ಬೆಂಗಳೂರು:ನರ್ಸಿಂಗ್ ಕಾಲೇಜುಗಳಿಗೆ ಅನುಮತಿ ಕೊಟ್ಟಿರುವ ಪ್ರಕರಣದ ಕುರಿತು ತನಿಖೆಗೆ ಸದನ ಸಮಿತಿ ರಚನೆ ಮಾಡುವಂತೆ ವಿಧಾನ ಪರಿಷತ್ತಿನಲ್ಲಿ ಜೆಡಿಎಸ್ ಧರಣಿ ಮುಂದುವರೆಸಿದ್ದು, ಮಾತುಕತೆ ಮೂಲಕ ಮನವೊಲಿಕೆಗೆ ಸಭಾಪತಿ ಪ್ರತಿಪಕ್ಷಗಳ ನಾಯಕರನ್ನು ಆಹ್ವಾನಿಸಿ ಸದನವನ್ನು 10 ನಿಮಿಷ ಮುಂದೂಡಿಕೆ ಮಾಡಿದರು.
ವಿಧಾನ ಪರಿಷತ್ ಕಲಾಪ ಆರಂಭಗೊಳ್ಳುತ್ತಿದ್ದಂತೆ ನರ್ಸಿಂಗ್ ಕಾಲೇಜುಗಳಿಗೆ ಅನುಮತಿ ಕೊಟ್ಟಿರುವ ಕುರಿತು ತನಿಖೆಗೆ ಸದನ ಸಮಿತಿ ರಚನೆ ಮಾಡುವಂತೆ ಜೆಡಿಎಸ್ ಒತ್ತಾಯಿಸಿ ಸದನದ ಬಾವಿಗಿಳಿದು ಜೆಡಿಎಸ್ ಹೋರಾಟ ಆರಂಭಿಸಿತು. ಆಡಳಿತ ಪಕ್ಷದವರೇ ಸಮಿತಿ ಅಧ್ಯಕ್ಷರಾಗಲಿ ನಮ್ಮದೇನು ಅಭ್ಯಂತರವಿಲ್ಲ. ಆದರೆ, ಸದನ ಸಮಿತಿ ಆಗಲೇಬೇಕು. ಇದೊಂದು ಜ್ವಲಂತ ಸಮಸ್ಯೆಯಾಗಿದ್ದು, ಪಕ್ಷಾತೀತವಾಗಿ ಇದರ ತನಿಖೆಗೆ ಎಲ್ಲರೂ ಒಪ್ಪಿದ್ದಾರೆ. ಇದಕ್ಕೆ ಸದನ ಸಮಿತಿ ಆಗಲೇಬೇಕು ಎಂದು ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಸದನ ಸಮಿತಿ ಮಾಡುವುದಿಲ್ಲ. ಈಗಾಗಲೇ ತನಿಖೆ ಮಾಡುತ್ತೇವೆ ಎಂದು ಸರ್ಕಾರ ಹೇಳಿದೆ. ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಕರಣ ಸದನ ಸಮಿತಿ ಮಾಡುವ ಮುನ್ನ ಎರಡು ತನಿಖಾ ವರದಿ ಇತ್ತು. ನಂತರ ಸದನ ಸಮಿತಿ ಮಾಡಲಾಯಿತು. ಈಗ 3 ತಿಂಗಳ ಒಳಗೆ ತನಿಖಾ ವರದಿ ಬರುತ್ತದೆ. ಅಲ್ಲಿಯವರೆಗೆ ಸಹಕಾರ ನೀಡಿ ಧರಣಿ ಹಿಂಪಡೆಯಬೇಕು. ನೀವು ಹೇಳಿದ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ಮಾಡುತ್ತೇವೆ. ಆದರೆ, ಸದನ ಸಮಿತಿ ಮಾಡುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.