ಕರ್ನಾಟಕ

karnataka

ETV Bharat / state

ಜಡಿಮಳೆಗೆ ನಲುಗಿದ ಬೆಂಗಳೂರಿನ ಬಡಾವಣೆಗಳು: ಎಲ್ಲೆಲ್ಲೂ ನೀರು, ಕಿ.ಮೀಗಟ್ಟಲೆ ಟ್ರಾಫಿಕ್ ಜಾಮ್

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವರುಣಾರ್ಭಟ ಜೋರಾಗಿದೆ. ಬಿಟ್ಟೂಬಿಡದೇ ಸುರಿಯುತ್ತಿರುವ ಮಳೆಯಿಂದ ನಗರವಾಸಿಗರು ಹೈರಾಣಾಗಿದ್ದಾರೆ. ಮಳೆಯ ರಭಸಕ್ಕೆ ಬೆಂಗಳೂರಿನ ರಸ್ತೆಗಳು ಜಲಾವೃತವಾಗಿವೆ. ವಾಹನ ಸವಾರರು ಪರದಾಡುವಂತಾಗಿದೆ.

Continuous rain in Bengaluru
ರಾಜಧಾನಿ ಬೆಂಗಳೂರಿನಲ್ಲಿ ವರುಣಾರ್ಭಟ

By

Published : Aug 31, 2022, 6:29 PM IST

Updated : Aug 31, 2022, 7:02 PM IST

ಬೆಂಗಳೂರು: ಕಳೆದ ಐದು ದಿನಗಳಿಂದ ಎಡೆಬಿಡದೆ ಅಬ್ಬರಿಸುತ್ತಿರುವ ವರುಣಾರ್ಭಟಕ್ಕೆ ನಗರದ ಹೊರವಲಯದ ಜನರು ತತ್ತರಿಸಿದ್ದಾರೆ. ಕೆಲವು ಬಡಾವಣೆಗಳ ಮನೆಗಳಿಗೂ ನೀರು ನುಗ್ಗಿದೆ. ನಿತ್ಯದ ಜನಜೀವನ ನರಕವಾಗಿದೆ.

ಗೌರಿ ಗಣೇಶ ಹಬ್ಬದ ವೇಳೆಯಲ್ಲಿ ಸುರಿಯುತ್ತಿರುವ ಮಳೆ ಜನರ ಸಂಭ್ರಮವನ್ನು ಕಸಿದುಕೊಂಡಿದೆ. ಹೊಸೂರು ರಸ್ತೆ, ವೈಟ್‌ಫೀಲ್ಡ್ ರಸ್ತೆ, ಮಡಿವಾಳ ರಸ್ತೆ, ವರ್ತುಲ ರಸ್ತೆ ಸೇರಿ ಹೆದ್ದಾರಿಗಳನ್ನು ಸಂಪರ್ಕಿಸುವ ಮಾರ್ಗಗಳಲ್ಲಿ ಮಳೆ ನೀರು ಆವರಿಸಿಕೊಂಡಿದ್ದು ವಾಹನ ಸಂಚಾರ ದಟ್ಟಣೆ ಉಂಟಾಗಿದೆ. ಒಂದೇ ರಾತ್ರಿಯಲ್ಲಿ ಸರಾಸರಿ 75 ಮಿ.ಮೀ. ಗೂ ಹೆಚ್ಚು ಮಳೆಯಾಗಿದೆ.

ನಗರದಲ್ಲಿ ನಿರ್ಮಿಸಲಾದ ಚರಂಡಿಗಳು, ಕಾಲುವೆಗಳಲ್ಲಿ ಪ್ರತಿ ಗಂಟೆಗೆ ಸರಾಸರಿ 70 ಮಿ.ಮೀ.ಗಿಂತ ಕಡಿಮೆ ಪ್ರಮಾಣದಲ್ಲಿ ಮಳೆ ಬಿದ್ದಲ್ಲಿ ಮಾತ್ರ ನೀರು ಸರಾಗವಾಗಿ ಹರಿದು ಹೋಗಲು ಅವಕಾಶವಿದೆ. ಆದರೆ, ಕಳೆದ ಐದು ದಿನಗಳಿಂದ ಈ ಭಾಗಗಳಲ್ಲಿ ರಾತ್ರಿ ವೇಳೆ ಪ್ರತಿ ಗಂಟೆಗೆ 70 ಮಿ.ಮೀ.ನಿಂದ 125 ಮಿ.ಮೀ. ಮಳೆಯಾಗುತ್ತಿದೆ. ಇದರಿಂದಾಗಿ ತಗ್ಗು ಪ್ರದೇಶದ ಬಡಾವಣೆಗಳಲ್ಲಿ ನೀರು ಶೇಖರಣೆಯಾಗಿ ಮನೆಗಳಿಗೆ ನೀರು ನುಗ್ಗಿದೆ.

