ಬೆಂಗಳೂರು:ಜೂನ್‌ನಲ್ಲಿ ತೀವ್ರ ಮಳೆ ಅಭಾವ ಎದುರಿಸಿದ್ದ ರಾಜ್ಯವು ಜುಲೈನಲ್ಲಿ ತುಸು ಚೇತರಿಕೆ ಹಾದಿಯತ್ತ ಸಾಗಿದೆ. ಜುಲೈ 1ರಿಂದ ಜುಲೈ 6ರವರೆಗೆ ವಾಡಿಕೆಗಿಂತ ತುಸು ಅಧಿಕವಾಗಿ ವರ್ಷಧಾರೆಯಾಗಿದೆ. ಇದರಿಂದಾಗಿ ಮಳೆ ಕೊರತೆಯಿಂದ ದಯನೀಯ ಸ್ಥಿತಿಗೆ ಒಳಗಾಗಿದ್ದ ರೈತಾಪಿ ವರ್ಗ ನಿಟ್ಟಿಸಿರುವ ಬಿಡುವಂತಾಗಿದೆ.
ಆದರೆ, ಚಾಮರಾಜನಗರ, ಮೈಸೂರು, ಮಂಡ್ಯ, ಬೆಳಗಾವಿ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಮತ್ತು ಕೊಡಗಿನಲ್ಲಿ ಪ್ರಸಕ್ತ ತಿಂಗಳ ಮೊದಲ ವಾರದಲ್ಲಿಯೂ ಮಳೆ ಕೊರತೆ ಮುಂದುವರಿದಿದೆ. ಇದರಿಂದಾಗಿ ಮೈಸೂರು ಭಾಗದಲ್ಲಿ ಕೃಷಿ ಚಟುವಟಿಕೆಗಳ ಮೇಲೆ ಇನ್ನಷ್ಟು ಪರಿಣಾಮ ಬೀರಿದಂತಾಗಿದೆ.
ಕರಾವಳಿ ಭಾಗದಲ್ಲಿ ಗುರುವಾರವೂ ವರುರ್ಣಾಭಟ ಮುಂದುವರಿದಿದ್ದು, ಉಡುಪಿ ಜಿಲ್ಲಾದ್ಯಂತ ಸರಾಸರಿ 200 ಮಿಮೀ ಅಧಿಕ ಮಳೆ ಸುರಿದಿದೆ. ಕೊಡಗು, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕಡದಲ್ಲಿ ಜುಲೈ 7ರಂದು ಅತಿ ಹೆಚ್ಚು ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಈ ಸಂದರ್ಭದಲ್ಲಿ 204 ಮಿಮೀ ಗಿಂತ ಹೆಚ್ಚು ಮಳೆ ಸುರಿಯುವ ಸಾಧ್ಯತೆ ಇದೆ. ಮೀನುಗಾರರು ಸಮುದ್ರ ಇಳಿಯದಂತೆ ಹಾಗೂ ಸಮುದ್ರ ತೀರದ ನಿವಾಸಿಗಳು ಎಚ್ಚರಿಕೆಯಿಂದಿರುವಂತೆ ಇಲಾಖೆ ಸಲಹೆ ನೀಡಿದೆ.
ಎಲ್ಲೆಲ್ಲಿ ಆರೆಂಜ್ ಮತ್ತು ಯೆಲ್ಲೋ ಅಲರ್ಟ್:ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗದಲ್ಲಿ ಮುಂದಿನ 24 ಗಂಟೆ ಕಾಲ ಭಾರಿ ಮಳೆ ಬೀಳುವ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಇರಲಿದೆ. ಬೆಳಗಾವಿ, ಬೀದರ್, ಹಾವೇರಿ, ಚಿತ್ರದುರ್ಗ, ದಾವಣಗರೆಯ ಜಿಲ್ಲೆಗಳಲ್ಲಿ ಜುಲೈ 7 ರಂದು ಯೆಲ್ಲೋ ಅಲರ್ಟ್ ಇರಲಿದ್ದು, ರಾಜ್ಯದ ಉಳಿದೆಡೆ ಸಾಧಾರಣ ವರ್ಷಧಾರೆಯಾಗಲಿದೆ ಎಂದು ಹವಾಮಾನ ತಜ್ಞ ಎ ಪ್ರಸಾದ್ ಮುನ್ಸೂಚನೆ ನೀಡಿದ್ದಾರೆ.
ಶಾಲ ಕಾಲೇಜುಗಳಿಗೆ ರಜೆ ಘೋಷಣೆ: ಕರಾವಳಿ ಭಾಗದಲ್ಲಿ ಕಳೆದ ಎರಡ್ಮೂರು ದಿನಗಳಿಂದ ಭಾರಿ ಮಳೆ ಸುರಿಯುತ್ತಿದ್ದು ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ಶುಕ್ರವಾರ ರಜೆ ಘೋಷಣೆ ಮಾಡಲಾಗಿದೆ.
