ಕರ್ನಾಟಕ

karnataka

ETV Bharat / state

ಹಿರಿಯ ಕೈ ನಾಯಕರೊಂದಿಗೆ ಡಿಕೆಶಿ ನಿರಂತರ ಚರ್ಚೆ; ಚುನಾವಣೆಗೆ ಕಾರ್ಯತಂತ್ರ ರಚನೆ - ETv Bharat kannada news

ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಪಕ್ಷವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಡಿ.ಕೆ.ಶಿವಕುಮಾರ್ ಅವರು ಹಿರಿಯ ನಾಯಕರೊಂದಿಗೆ ಸಮಾಲೋಚನೆಯಲ್ಲಿ ತೊಡಗಿದ್ದಾರೆ.

Discussing with senior leaders, D.K. Shivakumar
ಹಿರಿಯ ಕೈ ನಾಯಕರ ಜತೆ ಚರ್ಚಿಸುತ್ತಿರುವ ಡಿ.ಕೆ. ಶಿವಕುಮಾರ್

By

Published : Dec 27, 2022, 6:54 PM IST

Updated : Dec 27, 2022, 7:02 PM IST

ಬೆಂಗಳೂರು :ದೆಹಲಿಯಿಂದ ವಾಪಸಾದ ಬಳಿಕ ನಿರಂತರವಾಗಿ ಹಿರಿಯ ಕಾಂಗ್ರೆಸ್ ನಾಯಕರನ್ನು ವಿಶ್ವಾಸಕ್ಕೆ ಪಡೆದು ಚರ್ಚಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಚುನಾವಣೆಗೆ ಭರ್ಜರಿಯಾಗಿಯೇ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಕಳೆದ ಕೆಲ ದಿನ ಹಿಂದೆ ದೆಹಲಿಗೆ ರಾಜ್ಯ ಕಾಂಗ್ರೆಸ್ ನಾಯಕರು ಭೇಟಿ ನೀಡಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜತೆ ಸಮಾಲೋಚಿಸಿ ಬಂದಿದ್ದರು.

ಮುಂಬರುವ ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕಾರ್ಯತಂತ್ರ ಕುರಿತು ರಾಷ್ಟ್ರ ರಾಜಧಾನಿಯಲ್ಲಿ ಸಮಾಲೋಚಿಸಿದ್ದರು. ಎಲ್ಲಾ ನಾಯಕರು ಬಂದ ಬಳಿಕವೂ ಎರಡು ದಿನ ದೆಹಲಿಯಲ್ಲೇ ಬೀಡು ಬಿಟ್ಟಿದ್ದ ಡಿಕೆಶಿ, ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್​ ಸಿಂಗ್ ಸುರ್ಜೇವಾಲಾ ಜತೆ ಸಮಾಲೋಚಿಸಿ ಹಿಂತಿರುಗಿದ್ದರು.

ದೆಹಲಿಯಲ್ಲಿ ಡಿಕೆಶಿಗೆ ರಾಜ್ಯದಲ್ಲಿ ಹಿರಿಯ ಕಾಂಗ್ರೆಸ್ ನಾಯಕರನ್ನು ವಿಶ್ವಾಸಕ್ಕೆ ಪಡೆದು, ಸಮಾಲೋಚಿಸಿ, ವಿಧಾನಸಭೆ ಚುನಾವಣೆ ಗೆಲ್ಲುವ ಕಾರ್ಯತಂತ್ರ ಹೆಣೆಯಲು ಸಲಹೆ ನೀಡಿದ್ದಾರೆ. ಟಿಕೆಟ್ ಹಂಚಿಕೆ, ಗೆಲುವಿನ ಸಾಧ್ಯತೆ ಇರುವ ಕ್ಷೇತ್ರಗಳು, ಪ್ರಚಾರ, ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆಯುವುದೂ ಸೇರಿದಂತೆ ಹಲವು ಸಲಹೆಗಳನ್ನು ಪಡೆಯುವಂತೆ ಸೂಚಿಸಿ ಕಳುಹಿಸಿದ್ದಾರೆ. ಅದಕ್ಕೆ ಪೂರಕವಾಗಿ ಡಿಕೆಶಿ, ಹಿರಿಯರನ್ನು ವಿಶ್ವಾಸಕ್ಕೆ ಪಡೆಯುವ ಯತ್ನಕ್ಕೆ ಮುಂದಾಗಿದ್ದಾರೆ.

ಇದರ ಬೆನ್ನಲ್ಲೇ ಇಂದು ಮಾಜಿ ಸಚಿವ ಎಚ್.ಕೆ.ಪಾಟೀಲ್, ಮಾಜಿ ಶಾಸಕ ಜಿ.ಎಸ್.ಪಾಟೀಲ್, ಎಂಎಲ್​ಸಿಗಳಾದ ದಿನೇಶ್ ಗೂಳಿಗೌಡ, ಮಧು ಮಾದೇಗೌಡ, ಪ್ರಕಾಶ್ ಕೋಳಿವಾಡ ಅವರು ಬೆಳಗಾವಿಯ ಖಾಸಗಿ ಹೋಟೆಲ್​ನಲ್ಲಿ ಡಿಕೆಶಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.