ರಾಜಧಾನಿಯ ಬಡಾವಣೆಗಳ ದೃಶ್ಯ

ಬಿಳೇಕಹಳ್ಳಿ ಬಳಿಯ ಅನುಗ್ರಹ ಬಡಾವಣೆಯಲ್ಲಿ 1ನೇ ಮತ್ತು 2ನೇ ಹಂತದಲ್ಲಿ ನೀರು ನಿಂತಿದ್ದು, 20ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. ಬಿಬಿಎಂಪಿಯ ಇಂದಿರಾ ಕ್ಯಾಂಟೀನ್‌ಗೂ ನೀರು ನುಗ್ಗಿದ್ದು ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟ ಸರಬರಾಜು ಸ್ಥಗಿತಗೊಳಿಸಲಾಗುತ್ತಿದೆ. ಹಂಪಿನಗರದ 5ನೇ ಕ್ರಾಸ್‌ನಲ್ಲಿ ನೀರು ನಿಂತಿದೆ. ಜೆಪಿ ನಗರ 6ನೇ ಹಂತದ ರಸ್ತೆಗಳಲ್ಲಿ 3 ಅಡಿಗೂ ಹೆಚ್ಚು ನೀರು ಹರಿದಿದೆ. ವಸಂತಪುರ, ನವೋದಯನಗರ, ಆರ್​ಆರ್​ ನಗರದ ಬಲರಾಮ್‌ ಲೇಔಟ್, ಹೆಚ್.ಎಸ್‌.ಆರ್ ಬಡಾವಣೆಗಳಲ್ಲಿಯೂ ನೀರು ನಿಂತಿದ್ದರಿಂದ ಜನರು ಪರದಾಡುವಂತಾಗಿತ್ತು.

ವಾಹನಗಳನ್ನು ಹೊರತರಲು ಹರಸಾಹಸ:ಬೆಳ್ಳಂದೂರು ರಸ್ತೆ, ನಾಗವಾರ, ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ, ಬೆಳ್ಳಂದೂರು, ಚಿಕ್ಕಜಾಲ, ಮಡಿವಾಳ ರಸ್ತೆಗಳಲ್ಲಿ ಮಳೆ ನೀರು ನಿಂತಿದ್ದು ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ರಾಜರಾಜೇಶ್ವರಿ ನಗರದ ಬಲರಾಂ ಲೇಔಟ್‌ನಲ್ಲಿ ಬೈಕ್, ಕಾರುಗಳು ಜಲಾವೃತಗೊಂಡಿವೆ. ಮಳೆ ನೀರಿನಲ್ಲಿಯೇ ವಾಹನಗಳನ್ನು ಚಲಾಯಿಸಿಕೊಂಡು ಹೋದವರು ಅರ್ಧದಲ್ಲಿ ವಾಹನ ಕೈಕೊಟ್ಟಿದ್ದರಿಂದ ಸಂಕಷ್ಟಕ್ಕೊಳಗಾಗಿ ಆ ವಾಹನಗಳನ್ನು ಹೊರತರಲು ಹರಸಾಹಸಪಡುತ್ತಿದ್ದಾರೆ.

