ಬೆಂಗಳೂರು: ಗುತ್ತಿಗೆದಾರರು ನಿಮ್ಮ ಸರ್ಕಾರದ ಮಾನ ಮರ್ಯಾದೆ ತೆಗೆಯುತ್ತಿದ್ದಾರೆ. ನಿಮಗೆ ಮಾನ ಮರ್ಯಾದೆ ಇಲ್ಲ ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸಭೆಯಲ್ಲಿ ಅತಿವೃಷ್ಟಿ ಮೇಲಿನ ಚರ್ಚೆ ವೇಳೆ ಮಾತನಾಡುತ್ತಾ, ಗುತ್ತಿಗೆದಾರರು ತಮಗೇ ಟೆಂಡರ್ ಸಿಗಲಿ ಎಂದು ಕಡಿಮೆ ಟೆಂಡರ್ ಮೊತ್ತ ಉಲ್ಲೇಖಿಸುತ್ತಿದ್ದಾರೆ. ಬಳಿಕ ಟೆಂಡರ್ ಪಡೆದ ಗುತ್ತಿಗೆದಾರರು ಅಲ್ಪ ಮೊತ್ತದಲ್ಲಿ ಕಾಮಗಾರಿ ಮಾಡುತ್ತಾರೆ. ಗುತ್ತಿಗೆದಾರರು ನಿಮ್ಮಸರ್ಕಾರದ ಮಾನ ಮರ್ಯಾದೆ ತೆಗೆಯುತ್ತಿದ್ದಾರೆ. ನಿಮಗೆ ಮಾನ ಮರ್ಯಾದೆ ಇಲ್ಲ. ಯಾಕೆ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಹಾಕಿಲ್ಲ. ನಿಮ್ಮ ಸರ್ಕಾರಕ್ಕೆ ಧಮ್ ಇಲ್ಲ ಎಂದು ಸರ್ಕಾರದ ವಿರುದ್ಧ ಕಿಡಿ ಕಾರಿದರು.
ಗುತ್ತಿಗೆದಾರರರು ನಿಮ್ಮ ಮಾನಮರ್ಯಾದೆ ತೆಗೆಯುತ್ತಿದ್ದಾರೆ : ಈ ವೇಳೆ ಸಚಿವ ಸಿ.ಸಿ.ಪಾಟೀಲ್ ಮಾನ ಮರ್ಯಾದೆ ಶಬ್ದ ಬಳಕೆಗೆ ಆಕ್ಷೇಪ ವ್ಯಕ್ತಪಡಿಸಿದರು. ಈ ತರ ಶಬ್ದ ಬಳಕೆ ಯಾಕೆ ಮಾಡುತ್ತಿದ್ದೀರಾ ಎಂದು ಗರಂ ಆದರು. ಬಳಿಕ ಮಾತು ಮುಂದುವರಿಸಿದ ಜಿ.ಟಿ.ದೇವೇಗೌಡ, ನಾನು ನಿಮಗೆ ಹೇಳುತ್ತಿಲ್ಲ. ಶೇ 40, ಶೇ100 ಎಂದು ಗುತ್ತಿಗೆದಾರರು ನಿಮ್ಮ ಮಾನ ಮರ್ಯಾದೆಯನ್ನು ತೆಗೆಯುತ್ತಿದ್ದಾರೆ. ನೀವು ಏನು ಮಾಡಿದ್ದೀರಿ. ಎಷ್ಟು ಜನರನ್ನು ಕಪ್ಪು ಪಟ್ಟಿಗೆ ಸೇರಿಸಿದ್ದೀರಾ?. ಎಷ್ಟು ಜನ ಗುತ್ತಿಗೆದಾರರು ಶ್ರೀಮಂತರಾಗಿದ್ದಾರೆ?. ಅವರಿಗೆ ದುಡ್ಡು ಎಲ್ಲಿಂದ ಬಂತು?. ಶೇ 40ರಷ್ಟು ಕಡಿಮೆ ಟೆಂಡರ್ ಮೊತ್ತ ಹಾಕಿ, ಅವನು ಶೇ 30ರಷ್ಟು ಹೊಡಿತಾನೆ. ಅವನು ಎಲ್ಲಿ ಕೆಲಸ ಮಾಡುತ್ತಾನೆ ಎಂದು ವಾಗ್ದಾಳಿ ನಡೆಸಿದರು.
ಗುತ್ತಿಗೆದಾರರಿಂದ ಗುಣಮಟ್ಟದ ಕೆಲಸ ಆಗುತ್ತಿಲ್ಲ : ನಿಮ್ಮ ಕೈಯ್ಯಲ್ಲಿ ಆಡಳಿತ ಇದೆ. ಗುತ್ತಿಗೆದಾರರು ಕೆಲಸ ಮಾಡುತ್ತಿಲ್ಲ. ಗುಣಮಟ್ಟದ ಕೆಲಸ ಆಗುತ್ತಿಲ್ಲ.ಸಾವಿರ ಕೋಟಿ ಖರ್ಚು ಮಾಡಿದರೂ ರಸ್ತೆ ಗುಂಡಿ ಬೀಳುತ್ತದೆ. ಇಂಜಿನಿಯರ್ ಗಳು ಕೆಲಸ ಮಾಡುತ್ತಿಲ್ಲ.ಕುಳಿತು ಸುಳ್ಳು ಬಿಲ್ ಬರೆಯುತ್ತಾರೆ. ಕೆರೆಗಳಿಗೆ ಸಣ್ಣ ನೀರಾವರಿ ಇಲಾಖೆಯಿಂದ ಐದು ಲಕ್ಷ ಕೊಟ್ಟರೆ ಇಂಜಿನಿಯರುಗಳು ಬರೇ ಬಿಲ್ ಬರೆಸಿ ಕೆಲಸವೇ ಮಾಡುತ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದರು.