ಬೆಂಗಳೂರು : ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್, ವಶಿಷ್ಟ ಸೌಹಾರ್ದ ಸಹಕಾರಿ ಬ್ಯಾಂಕ್ ಗಳ ಅವ್ಯವಹಾರ ಪ್ರಕರಣವನ್ನು ಸಿಬಿಐಗೆ ವಹಿಸಲು ಶಿಫಾರಸು ಮಾಡಲಾಗುವುದು ಎಂದು ಸಹಕಾರ ಸಚಿವ ಎಸ್ಟಿ ಸೋಮಶೇಖರ್ ಅವರು ಹೇಳಿದ್ದಾರೆ. ವಿಕಾಸಸೌಧದಲ್ಲಿ ಇಂದು ಸಂಜೆ ನಡೆದ ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್ನ ಅವ್ಯವಹಾರಗಳು ಮತ್ತು ಪುನಃಶ್ಚೇತನ ಹಾಗೂ ವಶಿಷ್ಟ ಸೌಹಾರ್ದ ಸಹಕಾರಿ ಬ್ಯಾಂಕ್ ನ ಅವ್ಯವಹಾರಗಳ ಕುರಿತ ಪರಾಮರ್ಶೆ ಸಭೆಯಲ್ಲಿ ಮಾತನಾಡಿದ ಸಚಿವರು ಈ ಭರವಸೆ ನೀಡಿದ್ದಾರೆ.
ಗುರುರಾಘವೇಂದ್ರ, ವಶಿಷ್ಠ ಸೌಹಾರ್ದ ಸೇರಿದಂತೆ ಇತರೆ ಯಾವುದೇ ಬ್ಯಾಂಕ್ಗಳಲ್ಲಿ ನಡೆದಿರುವ ಅವ್ಯವಹಾರಗಳಿದ್ದರೆ ಆ ಪ್ರಕರಣಗಳನ್ನು ಸಹ ಸಿಬಿಐಗೆ ವಹಿಸಲು ಶಿಫಾರಸು ಮಾಡಲಾಗುತ್ತದೆ. ಈ ಕುರಿತು ನಿರ್ಣಯ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸಹಕಾರ ಸಚಿವರು ಸೂಚಿಸಿದರು.
ಹಗರಣದ ತನಿಖೆ ಆರಂಭವಾಗಿ ಮೂರು ವರ್ಷವಾದರೂ ಸಾಲ ವಸೂಲಾತಿ ಆಗುತ್ತಿಲ್ಲ. ಸಭೆಗಳು ಮಾತ್ರ ನಡೆಯುತ್ತಿವೆಯೇ ಹೊರತು ಯಾವುದೇ ಫಲಿತಾಂಶ ಬರುತ್ತಿಲ್ಲ. ಪ್ರಕರಣವನ್ನು ಸಿಬಿಐಗೆ ವಹಿಸಿದರೆ ಸಮಸ್ಯೆ ಏನು ಎಂದು ಗುರುರಾಘವೇಂದ್ರ ಬ್ಯಾಂಕ್ನ ಆಡಳಿತಾಧಿಕಾರಿಯನ್ನು ಪ್ರಶ್ನಿಸಿದರು. ಸರ್ಕಾರದ ಮೇಲೆ ಠೇವಣಿದಾರರು ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಹೀಗಾಗಿ ಠೇವಣಿದಾರರ ಹಿತಾಸಕ್ತಿ ಕಾಪಾಡುವ ದೃಷ್ಟಿಯಿಂದ ಪ್ರಕರಣವನ್ನು ಸಿಬಿಐಗೆ ವಹಿಸಲಾಗುವುದು. ಸಂಪುಟದಲ್ಲಿ ಈ ಕುರಿತು ಪ್ರಸ್ತಾವನೆ ಮಂಡಿಸಲಾಗುವುದು ಎಂದು ಸಚಿವರು ಹೇಳಿದರು.
ರಕ್ಷಿಸುವ ಪ್ರಶ್ನೆ ಇಲ್ಲ : ಈ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಅಧಿಕಾರಿಗಳು ಸಮರ್ಥರಿದ್ದು ತನಿಖೆ ನಡೆಸುತ್ತಿದ್ದಾರೆ. ಆದರೆ, ಸಾಲ ವಸೂಲಾತಿಯಲ್ಲಿ ವಿಳಂಬವಾಗುತ್ತಿದೆ. ಹೀಗಾಗಿ ಸಿಬಿಐಗೆ ವಹಿಸಿದರೆ ಠೇವಣಿದಾರರಲ್ಲೂ ವಿಶ್ವಾಸ ಮೂಡಲಿದೆ ಎಂದರು. ಸಚಿವರ ಈ ಮಾತಿಗೆ ಶಾಸಕರಾದ ರವಿಸುಬ್ರಮಣ್ಯ, ಸೌಮ್ಯರೆಡ್ಡಿ, ವಿಧಾನಪರಿಷತ್ ಸದಸ್ಯ ಯುಬಿ ವೆಂಕಟೇಶ್ ಅವರು ಸಹಮತ ವ್ಯಕ್ತಪಡಿಸಿದರು. ಸಭೆಯಲ್ಲಿ ಬ್ಯಾಂಕ್ನ ಪುನಶ್ಚೇತನ, ಸಾಲ ವಸೂಲಾತಿಯಲ್ಲಿ ಆಗಿರುವ ಪ್ರಗತಿ ಕುರಿತು ಪರಾಮರ್ಶಿಸಲಾಯಿತು. ಈ ರೀತಿ ವಂಚನೆ ತಡೆಗೆ ಕಾನೂನಿನಲ್ಲಿ ತಿದ್ದುಪಡಿ ತರುವ ಕುರಿತಂತೆ ಚರ್ಚಿಸಲಾಯಿತು.