ಬೆಂಗಳೂರು: ಕೆಂಪಣ್ಣ ಬಿಜೆಪಿ ವಿರುದ್ಧ 40 ಪರ್ಸೆಂಟ್ ಕಮಿಷನ್ನ ಸುಳ್ಳು ಆರೋಪ ಮಾಡಿದ್ದರು. ಕಾಂಗ್ರೆಸ್‌ನವರು ಅದರ ಲಾಭ ಪಡೆದುಕೊಂಡರು. ಈಗ ಕಾಂಗ್ರೆಸ್ ಸರ್ಕಾರವೇ ಬಂದಿದೆ. ತನಿಖೆ ನಡೆಸಿ 40 ಪರ್ಸೆಂಟ್ ಸಾಬೀತುಪಡಿಸಲಿ. ನಾವು ಕಮಿಷನ್ ಪಡೆದಿದ್ದೇವೆ ಎನ್ನುವುದಾದರೆ ಇನ್ಮುಂದೆ ಗುತ್ತಿಗೆದಾರರು 40 ಪರ್ಸೆಂಟ್ ಕಡಿಮೆಗೆ ಬಿಡ್ ಮಾಡಲಿ ನೋಡೋಣ ಎಂದು ಕಾಂಗ್ರೆಸ್ ಸರ್ಕಾರ ಹಾಗು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರಿಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನೇರ ಸವಾಲೆಸೆದಿದ್ದಾರೆ.
ಆರ್. ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅವಧಿಯ ಹಗರಣಗಳ ತನಿಖೆ ಮಾಡಲಿ. ನಾನು ಸ್ಪಷ್ಟವಾಗಿ ಹೇಳುತ್ತೇನೆ. ದಯವಿಟ್ಟು ಅವರು ಎಲ್ಲ ತನಿಖೆ ಮಾಡಲಿ. 40% ಕಮಿಷನ್ ಆರೋಪವನ್ನು ನಮ್ಮ ಮೇಲೆ ಅವರು ಹೊರೆಸಿದ್ದಾರೆ. 40% ಆಗಿದೆ ಅಂತ ಅವರು ಪುರಾವೆ ಸಮೇತ ತೋರಿಸಬೇಕು. ಈ ಸಂಬಂಧ ನಾನು ಆಗ್ರಹ ಮಾಡುತ್ತೇನೆ. ಕಾಂಗ್ರೆಸ್ ಸರ್ಕಾರ 40% ಆರೋಪ ಕುರಿತ ಎಲ್ಲ ದಾಖಲೆ ಕೊಡಲಿ, ನಾವು 40% ಕಮಿಷನ್ ಪಡೆಯುತ್ತಿದ್ದೆವು ಅಂತ ದಾಖಲೆ ಸಹಿತ ತೋರಿಸಲಿ ಎಂದು ಕಾಂಗ್ರೆಸ್ ಸರ್ಕಾರಕ್ಕೆ ಬೊಮ್ಮಾಯಿ ಸವಾಲು ಹಾಕಿದ್ದಾರೆ.
ಗುತ್ತಿಗೆದಾರರ ಸಂಘದವರೂ 40% ಕಮಿಷನ್ ಆರೋಪ ಮಾಡಿದ್ದರು. ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. 40% ಇಲ್ಲ ಅಂತ ಹೇಳಬಹುದು. ಈಗ ಗುತ್ತಿಗೆದಾರ ಸಂಘದವರು 40% ಕಮ್ಮಿ ಟೆಂಡರ್ ಹಾಕಲಿ, ಇನ್ಮುಂದಿನ ಎಲ್ಲ ಟೆಂಡರ್‌ಗಳಲ್ಲೂ 40% ಕಡಿಮೆ ಹಾಕಲಿ. ಅಂದರೆ ಮಾತ್ರ ನಮ್ಮ ಕಾಲದಲ್ಲಿ 40% ಕಮಿಷನ್ ಇತ್ತು ಅಂತ ಆಗುತ್ತದೆ. ಇವತ್ತು ಅಷ್ಟೇ ಮೊತ್ತಕ್ಕೆ ಟೆಂಡರ್ ಹಾಕಿದರೆ, 40% ಈಗಲೂ ಇದೆ ಅಂತ ಆಗುತ್ತದೆ. ಕೆಂಪಣ್ಣ ಮೇಲೆ ಬಹಳ ದೊಡ್ಡ ಜವಾಬ್ದಾರಿ ಇದೆ. ಇನ್ಮೇಲೆ ಕೆಂಪಣ್ಣ ತಮ್ಮೆಲ್ಲ ಸಂಘದವರಿಗೂ 40% ಕಮ್ಮಿಗೆ ಟೆಂಡರ್ ಹಾಕುವಂತೆ ಹೇಳಬೇಕು. ಕೆಂಪಣ್ಣ ಇದುವರೆಗೆ 40% ದಾಖಲೆ ಕೊಡ್ಲಿಲ್ಲ, ಕೋರ್ಟ್‌ಗೂ ಕೊಡ್ಲಿಲ್ಲ, ನಮ್ಮ ವಿರುದ್ಧ ಅಪಪ್ರಚಾರ ಮಾಡಿದರು. ಕಾಂಗ್ರೆಸ್‌ನವರು ಅದರ ಲಾಭ ತೆಗೆದುಕೊಂಡರು. ನಮ್ಮ ಕಾಲದ ಅವರ ಕಾಲದ ಎಲ್ಲವನ್ನೂ ತನಿಖೆ ಮಾಡಲಿ, ಪಿಎಸ್ಐ ಪ್ರಕರಣವನ್ನೂ ತನಿಖೆ ಮಾಡಲಿ, ಸತ್ಯ ಹೊರಗೆ ಬರಲಿ ನಾವು ಅವರ ಕಾಲದ ಹಗರಣಗಳನ್ನು ಲೋಕಾಯುಕ್ತಕ್ಕೆ ಕೊಟ್ಟಿದ್ದೇವೆ ಎಂದರು.
ಕೆಲವೇ ಗಂಟೆಗಳ ಮಳೆಗೆ ಸಾವಾಗಿರೋದು ಬಹಳ ನೋವಿನ ಸಂಗತಿ, ಚಿಕ್ಕಮಗಳೂರಿನಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಹವಾಮಾನ ಇಲಾಖೆ ಎಚ್ಚರಿಕೆ ನೀಡಿತ್ತು. ಬಿಬಿಎಂಪಿಯವರು ಈ ವರ್ಷ ಮುಂಜಾಗ್ರತೆ ಕ್ರಮ ತೆಗೆದುಕೊಂಡಿಲ್ಲ ಅನ್ನೋದು ಸ್ಪಷ್ಟ ಆಗುತ್ತಿದೆ. ಈ ಘಟನೆ ನಡೆಯೋದಿಕ್ಕೆ ಅವಕಾಶ ಕೊಟ್ಟಿದ್ದಾರೆ. ಕೂಡಲೇ ಧಾವಿಸಿ ರಕ್ಷಣೆ ಮಾಡುವ ಕೆಲಸ ಬಿಬಿಎಂಪಿಯವರು ಮಾಡಲಿಲ್ಲ ಎಂದು ಆರೋಪಿಸಿದರು.