ಬೆಂಗಳೂರು:ದೊಡ್ಡ ಸಂಖ್ಯೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳಿದ್ದು, ಅವರನ್ನು ಬಿಜೆಪಿ ಮತದಾರರಾಗಿ ಪರಿವರ್ತನೆ ಮಾಡುವ ದೊಡ್ಡ ಯೋಜನೆ ಹಮ್ಮಿಕೊಂಡಿದ್ದೇವೆ. ಈ ಯೋಜನೆ ನಮಗೆ ಗುಜರಾತ್ನಲ್ಲಿ ಯಶಸ್ಸು ತಂದುಕೊಟ್ಟಿದೆ. ಇದೇ ಪ್ರಯತ್ನವನ್ನು ಕರ್ನಾಟಕದಲ್ಲಿ ಮಾಡುವ ತೀರ್ಮಾನವನ್ನು ಕೋರ್ ಕಮಿಟಿ ಸಭೆಯಲ್ಲಿ ಮಾಡಲಾಗಿದೆ. ಯಾವ ಪ್ರಯೋಗ ಉತ್ತರ ಪ್ರದೇಶ, ಗುಜರಾತ್ನಲ್ಲಿ ಯಶಸ್ಸು ತಂದು ಕೊಟ್ಟಿದೆಯೋ ಅದೇ ಪ್ರಯೋಗವನ್ನು ಕರ್ನಾಟಕದಲ್ಲಿ ಮಾಡಲಿದ್ದೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ನಿನ್ನೆ ತಿಳಿಸಿದ್ದಾರೆ.
ಬಿಜೆಪಿ ಕೋರ್ ಕಮಿಟಿ ಸಭೆ ನಂತರ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತು ವಿಸ್ತೃತವಾಗಿ ಕೋರ್ ಕಮಿಟಿ ಸಭೆ ನಡೆದಿದೆ. ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್, ಬಿ.ಎಸ್ ಯಡಿಯೂರಪ್ಪ, ಅರುಣ್ ಸಿಂಗ್, ಸಹ ಪ್ರಭಾರಿ ಡಿ.ಕೆ ಅರುಣಾ ಅವರ ನೇತೃತ್ವದಲ್ಲಿ ವಿಸ್ತೃತವಾಗಿ ಚರ್ಚೆ ಮಾಡಿದ್ದೇವೆ. ವಿವಿಧ ಕ್ಷೇತ್ರಗಳ ಸರ್ವೇ ರಿಪೋರ್ಟ್ ಚರ್ಚೆ ಆಗಿದೆ. ಆ ರಿಪೋರ್ಟ್ ಪ್ರಕಾರ ಕರ್ನಾಟಕದಲ್ಲಿ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ. ನಿಶ್ಚಳ ಬಹುಮತದಲ್ಲಿ ಅಧಿಕಾರಕ್ಕೆ ಬರುತ್ತೇವೆ. ನಮ್ಮದು ಸೌಂಡ್ ಮಾಡುವ ಕೆಲಸ ಅಲ್ಲ. ಗ್ರೌಂಡ್ ರಿಪೋರ್ಟ್ನಲ್ಲಿ ನಾವು ಯಶಸ್ವಿಯಾಗಿ ಕೆಲಸ ಮಾಡಿದ್ದೇವೆ. ಪ್ರತಿ ಬೂತ್ನಲ್ಲೂ ಗೆಲ್ಲುವ ಕೆಲಸವನ್ನು ಕಾರ್ಯಕರ್ತರು ಮಾಡಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರತಿ ಜಿಲ್ಲೆಯಲ್ಲಿ ಫಲಾನುಭವಿಗಳ ಸಮಾವೇಶ: ಫೆಬ್ರವರಿ ತಿಂಗಳಲ್ಲಿ ಪ್ರಧಾನಿ ಮೋದಿ ಎರಡರಿಂದ ಮೂರು ಬಾರಿ ರಾಜ್ಯಕ್ಕೆ ಭೇಟಿ ಕೊಡುತ್ತಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ವಿವಿಧ ಕೇಂದ್ರ ಸಚಿವರು ಕೂಡ ಆಗಮಿಸಲಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಕಾರ್ಯಕ್ರಮದಲ್ಲಿ ಮತ್ತು ಪಕ್ಷದ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಪ್ರತಿ ಜಿಲ್ಲೆಯಲ್ಲಿ ಫಲಾನುಭವಿಗಳ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 70 ರಿಂದ 80 ರಷ್ಟು ಮತದಾರರು ಕೇಂದ್ರ ಮತ್ತು ರಾಜ್ಯ ಸರ್ಕಾರ ಕಾರ್ಯಕ್ರಮಗಳ ಫಲಾನುಭವಿಗಳಾಗಿದ್ದಾರೆ. ಅವರನ್ನು ಬಿಜೆಪಿ ಮತದಾರರಾಗಿ ಪರಿವರ್ತನೆ ಮಾಡುವ ದೊಡ್ಡ ಯೋಜನೆ ಹಮ್ಮಿಕೊಂಡಿದ್ದೇವೆ. ಈ ಯೋಜನೆ ನಮಗೆ ಗುಜರಾತ್ನಲ್ಲಿ ಯಶಸ್ಸು ತಂದುಕೊಟ್ಟಿದೆ ಎಂದು ತಿಳಿಸಿದರು.
