ಬೆಂಗಳೂರು:ಬನ್ನೇರುಘಟ್ಟ ರಸ್ತೆಯ ಬೇಗೂರು ಬಳಿಯ ಕುಟುಂಬವೊಂದರ ಐದು ಮಂದಿ ಇತ್ತೀಚೆಗೆ ಚೀನಾ ಪ್ರವಾಸ ಹೋಗಿ ಬಂದಿದ್ದರು. ಈ ಕುರಿತು ಮಾಹಿತಿ ಇದ್ದ ನೆರೆಯವರು ಅವರಿಗೂ ಸೋಂಕು ತಗುಲಿರಬಹುದು ಎಂದು ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ಈ ಹಿನ್ನೆಲೆ ಆರೋಗ್ಯ ಇಲಾಖೆ ಸಿಬ್ಬಂದಿ ಸಲಹೆ ಮೇರೆಗೆ ಆ ಕುಟುಂಬ ಸದಸ್ಯರು ಆಸ್ಪತ್ರೆಗೆ ಬಂದು ಆರೋಗ್ಯ ತಪಾಸಣೆ ಮಾಡಿಸಿದ್ದು, ಸದಸ್ಯರಲ್ಲಿ ಸೋಂಕಿನ ಲಕ್ಷಣ ಕಂಡು ಬಂದಿಲ್ಲ ಎಂದು ತಿಳಿದು ಬಂದಿದೆ.
ಇತ್ತ ಕೊರೋನಾ ಶಂಕಿತರ ಚಿಕಿತ್ಸೆ ಮಾಡಿದ ವ್ಯವಸ್ಥೆ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜೀವ್ ಗಾಂಧಿ ಆಸ್ಪತ್ರೆ ನಿರ್ದೇಶಕ ನಾಗರಾಜ್ರವರು, ನಮ್ಮಆಸ್ಪತ್ರೆಯಲ್ಲಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಆದರೆ ಬರೋ ರೋಗಿಗಳು ಪ್ರತ್ಯೇಕ ವಾರ್ಡ್ಗಾಗಿ ಬೇಡಿಕೆಯಿಟ್ಟ ಕಾರಣದಿಂದ ಸರ್ಕಾರವು ಖಾಸಗಿ ಆಸ್ಪತ್ರೆಗಳ ಮೊರೆ ಹೋಗಿದೆ. ಖಾಸಗಿ ಆಸ್ಪತ್ರೆಗಳೊಂದಿಗೆ ಮಾತಾಡಿ ಪ್ರತ್ಯೇಕ ಕೊಠಡಿ ಜೊತೆಗೆ ಹೊಂದಿಕೊಂಡ ಶೌಚಾಲಯ ಒದಗಿಸಿಕೊಡುವಂತೆ ಮನವಿ ಮಾಡಲಾಗಿದೆ ಎಂದರು.
ಕೊರೋನಾ ವೈರಸ್ ರೋಗಿಗಳಿಂದ ಪ್ರತ್ಯೇಕ ವಾರ್ಡ್ ಬೇಡಿಕೆ ಈಗಾಗಲೇ, ಫೋರ್ಟಿಸ್, ಅಪೋಲೋ ,ಮಣಿಪಾಲ್ ಆಸ್ಪತ್ರೆ, ನಾರಾಯಣ ಹೃದಯಾಲಯ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಮಾಡಲಾಗಿದ್ದು, ನಮ್ಮ ಆಸ್ಪತ್ರೆ ಬದಲು ಖಾಸಗಿ ಆಸ್ಪತ್ರೆಗೆ ಪ್ರತ್ಯೇಕ ಕೊಠಡಿ ಇಚ್ಚಿಸುವವರು ಹೋಗಬಹುದಾಗಿದೆ. ಸದ್ಯ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಸರ್ಕಾರದ ವತಿಯಿಂದ ಮಾತುಕತೆ ನಡೆಯುತ್ತಿದ್ದು, ಸಫಲವಾದರೆ ಅಲ್ಲೂ ಕೂಡ ಹೆಚ್ಚುವರಿ ಬೆಡ್ಗಳ ವ್ಯವಸ್ಥೆ ಮಾಡಲಾಗುತ್ತೆ ಎಂದರು.
ಇತ್ತ ಸರ್ಕಾರ ಮತ್ತು ಆರೋಗ್ಯ ಇಲಾಖೆಯು ಖಾಸಗಿ ಆಸ್ಪತ್ರೆಗಳೊಂದಿಗೆ ನಿರಂತರ ಮಾತುಕತೆ ನಡೆಸುತ್ತಿವೆ ಎಂದರು.