ಭಾಗಮಂಡಲದಲ್ಲಿ ಹೆಚ್ಚಾದ ಮಳೆ: ಕೊಡಗು ಜಿಲ್ಲೆಯಲ್ಲಿ ಮಳೆ ಮತ್ತೆ ಚುರುಕುಗೊಂಡಿದೆ. ಬುಧವಾರದಿಂದ ಮಡಿಕೇರಿ, ನಾಪೋಕ್ಲು, ಗಾಳಿಬೀಡು, ವಿರಾಜಪೇಟೆ ಸೇರಿ ವಿವಿಧ ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಕೊಡಗಿನ ಹಲವು ಭಾಗಗಳಲ್ಲಿ ಮಳೆ ಜೊತೆಗೆ ಗಾಳಿಯೂ ಹೆಚ್ಚಾಗಿದ್ದು, ಮರಗಳು ಧರೆಗುರುಳಿವೆ. ಬೋಹಿಕೇರಿ ಮತ್ತು ಕುಶಾಲನಗರಕ್ಕೆ ತೆರಳುವ ರಸ್ತೆಯಲ್ಲಿ ಮರ ಬಿದ್ದಿದ್ದು, ಕೆಲಕಾಲ ರಸ್ತೆ ಸಂಚಾರ ಬಂದ್ ಆಗಿತ್ತು. ಇನ್ನು ಮುಂಗಾರು ಚುರುಕುಗೊಂಡ ಹಿನ್ನೆಲೆ ನಾಳೆ ಶಾಲ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮೂರು ದಿನಗಳಿಂದ ಮಳೆ ನಿರಂತರವಾಗಿ ಸುರಿಯುತ್ತಿದ್ದು ಕಾವೇರಿ ಉಗಮಸ್ಥಾನ ತಲಕಾವೇರಿ ಮತ್ತು ಭಾಗಮಂಡಲದಲ್ಲಿ ಹೆಚ್ಚಾದ ಮಳೆ ಹೆಚ್ಚಾಗಿದೆ.
ಉತ್ತರಕನ್ನಡ ಜಿಲ್ಲೆಯಲ್ಲಿಯೂ ವರುವಾರ್ಭಟ: ಇಲ್ಲಿ ಕೂಡ ಮಳೆ ಮುಂದುವರಿದಿದೆ. ಭಾರಿ ಮಳೆ ಹಿನ್ನೆಲೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದು ಕಾರವಾರದ ಮೂಡಲಮಕ್ಕಿ ಬಳಿ ಸೇತುವೆ ಸಂಪರ್ಕ ಕಳೆದುಕೊಂಡು ಜನ ಸಂಚಾರಕ್ಕೆ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ನಗರದ ಸಮೀಪದ ಬಿಣಗಾ, ಮೂಡಲಮಕ್ಕಿ, ಒಕ್ಕಲಕೇರಿ, ಅರಗಾ ನೌಕಾನೆಲೆಯ ಮುಖ್ಯ ಗೇಟ್ ಬಳಿ ಸಂಪೂರ್ಣ ಜಲಾವೃತವಾಗಿದೆ. ಚರಂಡಿ ನೀರು ಅಪಾಯಕಾರಿಯಾಗಿ ಹರಿಯುತ್ತಿದ್ದು, ಆತಂಕ ಸೃಷ್ಟಿಸಿದೆ. ನಗರದ ಹೈಚರ್ಚ್, ಹಬ್ಬುವಾಡ, ದೋಬಿಘಾಟ್ ರಸ್ತೆಗಳೂ ಕೂಡ ನೀರಿನಿಂದ ಜಲಾವೃತವಾಗಿದೆ. ಬೈತಖೋಲ ಭೂದೇವಿ ಗುಡ್ಡದ ಬಳಿ ನೌಕಾ ಪ್ರದೇಶದಲ್ಲಿ ಸಣ್ಣ ಪ್ರಮಾಣದಲ್ಲಿ ಗುಡ್ಡಕುಸಿತವಾಗಿದೆ. ಬಿಣಗಾದ ಒಕ್ಕಲಕೇರಿಯಲ್ಲಿ ನೀರು ತುಂಬಿಕೊಂಡು ಜನ ಭಯದಲ್ಲಿ ಕಾಲ ಕಳೆಯುವಂತಾಗಿದೆ. ಈಗಗಾಲೇ ಕೆಲ ಮನೆಗಳಿಗೆ ನೀರು ನುಗ್ಗಿದ್ದು ಜನ ಮನೆಯಿಂದ ಹೊರಗೆ ಬರುವುದಕ್ಕೂ ಭಯಪಡುವಂತ ವಾತಾವರಣ ಇದೆ.