ನಾಲ್ಕು ತಂಡಗಳಲ್ಲಿ ಪಕ್ಷದ ನಾಯಕರ ವಿವಿಧ ತಂಡಗಳು ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಹಳೆ ಮೈಸೂರು ಭಾಗದಲ್ಲಿ ಎರಡು ತಂಡಗಳಾಗಿ ಒಟ್ಟು ನಾಲ್ಕು ತಂಡಗಳಲ್ಲಿ ಯಾತ್ರೆ ನಡೆಸಲು ಯೋಜನೆ ತಯಾರಿಸಿದ್ದೇವೆ. ನಾಲ್ಕೂ ತಂಡಗಳು ಬಹುತೇಕ ಜಿಲ್ಲೆ ಪ್ರವಾಸ ಮಾಡಿದ ನಂತರ ಕೊನೆಗೆ ದಾವಣಗೆರೆಯಲ್ಲಿ ಮಹಾಸಂಗಮ ನಡೆಯುತ್ತದೆ. ರಥಯಾತ್ರೆ, ಫೆಬ್ರವರಿ ಕೊನೆಯ ವಾರದಲ್ಲಿ ಪ್ರಾರಂಭ ಆಗಬಹುದು. ಬಜೆಟ್ ಅಧಿವೇಶನ ಮುಗಿದ ನಂತರ ಆರಂಭಿಸಿ ಮಾರ್ಚ್ ಮೂರನೇ ವಾರದಲ್ಲಿ ಮಹಾಸಂಗಮ ಯಾತ್ರೆ ನಡೆಯಲಿದೆ ಎಂದರು.
ಪ್ರತಿ ಬೂತ್ಗೆ ವಿಜಯ ಸಂಕಲ್ಪ ಯಾತ್ರೆ: ಇದರ ಜೊತೆ ಜೊತೆಗೆ ಪ್ರತಿ ಜಿಲ್ಲೆಯಲ್ಲಿ ವಿವಿಧ ಮೋರ್ಚಾಗಳ ಸಮಾವೇಶ ಮಾಡಲು ಯೋಜನೆ ರೂಪಿಸಿದ್ದೇವೆ. 224 ವಿಧಾನಸಭಾ ಕ್ಷೇತ್ರಗಳಲ್ಲೂ ಯಾತ್ರೆ ಮಾಡುತ್ತೇವೆ. ಯಾತ್ರೆಗೆ ವಿಜಯ ಸಂಕಲ್ಪ ಯಾತ್ರೆ ಎನ್ನುವ ಹೆಸರು ಇಟ್ಟಿದ್ದೇವೆ. ಪ್ರತಿ ದಿನ ದೊಡ್ಡ ಸಮಾವೇಶವನ್ನು ಯಾತ್ರೆಯ ಸಂಜೆ ಆಗುವಂತೆ ರೂಪಿಸಲಾಗಿದೆ. ಎಲ್ಇಡಿ ವ್ಯಾನ್ ಪ್ರತಿ ಬೂತ್ಗೆ ಹೋಗುತ್ತದೆ. ಅಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ಮನದಟ್ಟು ಮಾಡುತ್ತೇವೆ. ನಮ್ಮ ಉದ್ದೇಶ ಯುಪಿ, ಗುಜರಾತ್ ಮಾದರಿಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಶೇಕಡಾ 50ರಷ್ಟು ಮತಗಳನ್ನು ಪಡೆದು, ಯಾವುದೇ ಹಂಗು ಇಲ್ಲದೇ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಬೇಕು ಎನ್ನುವುದಾಗಿದೆ. ಅದಕ್ಕಾಗಿ ಅಭಿವೃದ್ಧಿ ವಿಷಯ ಮುಂದಿಟ್ಟು ಸಿದ್ಧಾಂತಕ್ಕೆ ಕಟಿಬದ್ಧವಾಗಿ ಚುನಾವಣೆ ಎದುರಿಸಲಿದ್ದೇವೆ ಎಂದು ಹೇಳಿದರು.