ಬೆಂಗಳೂರು: ಮಂಗಳೂರಿನ ಕಂಕನಾಡಿನಲ್ಲಿ ಕಳೆದ ವರ್ಷ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣ ಸಂಬಂಧ ಕಳೆದ ಎರಡೂವರೆ ತಿಂಗಳಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಂಕಿತ ಉಗ್ರ ಶಾರೀಕ್ ಡಿಸ್ಚಾರ್ಜ್ ಆಗಿದ್ದಾನೆ.
ಕಳೆದ ಡಿಸೆಂಬರ್ 17ರಂದು ಕಂಕನಾಡಿನಲ್ಲಿ ಆಟೋದಲ್ಲಿ ತೆರಳುವಾಗಿ ಏಕಾಏಕಿ ಕುಕ್ಕರ್ ಬ್ಲಾಸ್ಟ್ ಆದ ರಭಸಕ್ಕೆ ಶಾರೀಕ್ ತೀವ್ರವಾಗಿ ಗಾಯಗೊಂಡಿದ್ದ. ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಎನ್ಐಎ(ರಾಷ್ಟ್ರೀಯ ತನಿಖಾ ಸಂಸ್ಥೆ) ಹಾಗೂ ಸ್ಥಳೀಯ ಪೊಲೀಸರ ಭದ್ರತೆ ನಡುವೆ ಶಾರೀಕ್ ಚಿಕಿತ್ಸೆ ಪಡೆಯುತ್ತಿದ್ದ.
ಸದ್ಯ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಶಾರೀಕ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾನೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದಂತೆ ವಿಚಾರಣೆ ನಡೆಸಲು ಅನುಮತಿ ಕೋರಿ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಸಂತ್ರಸ್ತ ಚಾಲಕನಿಗೆ ಆಟೋ ಮತ್ತು ಐದು ಲಕ್ಷ ಪರಿಹಾರ: ಮಂಗಳೂರು ನಗರದಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಗಾಯಾಳು ಆಟೋ ಚಾಲಕ ಪುರುಷೋತ್ತಮ ಪೂಜಾರಿಗೆ 5 ಲಕ್ಷ ರೂಪಾಯಿ ಚೆಕ್ ಅನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಭಾನುವಾರ ಹಸ್ತಾಂತರಿಸಿದರು. ನಗರದ ಉಜ್ಜೋಡಿಯಲ್ಲಿರುವ ಪುರುಷೋತ್ತಮ ಪೂಜಾರಿ ಅವರ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ನೂತನ ರಿಕ್ಷಾ ಮತ್ತು 5 ಲಕ್ಷ ರೂ. ಗಳ ಚೆಕ್ ಹಸ್ತಾಂತರಿಸಲಾಯಿತು.