ಬೆಂಗಳೂರು: ನಿಮ್ಮ ಸ್ವಾಭಿಮಾನದ ಬದುಕಿಗೆ ಧಕ್ಕೆಯಾಗದಂತೆ ವ್ಯವಸ್ಥೆ ಕಲ್ಪಿಸುವುದು ನಮ್ಮ ಜವಾಬ್ದಾರಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬೀದಿ ವ್ಯಾಪಾರಿಗಳಿಗೆ ಭರವಸೆ ನೀಡಿದ್ದಾರೆ. ನಗರದಲ್ಲಿ ಬೀದಿ ವ್ಯಾಪಾರಿಗಳ ಸಂಘಟನೆಗಳ ಸಮಾವೇಶದಲ್ಲಿ ಮಾತನಾಡುತ್ತಾ, ಕಾಂಗ್ರೆಸ್ ಪಕ್ಷ ಮಾತ್ರ ನಿಮಗೆ ನೆಮ್ಮದಿ ಬದುಕು ನೀಡಲಿದೆ ಎಂದು ನಂಬಿಕೆ ಇಟ್ಟು ಇಲ್ಲಿಗೆ ಬಂದಿದ್ದೀರಿ. ಸರ್ವಜ್ಞ ಒಂದು ಮಾತು ಹೇಳಿದ್ದಾರೆ.
’’ನಿಂಬೆಗಿಂತ ಶ್ರೇಷ್ಠವಾದ ಹುಳಿಯಿಲ್ಲ, ದುಂಬಿಗಿಂತ ಶ್ರೇಷ್ಠವಾದ ಕಪ್ಪು ಬಣ್ಣ ಇಲ್ಲ, ಈಶ್ವರನಿಗಿಂತ ಶ್ರೇಷ್ಠವಾದ ದೇವರಿಲ್ಲ, ನಂಬಿಕೆಗಿಂತ ಶ್ರೇಷ್ಠವಾದ ಗುಣವಿಲ್ಲ'. ನಿಮ್ಮ ಜನಸಂಖ್ಯೆ ಕಮ್ಮಿ ಇಲ್ಲ. ನೀವು ಸ್ವಂತ ಅಂಗಡಿ ಮಾಡಿಕೊಳ್ಳಲು ಸಾಧ್ಯವಾಗಿಲ್ಲ’’ ಎಂದು ಡಿಕೆಶಿ ಹೇಳಿದರು.
ದೇಶಕ್ಕೆ ನೀವೆಲ್ಲರೂ ಆಸ್ತಿ: ನೀವು ಕೆಟ್ಟ ದಾರಿ ಹಿಡಿಯದೇ, ಸಮಾಜದಲ್ಲಿ ಗೌರವಯುತವಾಗಿ, ಸ್ವಾಭಿಮಾನದ ಬದುಕು, ಬದುಕಲು ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದೀರಿ. ಈ ದೇಶಕ್ಕೆ ನೀವೆಲ್ಲರೂ ಆಸ್ತಿ. ಮಾಲ್ಗಳಲ್ಲಿ, ಎಸಿ ಮಳಿಗೆಗಳಲ್ಲಿ ಖರೀದಿ ಮಾಡುವುದು ಒಂದು ಕಡೆಯಾದರೆ, ಅದೇ ಗುಣಮಟ್ಟದ ಆಹಾರ, ವಸ್ತುಗಳನ್ನು ಅವರಿಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಿಕೊಂಡು ಬರುತ್ತಿದ್ದೀರಿ ಎಂದರು. ನಾನು ವಿದ್ಯಾರ್ಥಿ ನಾಯಕನಾಗಿದ್ದಾಗ ರಾತ್ರಿ ವೇಳೆ ಬೀದಿ ಬದಿ ವ್ಯಾಪಾರಿಗಳ ಬಳಿ ಹೋಗಿ ಚಿತ್ರಾನ್ನ ತಿಂದು ಬದುಕುತ್ತಿದ್ದೆವು. ಆಗ 1 ರೂ.ಗೆ ಒಂದು ಪ್ಯಾಕೆಟ್ ಚಿತ್ರಾನ್ನ ಸಿಗುತ್ತಿತ್ತು. ನಾವು ಎಷ್ಟೇ ಎತ್ತರಕ್ಕೆ ಬೆಳೆದರು ನಾವು ಬಂದ ಹಾದಿ ಮರೆಯಬಾರದು ಎಂದರು.
