ಕರ್ನಾಟಕ

karnataka

ETV Bharat / state

ಗುತ್ತಿಗೆ ನೌಕರರ ವೇತನ ವಿಚಾರ : ನಿಮ್ಹಾನ್ಸ್ ಗೆ ಹೈಕೋರ್ಟ್ ನಿರ್ದೇಶನ

ಗುತ್ತಿಗೆ ನೌಕರರ ವೇತನ ಪಾವತಿ ವಿಚಾರಕ್ಕೆ ಸಂಬಂಧಿಸಿದ ಸಾರ್ವಜನಿಕ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿತು.

ಹೈಕೋರ್ಟ್
ಹೈಕೋರ್ಟ್

By

Published : Sep 9, 2020, 9:40 PM IST

ಬೆಂಗಳೂರು: ಗುತ್ತಿಗೆ ನೌಕರರ ವೇತನ ಪಾವತಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಮಾಣಪತ್ರ ಸಲ್ಲಿಸುವಂತೆ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್ ) ಹಾಗೂ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ)ಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಈ ಕುರಿತು ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (ಎಐಸಿಸಿಟಿಯು) ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ನಿರ್ದೇಶನ ನೀಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಕ್ಲಿಫ್ಟನ್ ರೊಜಾರಿಯೊ ವಾದ ಮಂಡಿಸಿ, ನಿಮ್ಹಾನ್ಸ್ ಹಾಗೂ ಬಿಎಂಸಿಆರ್‌ಐ ಅಡಿಯಲ್ಲಿ ಬರುವ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹೌಸ್ ಕೀಪಿಂಗ್ ಸಿಬ್ಬಂದಿ ಸೇರಿದಂತೆ ಗುತ್ತಿಗೆ ನೌಕರರಿಗೆ ನಿಯಮಿತವಾಗಿ ಪ್ರತಿ ತಿಂಗಳು ವೇತನ ಪಾವತಿ ಮಾಡಲಾಗುತ್ತಿಲ್ಲ. ಗುತ್ತಿಗೆ ನೌಕರರಿಗೆ ಗುತ್ತಿಗೆದಾರ ಸಂಸ್ಥೆ ವೇತನ ನೀಡದಿದ್ದರೆ, ಗುತ್ತಿಗೆ ಕಾರ್ಮಿಕರ (ನಿಯಂತ್ರಣ ಮತ್ತು ನಿರ್ಮೂಲನೆ) ಕಾಯ್ದೆ- 1970ರ ಸೆಕ್ಷನ್ 21ರ ಪ್ರಕಾರ ನೌಕರರು ಕೆಸಲ ಮಾಡುತ್ತಿರುವ ಮೂಲ ಉದ್ಯೋಗದಾತರು ವೇತನ ಪಾವತಿಸಬೇಕು ಎಂಬ ವಿಚಾರವನ್ನು ಪೀಠದ ಗಮನಕ್ಕೆ ತಂದರು.

ವಾದ ಪರಿಗಣಿಸಿದ ಪೀಠ, ಗುತ್ತಿಗೆ ನೌಕರರ ವೇತನ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ವಾರಗಳಲ್ಲಿ ಪ್ರಮಾಣಪತ್ರ ಸಲ್ಲಿಸುವಂತೆ ನಿಮ್ಹಾನ್ಸ್ ಹಾಗೂ ಬಿಎಂಸಿಆರ್‌ಐ ಪರ ವಕೀಲರಿಗೆ ಸೂಚಿಸಿ ವಿಚಾರಣೆ ಮುಂದೂಡಿತು.

ABOUT THE AUTHOR

...view details