ಬೆಂಗಳೂರು:ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲಾಗಿದ್ದ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಸದ್ಯದಲ್ಲಿ ಸದನದಲ್ಲಿ ಮಂಡಿಸಲಾಗುತ್ತದೆ. ಯಾವ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ಬಿಡಲ್ಲ. ಎಪಿಎಂಸಿಗಳನ್ನು ಮುಚ್ಚಲೂ ಬಿಡುವುದಿಲ್ಲ. ಹಾಗಾಗಿ ರೈತರು ಆತಂಕ ಪಡಬೇಕಿಲ್ಲ ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರೈತರ ಹಿತಕ್ಕಾಗಿ ಎಪಿಎಂಸಿ ಕಾಯ್ದೆ ರೂಪಿಸಲಾಗಿದೆ. ರೈತರ ಅನುಕೂಲಕ್ಕಾಗಿಯೇ ಬೆಳೆ ಹಕ್ಕು ಎಂದು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ತಂದಿದೆ. ಅದನ್ನು ಕಾಯ್ದೆ ಮಾಡಲಾಗುತ್ತಿದೆ. ಆದರೆ, ಈ ಹಂತದಲ್ಲಿ ರೈತರಿಗೆ ಅನ್ಯಾಯವಾಗುತ್ತಿದೆ ಎನ್ನುವ ಕೂಗು ರೈತ ಸಂಘಟನೆಗಳಿಂದ ವ್ಯಕ್ತವಾಗುತ್ತಿದೆ. ಅಪಪ್ರಚಾರ ನಡೆಸಲಾಗುತ್ತಿದೆ. ಆದರೆ ವಾಸ್ತವವಾಗಿ ಇದು ರೈತಪರ ಕಾಯ್ದೆಯಾಗಿದೆ ಎಂದು ಸಮರ್ಥಿಸಿಕೊಂಡರು.
ಕೇಂದ್ರದ ಕಾಯ್ದೆಯಂತೆ ರೈತ ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು ಎನ್ನುವ ಕಾಯ್ದೆ ಜಾರಿಗೆ ತರಲಾಗುತ್ತದೆ. ಎಲ್ಲೆಲ್ಲಿ ಎಷ್ಟು ದರ ಎಂದು ಪ್ರಕಟಿಸಲಾಗುತ್ತದೆ. ಆ ದರಕ್ಕೆ ಮಾರಾಟ ಮಾಡಲು ಅವಕಾಶವಿದೆ. ಪಾನ್ ಕಾರ್ಡ್ ಇದ್ದವರು ರೈತರ ಬೆಳೆ ಖರೀದಿ ಮಾಡಬಹುದು. ಇದರಿಂದ ಎಪಿಎಂಸಿಗೆ ಯಾವುದೇ ನಷ್ಟ ಇಲ್ಲ ಎಂದರು.
ಈವರೆಗೂ ಶೇ.1.5 ರಷ್ಟು ಸೆಸ್ ಸಂಗ್ರಹ ಮಾಡಲಾಗುತ್ತಿತ್ತು. ಈಗ 1 ರೂ.ಗೆ ನಿಗದಿಪಡಿಸಲಾಗಿದೆ. ಮತ್ತೆ ಕ್ಯಾಬಿನೆಟ್ಗೆ ತಂದು 35 ಪೈಸೆ ನಿಗದಿಪಡಿಸಲಾಗಿದೆ. ಇದರಿಂದ 120 ಕೋಟಿ ಆದಾಯ ಸಂಗ್ರಹವಾಗಲಿದೆ. ಎಪಿಎಂಸಿ ನಿರ್ವಹಣೆಗೆ ಕೊರತೆಯಾದಲ್ಲಿ ಸರ್ಕಾರವೇ ಉಳಿದ ವೆಚ್ಚವನ್ನು ಭರಿಸಲಿದೆ ಎಂದರು.
ಎಪಿಎಂಸಿಗಳು ಮುಚ್ಚಿಹೋಗಲಿವೆ, ರೈತರಿಗೆ ಅನ್ಯಾಯವಾಗಲಿದೆ ಎನ್ನುವುದು ಸುಳ್ಳು. ಎಪಿಎಂಸಿ ಮುಚ್ಚಲ್ಲ. ಉತ್ತಮ ಭೂಮಿಯಲ್ಲಿ ಎಪಿಎಂಸಿ ತಲೆ ಎತ್ತಿವೆ. ಸಹಕಾರ ಇಲಾಖೆಯಿಂದ ಎಪಿಎಂಸಿಯಲ್ಲೇ ಬೆಳೆ ಮಾರಾಟಕ್ಕೆ ಏನೆಲ್ಲ ಹೊಸದಾಗಿ ಸೌಲಭ್ಯ ಬೇಕೋ ಅದೆಲ್ಲವನ್ನೂ ಕಲ್ಪಿಸುವ ಚಿಂತನೆ ಮಾಡಿದ್ದೇವೆ. ಎಪಿಎಂಸಿಗೆ ಹೆಚ್ಚಿನ ಸೌಕರ್ಯ ಕೊಡಬೇಕು. ರೈತರು ಎಪಿಎಂಸಿಯಲ್ಲೇ ಮಾರಾಟ ಮಾಡಲು ಏನೆಲ್ಲ ಮಾಡಬೇಕು ಎನ್ನುವ ಕುರಿತು ಸಭೆ ನಡೆಸಲಾಗುತ್ತದೆ. ಎಲ್ಲ ಎಪಿಎಂಸಿ ನಿರ್ದೇಶಕರನ್ನು ಕರೆಸಿ ಸಭೆ ನಡೆಸಿ ಅಭಿವೃದ್ಧಿ ಮಾಡಲು ಚಾಲನೆ ನೀಡಲಾಗುತ್ತದೆ ಎಂದರು.