ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಲೇ ಇದೆ. ಮೊದಲು ಸೋಂಕು ಕಾಣಿಸಿಕೊಂಡಾಗ ಲಸಿಕೆ ಯಾವಾಗ ಬರುತ್ತಪ್ಪಾ ಅಂತ ಕಾದು ಕುಳಿತಿದ್ದವರಿಗೆ ಲಸಿಕೆಯೇನೋ ಬಂತು. ಮತ್ತೊಂದೆಡೆ ನಿಧಾನವಾಗಿ ಕೋವಿಡ್ ಸೋಂಕಿತರ ಸಂಖ್ಯೆಯು ಇಳಿಮುಖ ಕಂಡಿತ್ತು. ಆದರೆ, ಮಾರ್ಚ್ ಅಂತ್ಯದಿಂದ ಕೋವಿಡ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆ ಆಗುತ್ತಿದೆ. ಲಸಿಕೆ ಹಾಕುತ್ತಿದ್ದರೂ ಕೊರೊನಾ ಏಕೆ ನಿಯಂತ್ರಣಗೊಳ್ಳುತ್ತಿಲ್ಲ ಅನ್ನೋ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕಾಡುತ್ತಿದೆ.
ಈವರೆಗೆ ಲಸಿಕೆ ಪಡೆದ ಮೇಲೂ ಕೊರೊನಾ ಬರುವುದಿಲ್ಲ ಎಂದು ಯಾರೂ ಹೇಳಿಲ್ಲ. ಒಂದು ವೇಳೆ ಪ್ರತಿಕಾಯ ಉತ್ಪತ್ತಿಯಾಗದಿದ್ದರೆ, ಸೋಂಕು ಬರುವ ಸಾಧ್ಯತೆ ಇದೆ. ಇತ್ತ ರಾಜ್ಯದಲ್ಲಿ ಆರೂವರೆ ಕೋಟಿ ಜನರು ಇದ್ದು ಇದರಲ್ಲಿ ಕೇವಲ 50 ಲಕ್ಷ ಜನ ಮಾತ್ರ ಲಸಿಕೆ ಪಡೆದಿದ್ದಾರೆ. ಇನ್ನು ಲಸಿಕೆ ಪಡೆದ 45 ದಿನಕ್ಕೆ ಪ್ರತಿಕಾಯ ಉತ್ಪತ್ತಿಯಾಗುತ್ತದೆ.
ಸದ್ಯ ಲಸಿಕೆಯನ್ನು 45 ವರ್ಷ ಮೇಲ್ಪಟ್ಟವರಿಗೆ ಅಷ್ಟೇ ಹಾಕಲಾಗುತ್ತಿದೆ. ಸೋಂಕು ತಡೆಗೆ ಶೇ.100ರಷ್ಟು ಯಾವ ಪರಿಹಾರವೂ ಇಲ್ಲದ ಕಾರಣವೇ ರೋಗನಿರೋಧಕ ಶಕ್ತಿ ಹೆಚ್ಚಿಸಲು ಲಸಿಕೆ ದಾರಿಯನ್ನು ಹುಡುಕಲಾಗಿದೆ. ಹೀಗಾಗಿಯೇ ಲಸಿಕೆ ಹಾಕಿಸಿಕೊಂಡಿದ್ದರೂ ಕೂಡ ಮಾಸ್ಕ್ ಧರಿಸುವಂತೆ, ಸಾಮಾಜಿಕ ಅಂತರ ಕಾಪಾಡುವಂತೆ ವೈದ್ಯರು ಮನವಿ ಮಾಡುತ್ತಿದ್ದಾರೆ.