ಕರ್ನಾಟಕ

karnataka

ETV Bharat / state

ನಾಗರಕಟ್ಟೆ ಪೂಜೆಗೆ ಅನುಮತಿ ವಿಚಾರದಲ್ಲಿ ಆಡಳಿತ ಪ್ರತಿ ಪಕ್ಷದ ನಡುವೆ ಜಟಾಪಟಿ: ಸದನದ ಬಾವಿಗಿಳಿದು ಧರಣಿ ನಡೆಸಿದ ಬಿಜೆಪಿ - ವಿಧಾನ ಪರಿಷತ್ ಕಲಾಪ

ಬಿಜೆಪಿ- ಕಾಂಗ್ರೆಸ್​ ಸದಸ್ಯರ ವಾಗ್ವಾದ ತಾರಕಕ್ಕೇರುತ್ತಿದ್ದಂತೆ ಸಭಾಪತಿ ಬಸವರಾಜ ಹೊರಟ್ಟಿ ಗರಂ ಆಗಿ ಕಲಾಪವನ್ನು 10 ನಿಮಿಷ ಮುಂದೂಡಿದರು.

BJP member YA Narayanaswamy
ಬಿಜೆಪಿ ಸದಸ್ಯ ವೈ.ಎ ನಾರಾಯಣಸ್ವಾಮಿ

By

Published : Jul 12, 2023, 2:56 PM IST

ಬೆಂಗಳೂರು: ತುಳಸೀ ತೋಟದಲ್ಲಿರುವ ನಾಗರಕಟ್ಟೆಗೆ ಪೂಜೆ ಮಾಡಲು ಪೊಲೀಸ್ ಇಲಾಖೆ ಅನುಮತಿ ಪಡೆದಿದ್ದೀರಾ ಎಂದು ಪುನೀತ್ ಕೆರೆಹಳ್ಳಿಗೆ ಪೊಲೀಸ್​ ಅಧಿಕಾರಿ ನೋಟಿಸ್ ನೀಡಿದ ವಿಚಾರಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ​ ನಡುವೆ ಸದನದಲ್ಲಿ ಜಟಾಪಟಿ ನಡೆಯಿತು. ಪೊಲೀಸ್ ಅಧಿಕಾರಿ ಅಮಾನತಿಗೆ ಶೂನ್ಯ ವೇಳೆಯಲ್ಲಿ ಬಿಜೆಪಿ ಸದಸ್ಯರು ಆಗ್ರಹಿಸಿದ್ದು, ತಕ್ಷಣವೇ ಉತ್ತರ ಬೇಕು ಎಂದು ಪಟ್ಟು ಹಿಡಿದು ಸದನದ ಬಾವಿಗಿಳಿದು ಧರಣಿ ನಡೆಸಿದರು. ಸದನಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾದ ಹಿನ್ನೆಲೆಯಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಕಲಾಪವನ್ನು 10 ನಿಮಿಷ ಮುಂದೂಡಿಕೆ ಮಾಡಿದರು.

ವಿಧಾನ ಪರಿಷತ್ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ವೈ ಎ ನಾರಾಯಣಸ್ವಾಮಿ, ತುಳಸೀ ತೋಟದ ನಾಗರಕಟ್ಟೆ ಪೂಜೆಗೆ ಕರೆ ನೀಡಿದ ಪುನೀತ್ ಕೆರೆಹಳ್ಳಿಗೆ ಪೊಲೀಸರು ನೋಟಿಸ್ ನೀಡಿ ಪೊಲೀಸ್ ಇಲಾಖೆ ಅನುಮತಿ ಪಡೆದಿದ್ದೀರಾ? ಪಡೆದಿದ್ದರೆ ಕೊಡಿ ಎಂದು ಕೇಳಿದ್ದಾರೆ. ಇದರಿಂದ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ. ಕೂಡಲೇ ನೋಟಿಸ್ ವಾಪಸ್ ಪಡೆದು ಆ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.