ಹಿರಿ, ಕಿರಿಯ ನಾಯಕರ ಜತೆ ಮಾತನಾಡಿರುವ ಡಿಕೆಶಿ, ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಗೆಲುವಿಗೆ ಕೈಗೊಳ್ಳುವ ತಂತ್ರಗಾರಿಕೆ, ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆಯುವುದು, ಹಳೆ ಮೈಸೂರು ಭಾಗದಲ್ಲಿ ಮತ್ತು ಬಯಲುಸೀಮೆ ಜಿಲ್ಲೆಗಳಲ್ಲಿ ಪಕ್ಷವನ್ನು ಗೆಲ್ಲಿಸಿಕೊಳ್ಳುವ ವಿಚಾರವಾಗಿ ಚರ್ಚಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಪ್ರತಿನಿಧಿಸುವ ಹಾವೇರಿ ಜಿಲ್ಲೆಯಲ್ಲಿ ಗೆಲ್ಲುವುದು ಕಾಂಗ್ರೆಸ್​ಗೆ ಪ್ರತಿಷ್ಠೆಯಾಗಿದೆ. ಅದೇ ರೀತಿ ಶಿವಮೊಗ್ಗದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ ಟಾಂಗ್ ಕೊಡುವುದು ಮುಖ್ಯ ಎಂಬೆಲ್ಲ ಮಾತುಕತೆ ನಡೆದಿದೆ ಎಂದು ಮೂಲಗಳಿಂದು ತಿಳಿದುಬಂದಿದೆ.

ಹಳೆ ಮೈಸೂರು ಭಾಗದಲ್ಲಿ ಅದರಲ್ಲಿಯೂ ಜೆಡಿಎಸ್​ ಪಕ್ಷದ ಭದ್ರಕೋಟೆ ಮಂಡ್ಯ ಜಿಲ್ಲೆಯಲ್ಲಿ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಜೆಡಿಎಸ್​ಗೆ ಬಿಸಿ ಮುಟ್ಟಿಸುವುದೂ ಕಾಂಗ್ರೆಸ್​ಗೆ ಪ್ರಮುಖವಾಗಿದೆ. ಇದರಿಂದ ಹಿರಿಯ ನಾಯಕ ಎಚ್​ಕೆಪಿ ಜತೆ ಕುಳಿತು ಈ ಭಾಗದ ಯುವ ನಾಯಕರನ್ನು ಕರೆಸಿಕೊಂಡು ಡಿಕೆಶಿ ಇಂದು ಮಾತುಕತೆಯಾಗಿದೆ.

ಹಿಂದುಳಿದ ವರ್ಗದ ನಾಯಕರ ಭೇಟಿ:ಎರಡು ದಿನ ಹಿಂದೆ ಬೆಂಗಳೂರಿನಲ್ಲಿ ಡಿ.ಕೆ.ಶಿವಕುಮಾರ್ ಅವರು ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಅವರನ್ನು ಸದಾಶಿವನಗರ ನಿವಾಸದಲ್ಲಿ ಭೇಟಿ ಮಾಡಿದ್ದರು. ಈ ವೇಳೆ ಇಬ್ಬರ ಜೊತೆ ಚುನಾವಣೆ ಬಗ್ಗೆ, ಪಕ್ಷದ ಸಂಘಟನೆ ಕುರಿತು ಸಮಾಲೋಚನೆ ನಡೆಸಿದ್ದಾರೆ. ಪ್ರಮುಖ ಈ ಭೇಟಿ ಸಂದರ್ಭದಲ್ಲಿ 2023ರ ಜ.8 ರಂದು ಚಿತ್ರದುರ್ಗದ ಮುರುಗ ರಾಜೇಂದ್ರ ಕ್ರೀಡಾಂಗಣದಲ್ಲಿ ನಡೆಯುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಐಕ್ಯತಾ ಸಮಾವೇಶ ಯಶಸ್ವಿಗೊಳಿಸಿಕೊಳ್ಳುವ ಸಂಬಂಧ ಚರ್ಚೆ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷದ ಪಾಲಿಗೆ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬರಲು ಪ್ರತಿ ಕಾರ್ಯಕ್ರಮವೂ ಅತ್ಯಂತ ಪ್ರಮುಖವಾಗಿದ್ದು, ಯಶಸ್ಸು ಅನಿವಾರ್ಯವಾಗಿದೆ.

ಇದನ್ನೂ ಓದಿ:ಕೊರೊನಾ ನೆಪದಲ್ಲಿ ಬಿಜೆಪಿಯಿಂದ ಚುನಾವಣೆ ಮುಂದೂಡುವ ಯತ್ನ: ಡಿಕೆಶಿ ಆರೋಪ

Last Updated : Dec 27, 2022, 7:02 PM IST

ABOUT THE AUTHOR

...view details