ಕರ್ನಾಟಕ

karnataka

ETV Bharat / state

ಗುತ್ತಿಗೆದಾರರ ನಿಯೋಗದಿಂದ ಸಿಎಂ ಭೇಟಿ.. ಈಗಿನ ಸಚಿವ, ಶಾಸಕರು ಕಮಿಷನ್ ಕೇಳಿದರೆ ಅದನ್ನೂ ಬಹಿರಂಗ ಪಡಿಸುತ್ತೇವೆ: ಕೆಂಪಣ್ಣ - ಬಿಜೆಪಿ ವಿರುದ್ಧ ಕಮಿಷನ್ ಆರೋಪ

ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ ಕೆಂಪಣ್ಣ ನೇತೃತ್ವದ ನಿಯೋಗದಿಂದ ಸಿಎಂ ಸಿದ್ದರಾಮಮಯ್ಯ ಭೇಟಿ. ಬಾಕಿ ಬಿಲ್ ಬಿಡುಗಡೆ ಮಾಡುವಂತೆ ಸಿಎಂಗೆ ಮನವಿ. ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ ನೀಡಿದ ಸಿಎಂ.

Contractors Association meet cm siddaramaiah
ಗುತ್ತಿಗೆದಾರರ ನಿಯೋಗದಿಂದ ಸಿಎಂ ಭೇಟಿ

By

Published : Jun 23, 2023, 1:41 PM IST

ಗುತ್ತಿಗೆದಾರರ ನಿಯೋಗದಿಂದ ಸಿಎಂ ಭೇಟಿ.. ಈಗಿನ ಸಚಿವ, ಶಾಸಕರು ಕಮಿಷನ್ ಕೇಳಿದರೆ ಅದನ್ನೂ ಬಹಿರಂಗ ಪಡಿಸುತ್ತೇವೆ: ಕೆಂಪಣ್ಣ

ಬೆಂಗಳೂರು: ನಮ್ಮ ಸರ್ಕಾರದ ಅವಧಿಯಲ್ಲಿ ಕಮಿಷನ್ ದಂಧೆಗೆ ಸಂಪೂರ್ಣ ಕಡಿವಾಣ ಹಾಕುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಅವರ ನೇತೃತ್ವದ ನಿಯೋಗವು ಇಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಬಾಕಿ ಇರುವ ಬಿಲ್ಲುಗಳ ಪಾವತಿಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ರಾಜ್ಯದಲ್ಲಿ ಕಮಿಷನ್ ಹಾವಳಿಗೆ ಕಡಿವಾಣ ಹಾಕಿ, ಸ್ಥಳೀಯ ಗುತ್ತಿಗೆದಾರರ ಹಿತಕ್ಕೆ ಧಕ್ಕೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಭರವಸೆ ನೀಡಿದರು.

ಬಿಜೆಪಿ ಸರ್ಕಾರದ ಆರ್ಥಿಕ ಅಶಿಸ್ತು ಮತ್ತು ಕಮಿಷನ್ ಹಾವಳಿಯಿಂದ ಆರ್ಥಿಕವಾಗಿ ಬಹಳ ಸಮಸ್ಯೆ ಆಗಿದೆ. 2013 ರಿಂದ 2018ರ ವರೆಗೆ ಇದ್ದ LOC ವ್ಯವಸ್ಥೆಯನ್ನೇ ಮತ್ತೆ ಜಾರಿಗೆ ತರಲು ಕೆಂಪಣ್ಣ ಒತ್ತಾಯ ಮಾಡಿದರು. ರಾಜ್ಯದ ಗುತ್ತಿಗೆದಾರರಿಗೆ ಪ್ರಥಮ ಮತ್ತು ಹೆಚ್ಚಿನ ಆದ್ಯತೆ ನೀಡಿ ಎಂದು ಒತ್ತಾಯಿಸಿದ್ದಾರೆ.

ಗುತ್ತಿಗೆದಾರರ ಸಮಸ್ಯೆಗಳಿಗೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ ಸರ್ಕಾರದ ಆರ್ಥಿಕ ಅಶಿಸ್ತು ಮತ್ತು ಕಮಿಷನ್ ಹಾವಳಿಯಿಂದ ಗುತ್ತಿಗೆದಾರರಿಗೆ ಸಮಸ್ಯೆ ಆಗಿದೆ. ಬಿಜೆಪಿ ಹಳಿ ತಪ್ಪಿಸಿರುವ ಆರ್ಥಿಕತೆಯನ್ನು ಸರಿಯಾಗಿಸಲು ಸ್ವಲ್ಪ ಸಮಯಾವಕಾಶ ಬೇಕು ಎಂದು ತಿಳಿಸಿದರು. ಜೊತೆಗೆ ಬಜೆಟ್ ಮಂಡನೆಯಾಗಬೇಕಿದೆ. ಬಜೆಟ್ ಅಧಿವೇಶನದ ನಂತರ ಬಿಬಿಎಂಪಿ ಹಾಗೂ ಆರ್ಥಿಕ ಇಲಾಖೆ ಕಾರ್ಯದರ್ಶಿಗಳ ಸಭೆ ಕರೆದು ಪರಿಶೀಲಿಸಲಾಗುವುದು ಎಂದರು.

