ಬೆಂಗಳೂರು: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಮೋಸ, ವಂಚನೆ ತಡೆಯಲು ಸಮನ್ವಯ ಸಮಿತಿ ರಚನೆ ಮಾಡಲಾಗುವುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಆರ್ಥಿಕ ಅಪರಾಧಗಳ ಕುರಿತಾದ ವಿವಿಧ ಸಮಸ್ಯೆಗಳ ಬಗ್ಗೆ ವಿಧಾನಸೌಧದಲ್ಲಿ ಇಂದು ಸಂಜೆ ಭಾರತೀಯ ರಿಸರ್ವ್ ಬ್ಯಾಂಕ್ ಹಿರಿಯ ಅಧಿಕಾರಿಗಳು, ಕೆಲ ಬ್ಯಾಂಕ್ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬ್ಯಾಂಕಿಂಗ್ ಕ್ಷೇತ್ರದವರು, ಐ.ಟಿ ತಜ್ಞರು, ಹಿರಿಯ ಪೊಲೀಸ್ ಅಧಿಕಾರಿಗಳು ಈ ಸಮನ್ವಯ ಸಮಿತಿಯಲ್ಲಿರುತ್ತಾರೆ. ಸಿಐಡಿ ಹಿರಿಯ ಅಧಿಕಾರಿಯೊಬ್ಬರು ನೋಡಲ್ ಅಧಿಕಾರಿಯಾಗಿರುತ್ತಾರೆ. ಸಾಮಾನ್ಯ ಜನರ ಅಕೌಂಟ್ ಹಣ ಸುರಕ್ಷಿತವಾಗಿರಬೇಕಾಗುತ್ತದೆ. ಹಾಗಾಗಿ, ಸೈಬರ್ ಕ್ರೈಂ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಪರಾಧ ಹೆಚ್ಚುತ್ತಿದೆ. ಕ್ರೆಡಿಟ್, ಡೆಬಿಟ್ ಕಾರ್ಡ್ಗಳನ್ನು ನಕಲಿ ಮಾಡಿ ಜನರ ಖಾತೆಗಳಲ್ಲಿನ ಹಣ ಲಪಟಾಯಿಸೋದು ಸೇರಿ ಸಾಕಷ್ಟು ಅಪರಾಧಗಳು ಬ್ಯಾಂಕಿಂಗ್ ಕ್ಷೇತ್ರದಲ್ಲಿ ನಡೆಯುತ್ತಿವೆ. ಇದಕ್ಕೆ ಬ್ರೇಕ್ ಹಾಕುವ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇವೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಪರಾಧ ತಡೆಗೆ ಶೀಘ್ರ ಕ್ರಮ ಕೈಗೊಳ್ಳುವುದು ಎಂದರು.
ಬ್ಯಾಂಕ್ಗಳ ಹಾಗೂ ಗ್ರಾಹಕರ ಮಾಹಿತಿಗಳು ಸೋರಿಕೆಯಾಗುತ್ತಿವೆ. ಹಣಕಾಸು ಇಲಾಖೆ, ಸಿಐಡಿ, ಕಾನೂನು ತಜ್ಞರು, ಆರ್ಬಿಐ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳ ಜೊತೆ ಸೇರಿ ಚರ್ಚೆ ಮಾಡಿದ್ದೇನೆ. ಐಟಿ ತಜ್ಞರ ಜೊತೆಯೂ ಚರ್ಚೆ ಮಾಡುತ್ತೇನೆ. ಅವರೂ ಕೂಡ ಸಹಕಾರ ನೀಡಲಿದ್ದಾರೆ. ಸೈಬರ್ ಕ್ರೈಂ ತಡೆಗೆ ಕ್ರಮ ಕೈಗೊಳ್ಳುತ್ತಿದ್ದು, ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಬ್ಯಾಂಕ್ಗಳು ಅಳವಡಿಸಿಕೊಳ್ಳಬೇಕು. ನಿಯಮಗಳನ್ನು ಜಾರಿ ಮಾಡುವ ಬಗ್ಗೆಯೂ ಚರ್ಚೆ ಮಾಡಿದ್ದೇವೆ ಎಂದು ಗೃಹ ಸಚಿವರು ಹೇಳಿದ್ರು.