ನಾರಾಯಣಸ್ವಾಮಿ ಪ್ರಸ್ತಾಪ ಬೆಂಬಲಿಸಿ ಎದ್ದು ನಿಂತ ಬಿಜೆಪಿ ಸದಸ್ಯರು ಪೊಲೀಸರ ವಿರುದ್ಧ ಕಿಡಿಕಾರಿದರು. ಪೂಜೆ ಮಾಡಲು ಇವರಿಗೆ ಅನುಮತಿ ಕೇಳಬೇಕಾ? ಎಂದು ಪ್ರಶ್ನಿಸಿದರು. ಕೂಡಲೇ ಅಮಾನತುಗೊಳಿಸಬೇಕು. ನೋಟಿಸ್ ವಾಪಸ್ ಪಡೆಯಬೇಕು ಎಂದು ಬಿಜೆಪಿ ಹಿರಿಯ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಭಾಪತಿ ಬಸವರಾಜ ಹೊರಟ್ಟಿ, ಪ್ರಶ್ನೆ ಕೇಳಿದ್ದೀರಿ, ಉತ್ತರ ನೀಡಿದ ನಂತರ ಪ್ರಶ್ನೆ ಕೇಳಬೇಕು. ನಿಯಮಗಳ ಪ್ರಕಾರ ಹೋಗಬೇಕು. ತಿಳಿದವರಾಗಿ ನೀವೆಲ್ಲಾ ಹೀಗೆ ಮಾಡಿದರೆ ಹೇಗೆ? ಎಂದರು.

ಇದನ್ನು ಒಪ್ಪದ ಕೋಟ ಶ್ರೀನಿವಾಸ ಪೂಜಾರಿ ಈಗಲೇ ಉತ್ತರ ಬೇಕು ಎಂದು ಪಟ್ಟು ಹಿಡಿದು, ಇದರಲ್ಲಿ ರಾಜಿ ಮಾಡಿಕೊಳ್ಳಲ್ಲ ಎಂದು ಪಟ್ಟು ಹಿಡಿದರು. ಇದನ್ನು ಬೆಂಬಲಿಸಿ ಬಿಜೆಪಿ ಸದಸ್ಯರು ಸರ್ಕಾರದ ಉತ್ತರಕ್ಕೆ ಆಗ್ರಹಿಸಿದರು. ಬಿಜೆಪಿ ವರ್ತನೆಗೆ ಮತ್ತೊಮ್ಮೆ ಅಸಮಾಧಾನಗೊಂಡ ಸಭಾಪತಿ ಪೀಠದಲ್ಲಿ ಎದ್ದು ನಿಂತು ಸದನದಲ್ಲಿ ನಿಯಮಗಳಿವೆ. ಸರ್ಕಾರ ಉತ್ತರ ಕೊಡಲಿದೆ. ಉತ್ತರ ಕೊಟ್ಟಾಗ ಪ್ರಶ್ನೆ ಕೇಳಿ, ಪ್ರತಿ ಪ್ರಶ್ನೆಗೆ ಹೀಗೆ ಗಲಾಟೆ ಮಾಡಿದರೆ ಹೇಗೆ? ಎಂದು ಪ್ರಶ್ನಿಸಿದರು.

ಈ ವೇಳೆ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ವಾಸ್ತವವಾಗಿ ಏನು ನಡೆದಿದೆ ಎಂದು ವರದಿ ತರಿಸಿಕೊಳ್ಳಬೇಕು. ಪ್ರತಿಪಕ್ಷ ಸದಸ್ಯರ ಭಾವನೆಗೆ ಗೌರವ ಕೊಡಬೇಕು. ಇದನ್ನು ಗೃಹ ಸಚಿವರ ಗಮನಕ್ಕೆ ತಂದು ಅಧಿಕಾರಿಗಳಿಂದ ಮಾಹಿತಿ ತರಿಸಿಕೊಂಡು ಉತ್ತರ ಕೊಡಲಾಗುತ್ತದೆ ಎಂದು ಹೇಳಿದರು. ಸರ್ಕಾರದ ಪ್ರತಿಕ್ರಿಯೆಗೆ ಅಸಮಾಧಾನ ವ್ಯಕ್ತಪಡಿಸಿದ ಕೋಟ ಶ್ರೀನಿವಾಸ ಪೂಜಾರಿ, ದೇವಸ್ಥಾನದಲ್ಲಿ ಕೈ ಮುಗಿಯಲು ಅನುಮತಿ ಪಡೆಯಬೇಕು ಎಂದರೆ ಜನ ಹೇಗೆ ಬದುಕಬೇಕು. ಹಾಗಾಗಿ ಈಗಲೇ ಉತ್ತರ ಬೇಕು ಎಂದು ಪಟ್ಟು ಸಡಿಲಿಸಲು ನಿರಾಕರಿಸಿದರು.

