೂರು ಮಂದಿ ಕೈ ಜೋಡಿಸಿದ್ದಾರೆ.