ಕೆರೆಗಳಲ್ಲಿ ಉಕ್ಕಿ ಹರಿದ ನೀರು:ನಗರದ ಹೊರವಲಯದಲ್ಲಿರುವ ರೇನ್‌ಬೋ ಬಡಾವಣೆಯ ಸುತ್ತಮುತ್ತಲಿನ ವಿವಿಧ ಕೆರೆಗಳು ತುಂಬಿ ಉಕ್ಕಿ ಹರಿದು ಬರುತ್ತಿದೆ. ಪಕ್ಕದಲ್ಲಿದ್ದ ಗೋಡೆ ಕುಸಿದ ಪರಿಣಾಮ ಕಳೆದ ಒಂದೂವರೆ ತಿಂಗಳಲ್ಲಿ 3ನೇ ಬಾರಿ ನೀರು ಬಡಾವಣೆಯೊಳಗೆ ನುಗ್ಗುತ್ತಿದೆ. ಇಲ್ಲಿನ ನಿವಾಸಿಗಳಿಗೆ ಸಂಪರ್ಕ ರಸ್ತೆ ಕಡಿತಗೊಂಡಿದೆ. ರಸ್ತೆಯಲ್ಲಿ 4.5 ಅಡಿ ನೀರು ಹರಿಯುತ್ತಿದೆ. ಜನರು ಓಡಾಡಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆ. ಅಗ್ನಿಶಾಮಕ ದಳ, ಎನ್​ಡಿಆರ್​ಎಫ್​ ಮತ್ತು ನಾಗರಿಕ ರಕ್ಷಣಾ ಪಡೆಗಳ ತಂಡಗಳು ನೀರಿನಲ್ಲಿ ಸಿಲುಕಿದ್ದ ನಿವಾಸಿಗಳನ್ನು ರಕ್ಷಣೆ ಮಾಡುತ್ತಿವೆ. ಇನ್ನು ಅಗತ್ಯ ಸಾಮಗ್ರಿಗಳನ್ನು ತರಲು ಹೊರ ಹೋಗುವವರಿಗೆ ಮತ್ತು ಬೇರಡೆಯಿಂದ ಬಡಾವಣೆ ಒಳ ಹೋಗುವವರಿಗೆ ಬೋಟ್‌ಗಳಲ್ಲಿ ಹೋಗಲು ಅವಕಾಶ ಮಾಡಿಕೊಡಲಾಗಿದೆ.

ಕಡಿಮೆ ಪಂಪ್ ಮಾಡುವ ಸಾಮರ್ಥ್ಯ:ಪಾಲಿಕೆಯಿಂದ ರೇನ್‌ಬೋ ಬಡಾವಣೆಯಲ್ಲಿ ನಿಂತಿದ್ದ ನೀರನ್ನು ಹೊರಹಾಕಲು ತಾತ್ಕಾಲಿಕ ಪಂಪ್ ಅಳವಡಿಕೆ ಮಾಡಲಾಗಿದೆ. ಆದರೆ, ಈ ಪಂಪ್‌ನ ಸಾಮರ್ಥ್ಯ ಕಡಿಮೆಯಿದೆ. ಹರಿದುಬರುವ ನೀರನ್ನು ಹೊರಹಾಕಲು ಸಾಧ್ಯವಾಗುತ್ತಿಲ್ಲ. ಪ್ರತಿ ಬಾರಿ ಮಳೆ ಬಂದಾಗಲೂ ಪ್ರವಾಹ ಉಂಟಾಗುತ್ತಿದೆ.

