ಬೆಂಗಳೂರು: ರೈತನ ಜೀವನದಲ್ಲಿಬಹಳ ಸುಧಾರಣೆ ಕಂಡು ಬಂದಿಲ್ಲ. ಅವರ ಬದುಕು ಕೇವಲ ಹೋರಾಟವೇ ಆಗಿದೆ. ರೈತರಿಗೆ ಉತ್ತಮ ಸೌಕರ್ಯ ಕಲ್ಪಿಸುವ ಕಾರ್ಯ ಆಗಬೇಕು. ಇದಕ್ಕಾಗಿ ಬಡವರಾಗಿ ಹುಟ್ಟಿ ಬಡವರಾಗಿಯೇ ಸಾಯಬೇಡಿ. ಭ್ರಷ್ಟ ವ್ಯವಸ್ಥೆ ತೊಡೆದು ಹಾಕಿ ಹೊಸ ವ್ಯವಸ್ಥೆಯನ್ನು ಸೃಷ್ಟಿಸಲು ಸಹಕರಿಸಿ ಎಂದು ಆಮ್ ಆದ್ಮಿ ಪಕ್ಷದ ನಾಯಕ ಭಾಸ್ಕರ್ ರಾವ್ ತಿಳಿಸಿದರು.
ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ಹಮ್ಮಿಕೊಂಡ ಬೃಹತ್ ರೈತ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರೈತರಿಗೆ ಉತ್ತಮ ಸೌಲಭ್ಯವಿಲ್ಲ, ಸಾರಿಗೆ, ಮೂಲಭೂತ ಸೌಕರ್ಯ ಇಲ್ಲ. ಆರೋಗ್ಯ, ಮಕ್ಕಳಿಗೆ ಉತ್ತಮ ಶಿಕ್ಷಣ ಇಲ್ಲ. ಬದುಕು ಕೇವಲ ಹೋರಾಟವೇ ಆಗಿದೆ. 2497 ರೈತರು ಬೇರೆ ಬೇರೆ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರು.
ಶೇ.40 ಸರ್ಕಾರ ಮುಂದುವರಿಯುವುದು ಸರಿಯಲ್ಲ: ಭಾಸ್ಕರ್ ರಾವ್ ಆಮ್ ಆದ್ಮಿ ಪಕ್ಷ ದಿಲ್ಲಿ, ಪಂಜಾಬ್ ಜನತೆಯ ವಿಶ್ವಾಸ ಗಳಿಸಿ ಅಧಿಕಾರಕ್ಕೆ ಬಂದಿದೆ. ಹಣ, ಜಾತಿ, ತೋಳ್ಬಲ ಇಲ್ಲದೇ ಗೆದ್ದಿದ್ದೇವೆ. ಪ್ರಾಮಾಣಿಕವಾಗಿ ಜನರ ಪರ ಕೆಲಸ ಮಾಡಿದವರು ಅಧಿಕಾರಕ್ಕೆ ಬಂದಿದ್ದಾರೆ. ಇಲ್ಲಿಯೂ ಮುಂದಿನ ದಿನಗಳಲ್ಲಿ ಉತ್ತಮರು ಆಯ್ಕೆಯಾಗಿ ಅಧಿಕಾರಕ್ಕೆ ಬರಲಿದ್ದಾರೆ. ಶ್ರೀಲಂಕಾ ಮಾದರಿಯಲ್ಲಿ ದಿಲ್ಲಿ, ಪಂಜಾಬ್ ಆರ್ಥಿಕವಾಗಿ ಮುಳುಗುತ್ತದೆ ಎನ್ನುತ್ತಿದ್ದಾರೆ. ಆದರೆ, ದಿಲ್ಲಿಯಲ್ಲಿ ಸಾಲ ಮಾಡಿ ಸರ್ಕಾರ ನಡೆಯುತ್ತಿಲ್ಲ. ಕರ್ನಾಟಕ ರಾಜ್ಯ ಸಾಲದಲ್ಲಿದೆ ಎಂದರು.
ಬಡತನ ಒಂದು ಶಾಪ ಇದ್ದಂತೆ. ಇದರಿಂದ ಹೊರಬರಲು ಅವಕಾಶ ಇದೆ. ನಮ್ಮ ಪಕ್ಷ ಹೊಸದಾಗಿದೆ. ಯುವಕರು ರಾಜಕಾರಣದತ್ತ ಪ್ರವೇಶ ಮಾಡಬೇಕು. ಎರಡು ಮೂರು ಅವಧಿಗೆ ಆಯ್ಕೆಯಾಗಿ ಐಷಾರಾಮಿ ಬದುಕು ನಡೆಸುವವರಿಗೆ ಅವಕಾಶ ಸಾಕು. ಉತ್ತರ ಕರ್ನಾಟಕ ಭಾಗದ ನಾಗರಿಕರ ಸಂಕಷ್ಟ ಹೇಳತೀರದು. ಜನರ ಕಷ್ಟಕ್ಕೆ ಜನಪ್ರತಿನಿಧಿಗಳು ಬರುತ್ತಿಲ್ಲ. ಶೇ.40% ಸರ್ಕಾರ ಮುಂದುವರಿಯುವುದು ಸರಿಯಲ್ಲ. ಹಳ್ಳಿಗಳಿಗೆ ನಗರ ಮಾದರಿಯ ಸೌಲಭ್ಯ ಬಂದರೆ ಅನುಕೂಲ. ಇದು ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ಮಾತ್ರ ಸಾಧ್ಯ. ಅಧಿಕಾರಿಗಳನ್ನು ಭ್ರಷ್ಟರನ್ನಾಗಿಸಿದ್ದೇ ರಾಜಕಾರಣಿಗಳು. ಸ್ವಚ್ಛ ಸರ್ಕಾರ ಬೇಕಾಗಿದೆ. ರಾಜ್ಯದ ಯುವಕರಿಗೆ ಕರೆ ಕೊಡುತ್ತೇವೆ, ಭಯ ಬಿಟ್ಟು ಹೊರಗೆ ಬನ್ನಿ ಎಂದರು.
ಇದನ್ನೂ ಓದಿ:ಹಿಂಡಲಗಾ ಅಭಿವೃದ್ಧಿಗೆ ಲೆಟರ್ ಕೊಟ್ಟಿದ್ದು ನಾನೇ, ಅನುಮೋದನೆ ಬಗ್ಗೆ ಮಾಹಿತಿ ಇಲ್ಲ: ಜಿ.ಪಂ ಮಾಜಿ ಅಧ್ಯಕ್ಷೆ ಆಶಾ