ಬಿಬಿಎಂಪಿಯಲ್ಲಿ 2000 ಕೋಟಿ ರೂ. ಹಾಗೂ ನಗರೋತ್ಥಾನ ಯೋಜನೆಯಡಿ 1500 ಕೋಟಿ ರೂ. ಬಾಕಿ ಇದೆ. ತಡೆಹಿಡಿದಿರುವ ಮೊತ್ತವನ್ನು ಪರಿಶೀಲಿಸಿ ಬಿಡುಗಡೆ ಮಾಡಬೇಕು ಹಾಗೂ ನಿರಪೇಕ್ಷಾಣಾ ಪತ್ರವನ್ನು ಬಿಡುಗಡೆ ಮಾಡಬೇಕೆಂದು ಮುಖ್ಯಮಂತ್ರಿಗಳ ಬಳಿ ಕೆಂಪಣ್ಣ ಮನವಿ ಮಾಡಿದರು.

ಸಚಿವ, ಶಾಸಕರು ಕಮಿಷನ್ ಕೇಳಿದರೆ ಅದನ್ನೂ ಬಹಿರಂಗ ಪಡಿಸುತ್ತೇವೆ: ಕೆಂಪಣ್ಣ-ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಜೊತೆ ಸಭೆ ನಡೆಸಿ ಬಳಿಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮಾತನಾಡಿ, ಯಾರಾದರೂ ಸಚಿವರು, ಶಾಸಕರು ಈಗ ನಮ್ಮ ಬಳಿ ಕಮಿಷನ್ ಕೇಳಿದರೆ, ಅದನ್ನು ಸಹ ಬಹಿರಂಗಪಡಿಸುತ್ತೇವೆ. ಈ ಸರ್ಕಾರದವರು ಈವರೆಗೂ ಯಾರೂ ನಮ್ಮ ಬಳಿ ಕಮಿಷನ್ ಕೇಳಿಲ್ಲ. ಯಾರಾದರೂ ಕೇಳಿದರೆ, ಅದನ್ನು ಸಹ ಸಹ ವಿರೋಧಿಸುತ್ತೇವೆ ಎಂದು ತಿಳಿಸಿದರು.

ನಾವು ಬಾಕಿ ಬಿಲ್​ಗಳ ಬಗ್ಗೆ ಚರ್ಚೆಗೆ ಬಂದಿದ್ವಿ. ಸಿಎಂ ಆರ್ಥಿಕ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ ಬಾಕಿ ಬಿಲ್ ಪಾವತಿ ಮಾಡೋದಾಗಿ ಭರವಸೆ ಕೊಟ್ಟಿದ್ದಾರೆ. ಹಿಂದಿನ ಅವಧಿಯ ಕಮಿಷನ್ ಆರೋಪ ಬಗ್ಗೆ ನಾವು ಚರ್ಚೆ ಮಾಡಿಲ್ಲ. ಅದು ಬೇರೆ ವಿಚಾರ ಎಂದರು.

ಬಿಜೆಪಿ ಮೇಲಿನ ಶೇ 40ರಷ್ಟು ಕಮಿಷನ್ ಆರೋಪದ ದಾಖಲಾತಿ ಬಿಡುಗಡೆ ಇನ್ನೂ ಆಗದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಪ್ರಕರಣ ಸದ್ಯ ಕೋರ್ಟ್ ನಲ್ಲಿದೆ. ಅದರ ಕುರಿತ ದಾಖಲಾತಿಗಳನ್ನು ಸಮಯ ಬಂದಾಗ ಬಿಡುಗಡೆ ಮಾಡ್ತೀವಿ ಎಂದು ತಿಳಿಸಿದರು.

ಈಗ ಎಲ್ಲಿ ಹೋಗಿದ್ದಾರೆ ಕೆಂಪಣ್ಣ ಎಂಬ ಬೊಮ್ಮಾಯಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಮೂರು ವರ್ಷಗಳ ಕಾಲ ಅವರ ಸರ್ಕಾರದ ಬಗ್ಗೆ ನಾವು ಹೋರಾಟ ಮಾಡಿದ್ವಿ. ಆಗ ಬೊಮ್ಮಾಯಿ ಸಿಎಂ ಆಗಿದ್ರು ಯಾಕೆ ಸುಮ್ಮನೆ ಇದ್ರು? ಯಾಕೆ ತನಿಖೆ ಮಾಡಿಸಲಿಲ್ಲ? ಎಂದರು. ಸಭೆಯಲ್ಲಿ ಪದಾಧಿಕಾರಿಗಳಾದ ಆರ್.ಅಂಬಿಕಾಪತಿ, ಜಿ.ಎಂ ರವೀಂದ್ರ, ಸಂಕಾಗೌಡ ಶಾನಿ, ನಾಗರಾಜ್, ಆರ್.ಮಂಜುನಾಥ್, ರಮೇಶ್ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ:ನಮ್ಮ ಮೇಲೆ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರರು ಇನ್ಮುಂದೆ 40 ಪರ್ಸೆಂಟ್ ಕಡಿಮೆ ಬಿಡ್ ಮಾಡಿ: ಬೊಮ್ಮಾಯಿ‌ ಸವಾಲು

ABOUT THE AUTHOR

...view details