ದೇವಿಗೆ ಜಲ ದಿಗ್ಬಂಧನ:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಇಂದು ಮುಂದುವರಿದಿದೆ. ನಾಳೆ ಕೂಡ ಶಾಲಾ-ಕಾಲೇಜು ರಜೆ ಘೋಷಣೆ ಮುಂದುವರೆದಿದೆ. ಮಳೆಯಿಂದ ನಗರದ ಕೊಟ್ಟಾರದಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿ ಭಾರೀ ಅವಾಂತರ ಸೃಷ್ಟಿಯಾಗಿತ್ತು. ಕೆಲ ಮನೆಗಳು ಸಂಪೂರ್ಣ ಜಲಾವೃತಗೊಂಡಿದ್ದು, ಸ್ಥಳೀಯ ಕಾರ್ಪೊರೇಟರ್ ಅನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಇನ್ನೂ ಭಾರಿ ಮಳೆಗೆ ಜಿಲ್ಲೆಯಲ್ಲಿ ಈಗಾಗಲೇ ಇಬ್ಬರು ಸಾವನ್ನಪ್ಪಿದ್ದು, ಇದರಲ್ಲಿ ಒಬ್ಬರ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ವಿತರಿಸಿದ್ದು, ಮತ್ತೊಬ್ಬರ ಕುಟುಂಬಕ್ಕೆ ಪರಿಹಾರ ವಿತರಣೆಯ ಪ್ರಕ್ರಿಯೆ ನಡೆಯುತ್ತಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ಇರುವ ಕುಮಾರಧಾರ ನದಿ ಉಕ್ಕಿ ಹರಿಯುತ್ತಿದ್ದು ಪವಿತ್ರ ಸ್ನಾನ ಘಟ್ಟ ಮುಳುಗಡೆಯಾಗಿದೆ. ಮುಲ್ಕಿಯಲ್ಲಿರುವ ಇತಿಹಾಸ ಪ್ರಸಿದ್ದ ಬಪ್ಪನಾಡು ದೇವಸ್ಥಾನಕ್ಕೂ ನದಿ ನೀರು ನುಗ್ಗಿದ್ದು, ದೇವಿಗೆ ಜಲ ದಿಗ್ಬಂಧನವಾಗಿದೆ.
ಉಡುಪಿಯಲ್ಲಿ ಮೇಘಸ್ಫೋಟ: ಉಡುಪಿಯಲ್ಲಿ ಮೇಘ ಸ್ಫೋಟವಾಗಿದೆ. ಸತತ ಮಳೆಗೆ ಕೃತಕ ನೆರೆ ಸೃಷ್ಟಿಯಾಗಿದೆ. ಬಹುತೇಕ ನದಿಗಳ ಮಟ್ಟ ಏರಿಕೆ ಕಂಡಿದ್ದು ಹಲವೆಡೆ ಹಾನಿ ಸಂಭವಿಸಿದೆ. ಉಡುಪಿ ಆಸುಪಾಸಿನ ಹಲವೆಡೆ ಕೃತಕ ನೆರೆ ಕಾಣಿಸಿಕೊಂಡಿದೆ. ಬೈಲಕೆರೆ, ರಾಜಾಂಗಣ ಪಾರ್ಕಿಂಗ್, ಮೂಡನಿಡಂವೂರು, ಬನ್ನಂಜೆ ಸಹಿತ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಮಳೆಯಿಂದ ಇವತ್ತು ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಿತ್ತು.
ಇನ್ನು ಭಾರೀ ಮಳೆಯಿಂದಾಗಿ ಕಡಲತೀರಗಳಲ್ಲಿ ಬೃಹತ್ ಅಲೆಗಳು ಏಳುತ್ತಿದ್ದು, ಅಲೆಗಳು ರಸ್ತೆಗಳನ್ನು ದಾಟಿ ಮುನ್ನುಗ್ಗುತ್ತಿವೆ. ಮಂಗಳವಾರ ಎಡಮೊಗೆ ಗ್ರಾಮದ ಮನೆಯ ಶೇಷಾದ್ರಿ ಐತಾಳ್ (71) ಎಂಬವರು ತೋಟದೊಳಗೆ ಹಾಕಿಕೊಂಡಿದ್ದ ತಾತ್ಕಾಲಿಕ ಮರದ ಕಾಲುಸಂಕ ದಾಟುವ ವೇಳೆ ಅಕಸ್ಮಿಕವಾಗಿ ಆಯತಪ್ಪಿ ನದಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು ಅವರ ಮೃತದೇಹವನ್ನು ತಡರಾತ್ರಿ ಸುಮಾರಿಗೆ ಮೇಲಕ್ಕೆತ್ತಲಾಗಿದೆ.
ಇದನ್ನೂ ಓದಿ:Monsoon: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಬ್ಬರದ ಮಳೆ: ಸುಬ್ರಹ್ಮಣ್ಯ ಸ್ನಾನಘಟ್ಟ, ಬಪ್ಪನಾಡು ದೇವಸ್ಥಾನ ಜಲಾವೃತ