ಈ ವೇಳೆ ಮತ್ತೊಮ್ಮೆ ಪೀಠದಿಂದ ಎದ್ದು ನಿಂತ ಸಭಾಪತಿ ಹೊರಟ್ಟಿ, ಈಗಿಂದ ಈಗಲೇ ಉತ್ತರ ಬೇಕು ಎಂದರೆ ಹೇಗೆ? ನೀವು ಹಾಗೆಯೇ ಉತ್ತರ ಕೊಟ್ಟಿದ್ದೀರಾ? ನಿಯಮ ಇದೆ, ಅದರಂತೆ ಸದನ ನಡೆಸಬೇಕು. ಸಹಕಾರ ಕೊಡಿ ಎಂದು ಗರಂ ಆದರು.

ಈ ವೇಳೆ ನಿಯಮಾವಳಿ ಪ್ರಸ್ತಾಪಿಸಿದ ಸಚಿವ ಕೃಷ್ಣ ಬೈರೇಗೌಡ, ಶೂನ್ಯವೇಳೆ ಪ್ರಸ್ತಾಪಗಳಿಗೆ ಆದಷ್ಟು ತಕ್ಷಣದಲ್ಲಿ ಅಥವಾ ಎರಡು ದಿನದ ಒಳಗೆ ಉತ್ತರ ನೀಡುವ ಅವಕಾಶ ನಿಯಮಾವಳಿಯಲ್ಲಿದೆ. ಅದರಂತೆ ನಾವು ಉತ್ತರ ಒದಗಿಸಿಕೊಡುತ್ತೇವೆ. ಇವರಿಗೆ ತಾವು ಹೇಳಿದ್ದೇ ನಿಯಮ ಎನ್ನುವಂತೆ ವರ್ತಿಸುತ್ತಿದ್ದಾರೆ. ಹೇಳಿದಂತೆ ನಡೆಯಬೇಕು. ನಾವು ಹೇಳಿದ್ದೇ ಕಾನೂನು ಎಂದರೆ ಹೇಗೆ? ಎಂದರು.

ಸಚಿವರ ಹೇಳಿಕೆಗೆ ಕಿಡಿಕಾರಿದ ಕೋಟ ಶ್ರೀನಿವಾಸ ಪೂಜಾರಿ ವಾಗ್ದಾಳಿ ನಡೆಸಿದರು. ಪೂಜಾರಿ ವರ್ತನೆಗೆ ಸಭಾಪತಿ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದರು. ಹಿರಿಯ ಸದಸ್ಯರಾಗಿ ಹೀಗೆ ವರ್ತಿಸುತ್ತೀರಲ್ಲ, ನಾಚಿಕೆಯಾಗುತ್ತಿದೆ ಎಂದರು. ಈ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಬಿಜೆಪಿ ಸದಸ್ಯರ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಕೃಷ್ಣ ಬೈರೇಗೌಡ, ಇವರು ರಾಜ್ಯ ಹಾಳು ಮಾಡಿದವರು, ಸದನ ಹಾಳು ಮಾಡಿದವರು, ರಾಜ್ಯ ಲೂಟಿ ಮಾಡಿದ್ದಾರೆ, ರಾಜಕಾರಣ ಮಾಡುವುದು ಬಿಟ್ಟು ಬೇರೆ ಕಸುಬಿಲ್ಲ ಇವರಿಗೆ ಎಂದು ಕಿಡಿಕಾರಿದರು.

ಸಚಿವರ ವರ್ತನೆ, ಸರ್ಕಾರದ ಧೋರಣೆ ಖಂಡಿಸಿ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು. ನೋಟಿಸ್ ನೀಡಿದ್ದ ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಈ ವೇಳೆ ಸದನದಲ್ಲಿ ಗದ್ದಲ ಹೆಚ್ಚಾಗಿ ಸದನ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಕಲಾಪವನ್ನು 10 ನಿಮಿಷ ಮುಂದೂಡಿಕೆ ಮಾಡಿದರು.

ಇದನ್ನೂ ಓದಿ:ವಿಧಾನಸಭೆಯಲ್ಲಿ ಚಿಲುಮೆ ಸಂಸ್ಥೆಯ ಕುರಿತು ಗದ್ದಲ: ಅಶ್ವತ್ಥ ನಾರಾಯಣ-ಭೈರತಿ ಸುರೇಶ್ ವಾಕ್ಸಮರ

ABOUT THE AUTHOR

...view details