ಬೆಂಗಳೂರು:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಇಂಜಿನಿಯರ್ ವಿರುದ್ಧ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಲಂಚದ ಆರೋಪ ಮಾಡಿದ್ದಾರೆ. ಸದಾಶಿವನಗರದಲ್ಲಿ ಶನಿವಾರ ಖಾಸಗಿ ವಿಚಾರವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿಯಾಗಿ ಬಳಿಕ ಮಾತನಾಡಿದ ಅವರು, "ನಾನು ಸಿನಿಯಾರಿಟಿ ಪ್ರಕಾರ ಹಣ ಕೊಡಿ ಅಂತ ಕೇಳಿದ್ದೇನೆ. ಸ್ವಲ್ಪ ಹಣ ರಿಲೀಸ್ ಮಾಡಿದ್ದಾರೆ. ನಮಗೆ ತೃಪ್ತಿ ಇದೆ ಅಂತ ಹೇಳಲ್ಲ, ಗುತ್ತಿಗೆದಾರರ ಹಣವನ್ನು ಪೂರ್ತಿಯಾಗಿ ಕ್ಲಿಯರ್ ಮಾಡೋಕೆ ಹೇಳಿದ್ದೇನೆ. ಡಿಸೆಂಬರ್ ಒಳಗಡೆ ಟ್ರೈ ಮಾಡ್ತೀನಿ ಅಂತ ಹೇಳಿದ್ದಾರೆ. ನಾನು ಇವತ್ತು ಖಾಸಗಿ ವಿಚಾರವಾಗಿ ಭೇಟಿಯಾಗಿದ್ದು ಅಷ್ಟೇ" ಎಂದು ತಿಳಿಸಿದರು.
ಇದೇ ವೇಳೆ ಬಿಬಿಎಂಪಿ ಚೀಫ್ ಇಂಜಿನಿಯರ್ ಬಿ.ಎಸ್.ಪ್ರಹ್ಲಾದ್ ಮೇಲೆ ಅಸಮಾಧಾನ ವ್ಯಕ್ತಪಡಿಸಿದ ಕೆಂಪಣ್ಣ, "ಬಿ.ಎಸ್.ಪ್ರಹ್ಲಾದ್ ಇರುವರೆಗೂ ಬಿಬಿಎಂಪಿ ಉದ್ಧಾರ ಆಗಲ್ಲ. ಈಗಲೂ ಹೇಳುತ್ತೇನೆ, ಮುಂದೇನೂ ಹೇಳುತ್ತೇನೆ. ಅವರು ಬಂದಾಗಿನಿಂದ ಒಂದೂ ದೊಡ್ಡ ಕೆಲಸ ಮಾಡಿಲ್ಲ" ಎಂದು ಆರೋಪಿಸಿದರು.