ಕಾಂಗ್ರೆಸ್ ಪಕ್ಷ ಈ ವರ್ಗದ ಬಗ್ಗೆ ಅಪಾರ ಕಾಳಜಿ ಇಟ್ಟುಕೊಂಡು ಬಂದಿದೆ. ಕಾಂಗ್ರೆಸ್ ಪಕ್ಷ ಸದಾ ನೊಂದು ಬೆಂದ ಬಡವರ ಪರವಾದ ಪಕ್ಷ. ನಿಮ್ಮ ಬದುಕನ್ನು ದಿನ ಬಡ್ಡಿಯಿಂದ ತಪ್ಪಿಸಬೇಕು. ಇಂದಿರಾಗಾಂಧಿ ಅವರು ಬ್ಯಾಂಕ್ ರಾಷ್ಟ್ರೀಕರಣ ಮಾಡಿ, ನಿಮಗೆ ಬಂಡವಾಳಶಾಹಿಗಳ ಕಾಟ ತಪ್ಪಿಸಿದರು. ಆ ಮೂಲಕ ಜನರಿಗೆ ಸುಲಭ ಸಾಲ ಸೌಲಭ್ಯ ಕಲ್ಪಿಸುವಂತೆ ಮಾಡಿದರು. ಈಗ ಬ್ಯಾಂಕ್ಗಳು 10-15 ಸಾವಿರದಷ್ಟು ಸಣ್ಣ ಸಾಲ ನೀಡುವ ವ್ಯವಸ್ಥೆ ಮಾಡಿಕೊಡಲಾಗಿದೆ ಎಂದರು. ರಾಜ್ಯ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸಿ.ವಿ.ರಂಗಸ್ವಾಮಿ ಅವರು ನಿಮ್ಮ ಸಮಸ್ಯೆಗಳ ಬಗೆಹರಿಸಲು ಒಂದು ಪಟ್ಟಿ ನೀಡಿದ್ದಾರೆ. ಇದರಲ್ಲಿ ಪ್ರಮುಖವಾದುದು, ಪಾಲಿಕೆ ಹಾಗೂ ಪೊಲೀಸರಿಂದ ಆಗುತ್ತಿರುವ ಕಿರುಕುಳವನ್ನು ತಪ್ಪಿಸುವುದು. ಇದನ್ನು ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ನಿಮ್ಮ ಪರ ಧ್ವನಿ ಎತ್ತಿದ್ದೆವು: ಕೋವಿಡ್ ಸಮಯದಲ್ಲಿ ನಾವು ನಿಮ್ಮ ಪರ ಧ್ವನಿ ಎತ್ತಿದ್ದೆವು. ವಲಸೆ ಕಾರ್ಮಿಕರಿಂದ ಸರ್ಕಾರ ಬಸ್ ಟಿಕೆಟ್ ದುಪ್ಪಟ್ಟು ಮಾಡಿ ಸುಲಿಗೆ ಮಾಡಲು ಮುಂದಾದಾಗ, ಈ ಕಾರ್ಮಿಕರು ದೇಶ ನಿರ್ಮಾತೃಗಳು ಅವರಿಗೆ ಉಚಿತ ಸಾರಿಗೆ ವ್ಯವಸ್ಥೆ ನೀಡಿ ಎಂದು ನಾವು ಪಕ್ಷದ ವತಿಯಿಂದ 1 ಕೋಟಿ ಚೆಕ್ ನೀಡಿದೆವು. ನಂತರ ಉತ್ತರ ಕರ್ನಾಟಕದ ಭಾಗದ ಕಾರ್ಮಿಕರಿಗೆ ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಯಿತು. ಇನ್ನು ಸಾಂಪ್ರದಾಯಿಕ ವೃತ್ತಿ ಮಾಡಿಕೊಂಡು ಬಂದಿರುವ ಕಾರ್ಮಿಕರಿಗೆ ಸಹಾಯ ಮಾಡಲು ಸರ್ಕಾರದಿಂದ ಸಾಧ್ಯವಾಗಲಿಲ್ಲ. ಕೆಲವರಿಗೆ ಒಂದಿಷ್ಟು ಹಣ ಕೊಟ್ಟು ಮುಗಿಸಿದರು ಎಂದು ಹೇಳಿದರು.
ರಂಗಸ್ವಾಮಿ ಅವರು ತಮ್ಮ ಬೇಡಿಕೆ ಪಟ್ಟಿಯಲ್ಲಿ ಬೀದಿ ಬದಿ ವ್ಯಾಪಾರಿಗಳ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಅಭಿವೃದ್ಧಿ ನಿಗಮ ಸ್ಥಾಪನೆ ವಿಚಾರ ಸೇರ್ಪಡೆ ಮಾಡುತ್ತೇವೆ ಎಂದರು.ಈ ಬೀದಿ ಬದಿ ವ್ಯಾಪಾರಿಗಳಲ್ಲಿ ಮಹಿಳೆಯರೇ ಹೆಚ್ಚು. ಆಕೆಯೇ ಮನೆಯ ಜವಾಬ್ದಾರಿ ನಿಭಾಯಿಸುತ್ತಾರೆ. ನಿಮಗೆ ನೆರವಾಗಲು ನಮ್ಮ ಪಕ್ಷ ಬದ್ಧವಾಗಿದೆ. ಬಿಜೆಪಿಗೆ ಜನರಿಗೆ ಯಾವುದೇ ಸಹಾಯ ಮಾಡಲಿಲ್ಲ ಎಂದರು.
ಇದನ್ನೂ ಓದಿ:2023ರ ರಾಜ್ಯ ಚುನಾವಣೆ ಗಾಂಧಿ - ಗೋಡ್ಸೆ ಸಿದ್ದಾಂತದ ನಡುವಿನ ಹೋರಾಟ: ಬಿ ಕೆ ಹರಿಪ್ರಸಾದ್