ನಗರದಲ್ಲಿ ಟ್ರಾಫಿಕ್ ಜಾಮ್:ಬೆಳ್ಳಂದೂರು ರಸ್ತೆಯಲ್ಲಿ ಮಳೆ ನೀರು ತಗ್ಗಿಲ್ಲ. ರಸ್ತೆಯಲ್ಲಿ 1.5 ಅಡಿಯಿಂದ 2 ಅಡಿ ನೀರು ನಿಂತಿದ್ದು, ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ರಸ್ತೆಯ ಒಂದು ಅಂಚಿನಲ್ಲಿ ಮಾತ್ರ ಸಾಲಾಗಿ ವಾಹನಗಳು ಹೋಗುತ್ತಿರುವುದರಿಂದ ರಸ್ತೆಯಲ್ಲಿ ಕಿಲೋ ಮೀಟರ್‌ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿದೆ. ಸರ್ಜಾಪುರ ರಸ್ತೆಯು ಒಂದೇ ತಿಂಗಳಲ್ಲಿ 3ನೇ ಬಾರಿಗೆ ಕೆರೆಯಂತಾಗಿದೆ. ರಸ್ತೆಯಲ್ಲಿ ನೀರು ಹರಿಯಲು ಸಮರ್ಪಕ ವ್ಯವಸ್ಥೆ ಇಲ್ಲದೇ ವಾಹನ ಸವಾರರು ಟ್ರಾಫಿಕ್ ಕಿರಿಕಿರಿಯಿಂದ ಪಾಲಿಕೆ ಅಧಿಕಾರಿಗಳಿಗೆ ಛೀಮಾರಿ ಹಾಕುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬೆಳ್ಳಂದೂರು, ಸರ್ಜಾಪುರ ರಸ್ತೆಗಳಲ್ಲಿನ ವೀಡಿಯೋ ಹಂಚಿಕೊಂಡು ಸ್ಥಳೀಯ ನಿವಾಸಿಗಳು ಸರ್ಕಾರ ಕಣ್ಣು ಮುಚ್ಚಿಕೊಂಡಿದೆಯೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಪಾರ್ಟ್‌ಮೆಂಟ್‌ಗಳು ಜಲಾವೃತ:ಮಹದೇವಪುರ ವಿಧಾನಸಭಾ ಕ್ಷೇತ್ರದ ನಲ್ಲೂರಹಳ್ಳಿಯಲ್ಲಿ 10ಕ್ಕೂ ಹೆಚ್ಚು ಅಪಾರ್ಟ್‌ಮೆಂಟ್‌ಗಳು ಜಲಾವೃತಗೊಂಡಿವೆ. ರಸ್ತೆಗಳ ಬದಿ ನಿಲ್ಲಿಸಲಾಗಿದ್ದ 100ಕ್ಕೂ ಹೆಚ್ಚು ಬೈಕ್‌ಗಳು, ಕಾರುಗಳು ನೀರಿನಲ್ಲಿ ಮುಳುಗಿವೆ. ರಸ್ತೆಗಳಲ್ಲಿ 3 ರಿಂದ 4 ಅಡಿ ನೀರು ನಿಂತಿದ್ದರಿಂದ ಮನೆಯಿಂದ ಹೊರಬರಲೂ ಸಮಸ್ಯೆಯಾಗಿದೆ. ಪಾಲಿಕೆ ಮತ್ತು ಜಲಮಂಡಳಿ ಸಿಬ್ಬಂದಿ ಸ್ಥಳ ಪರಿಶೀಲಿಸಿ ತುರ್ತು ಕಾರ್ಯಕ್ಕೆ ಹೊರಗೆ ಹೋಗುವವರಿಗೆ ಟ್ರ್ಯಾಕ್ಟರ್‌ನಲ್ಲಿ ಹೋಗಲು ವ್ಯವಸ್ಥೆ ಮಾಡಿದ್ದಾರೆ. ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. ವೃದ್ಧರು ಮತ್ತು ಮಕ್ಕಳನ್ನು ಬೋಟ್ ಮೂಲಕ ಬೇರೆಡೆ ಸ್ಥಳಾಂತರ ಮಾಡಲಾಗುತ್ತಿದೆ. ಜಲಮಂಡಳಿ ಸಿಬ್ಬಂದಿ ಪಂಪ್ ಅಳವಡಿಸಿ ನೀರು ಹೊರಹಾಕಿದ್ದಾರೆ.

3 ಕೆರೆ ಕೋಡಿ ಒಡೆದು ವಿಪ್ರೋ ಮುಖ್ಯ ಕಚೇರಿಗೆ ನೀರು: ಸರ್ಜಾಪುರ ರಸ್ತೆಯ ಇಕ್ಕೆಲಗಳಲ್ಲಿರುವ ಹಾಲನಾಯಕನಹಳ್ಳಿ, ಸಿದ್ದಾಪುರ ಮತ್ತು ಚೂಡಸಂದ್ರ ಕೆರೆಗಳು ಕೋಡಿ ಹೋದ ಪರಿಣಾಮ ವಿಪ್ರೋ ಕಂಪನಿ ಮುಖ್ಯ ಕಚೇರಿಗೆ ನೀರು ನುಗ್ಗುವ ಆತಂಕ ಎದುರಾಗಿದೆ. ನಗರದಲ್ಲಿ ಮೊದಲ ಬಾರಿಗೆ ಸರ್ಜಾಪುರ ರಸ್ತೆಯಲ್ಲಿರುವ ಮತ್ತೊಂದು ಬಡಾವಣೆ ಸನ್ನಿ ಬ್ರೂಕ್ಸ್ ಲೇಔಟ್ ಮುಳುಗಡೆಯಾಗಿದೆ. ನಿವಾಸಿಗಳು ಟ್ರ್ಯಾಕ್ಟರ್ ಮೂಲಕ ಸಂಚಾರ ಮಾಡುವಂತಾಗಿದೆ. ಇದರ ನಡುವೆ ಮಳೆ ಈಗಲೂ ಸುರಿಯುತ್ತಿದ್ದು ನಗರ ನಿವಾಸಿಗರಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ.

Last Updated : Aug 31, 2022, 7:02 PM IST

ABOUT THE AUTHOR

...view details